ಸೊರಗುತ್ತಿದೆ ಪಶು ವೈದ್ಯಕೀಯ ಸೇವೆ

ಪಶುಸಂಗೋಪನೆ ಇಲಾಖೆ
ಪಶುಸಂಗೋಪನೆ ಇಲಾಖೆ
Published on

ಪ್ರಮುಖ ಮುಖ್ಯಾಂಶಗಳು

  • ಇಲಾಖೆಯಲ್ಲೇ ಹುದ್ದೆಗಳು ಖಾಲಿ
  • ಜಿಲ್ಲೆಯಲ್ಲಿ ಶೇ.70ರಷ್ಟು ಬಾಕಿ
  • ಜಾನುವಾರುಗಳಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ
ಕೆ.ಆರ್.ಪ್ರಸಿನ್ ಹಾಸನ
ಇಡೀ ರಾಜ್ಯದಲ್ಲಿ ಪಶುಸಾಕಣೆ ಹಾಗೂ ಹಾಲು ಉತ್ಪಾದನೆಯಲ್ಲಿ ಹಾಸನ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದರೂ, ಪಶುಗಳಿಗೆ ಅಗತ್ಯವಾದ ವೈದ್ಯಕೀಯ ಸೇವೆ ನೀಡುವ ಪಶುಸಂಗೋಪನಾ ಇಲಾಖೆಯಲ್ಲೇ ಹುದ್ದೆಗಳು ಭಾರಿ ಕೊರತೆ ಎದುರಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಮಂಜೂರಾದ ಹುದ್ದೆಗಳ ಪೈಕಿ ಶೇ.70ರಷ್ಟು ಹುದ್ದೆಗಳು ಖಾಲಿ ಉಳಿದಿದ್ದು, ಪಶು ವೈದ್ಯಕೀಯ ಸೇವೆ ಸಂಪೂರ್ಣ ಸೊರಗುವ ಹಂತಕ್ಕೆ ತಲುಪಿದೆ.
ಜಿಲ್ಲೆಗೆ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಡಿ-ದರ್ಜೆ ನೌಕರರನ್ನು ಒಳಗೊಂಡಂತೆ ಒಟ್ಟು 874 ಹುದ್ದೆಗಳು ಮಂಜೂರಾಗಿವೆ. ಆದರೆ, ಇದುವರೆಗೆ ಸರ್ಕಾರ ಕೇವಲ 301 ಹುದ್ದೆಗಳ ನೇಮಕಕ್ಕೆ ಕ್ರಮ ವಹಿಸಿದ್ದು, ಇನ್ನೂ 573 ಹುದ್ದೆಗಳು ಖಾಲಿ ಉಳಿದಿವೆ. ಈ ಸ್ಥಿತಿಯಲ್ಲಿ ಪಶುಸಂಗೋಪನಾ ಇಲಾಖೆಯ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿವೆ ಎಂಬುದೇ ಪ್ರಶ್ನಾರ್ಥಕವಾಗಿದೆ.
ಜಿಲ್ಲೆಯಲ್ಲಿ 159 ಪಶು ವೈದ್ಯರ ಹುದ್ದೆಗಳಿದ್ದು, ಕೇವಲ 81 ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 78 ಹುದ್ದೆಗಳು ಖಾಲಿ ಉಳಿದಿವೆ. ಇದಕ್ಕೆ ಕಣ್ಣೊರೆಸುವ ತಂತ್ರದಂತೆ ಸರ್ಕಾರ ಕೇವಲ 13 ಪಶು ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದೆ. ನೌಕರರ ಹುದ್ದೆಗಳಲ್ಲೂ ಇದೇ ದುಸ್ಥಿತಿ ಮುಂದುವರಿದಿದ್ದು, ಜಿಲ್ಲೆಯಲ್ಲಿ 334 ನೌಕರರ ಹುದ್ದೆಗಳ ಪೈಕಿ ಕೇವಲ 29 ಮಂದಿ ಕಾಯಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಡಿ-ದರ್ಜೆ ನೌಕರರ ಕೊರತೆಯನ್ನು ತಗ್ಗಿಸಲು ಇತ್ತೀಚೆಗೆ ಉಪ ನಿರ್ದೇಶಕರಾಗಿ ನೇಮಕಗೊಂಡಿರುವ ಡಾ.ರಮೇಶ್ ಅವರ ಪ್ರಯತ್ನದಿಂದ 158 ಡಿ-ದರ್ಜೆ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 213 ಪಶು ವೈದ್ಯಕೀಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಕೇಂದ್ರಗಳಲ್ಲಿ ಶೇ.70ರಷ್ಟು ಹುದ್ದೆಗಳು ಖಾಲಿಯಾಗಿರುವುದರಿಂದ, ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರಕದ ಸ್ಥಿತಿ ನಿರ್ಮಾಣವಾಗಿದೆ. ಪ್ರಾಥಮಿಕ ಪಶು ಆಸ್ಪತ್ರೆಗಳು, ಪಶು ಚಿಕಿತ್ಸಾಲಯಗಳು, ಹೋಬಳಿ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ರೈತರು ಪರದಾಡುವಂತಾಗಿದೆ.
ಪಶು ವೈದ್ಯರ ಕೊರತೆಯಿಂದ ರೋಗಕ್ಕೆ ತುತ್ತಾದ ಹಸು, ಕುರಿ, ಮೇಕೆಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ, ನಾಳೆ ಬನ್ನಿ ಎನ್ನುವ ಪರಿಸ್ಥಿತಿ ಎದುರಾಗಿದೆ. ಹಲವೆಡೆ ಎರಡು-ಮೂರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಒಬ್ಬರೇ ವೈದ್ಯ ನೋಡಿಕೊಳ್ಳಬೇಕಾದ ಸ್ಥಿತಿ ಇದೆ.
ವೈದ್ಯರ ಮೇಲೆ ಕೆಲಸದ ಒತ್ತಡ:
ಎರಡೂರು ಜನರು ಮಾಡಬೇಕಾದ ಕೆಲಸವನ್ನು ಒಬ್ಬರೇ ನಿಭಾಯಿಸಬೇಕಾದ್ದರಿಂದ ಪಶು ವೈದ್ಯರು ಭಾರಿ ಒತ್ತಡ ಅನುಭವಿಸುತ್ತಿದ್ದಾರೆ. ಸಹಾಯಕರು ಇಲ್ಲದ ಕೇಂದ್ರಗಳಲ್ಲಿ ಚಿಕಿತ್ಸೆಗಾಗಿ ಬೇಕಾದ ಎಲ್ಲ ಸಿದ್ಧತೆಗಳನ್ನು ವೈದ್ಯರೇ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಜಾನುವಾರಗಳನ್ನು ಹಿಡಿದುಕೊಳ್ಳಲು ಸಹಾಯಕರಿಲ್ಲದೆ ಚಿಕಿತ್ಸೆ ನೀಡುವಾಗ ವೈದ್ಯರು ಗಾಯಗೊಳ್ಳುವ ಪ್ರಸಂಗಗಳೂ ಎದುರಾಗುತ್ತಿವೆ.
ಜಿಲ್ಲೆಯಲ್ಲಿ 5.61 ಲಕ್ಷ ಜಾನುವಾರುಗಳು
2021ರ ಜಾನುವಾರು ಜನಗಣತಿ ಪ್ರಕಾರ, ಹಾಸನ ಜಿಲ್ಲೆಯಲ್ಲಿ 5.61 ಲಕ್ಷ ಹಸು ಮತ್ತು ಎಮ್ಮೆಗಳನ್ನು ಸಾಕಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಬೆಳಗಾವಿ ಜಿಲ್ಲೆಗೆ ಸಲ್ಲುತ್ತದೆ. ಇದಲ್ಲದೆ, ಜಿಲ್ಲೆಯಲ್ಲಿ 2 ಲಕ್ಷ ಕುರಿ, 1.30 ಲಕ್ಷ ಮೇಕೆ ಹಾಗೂ 23-24 ಲಕ್ಷ ಕೋಳಿಗಳ ಸಾಕಾಣಿಕೆ ನಡೆಯುತ್ತಿದೆ. ಹಾಲು ಉತ್ಪಾದನೆಯಲ್ಲಿ ಹಾಸನ ಹಾಲು ಒಕ್ಕೂಟ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಪ್ರತಿದಿನ 13ರಿಂದ 14 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಬೆಂಗಳೂರು ಹಾಲು ಒಕ್ಕೂಟ ಮೊದಲ ಸ್ಥಾನದಲ್ಲಿದೆ.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಸೇವೆಯಲ್ಲಿ ಯಾವುದೇ ಕೊರತೆಯಾಗಿಲ್ಲ. ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಕರುಳುಬೇನೆ, ಕಾಲುಬಾಯಿ ಜ್ವರ, ಚರ್ಮಗಂಟು ಸೇರಿದಂತೆ ಜಾನುವಾರುಗಳಿಗೆ ತೀವ್ರ ಹಾನಿ ಉಂಟುಮಾಡುವ ಸಾಂಕ್ರಾಮಿಕ ರೋಗಗಳ ವಿರುದ್ಧ ಜಿಲ್ಲೆಯಲ್ಲಿ ಲಸಿಕೆ ನೀಡುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
ಡಾ.ಬಿ.ಕೆ. ರಮೇಶ್, ಉಪ ನಿರ್ದೇಶಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಸನ
ಇತ್ತೀಚೆಗೆ ಕಾಯಿಲೆ ಬಿದ್ದ ನಮ್ಮ ಹಸುವಿಗೆ ಸೂಕ್ತವಾದ ಚಿಕಿತ್ಸೆ ಕೊಟ್ಟಿದ್ದರೆ ಪೂರ್ಣವಾಗಿ ಚೇತರಿಸಿಕೊಳ್ಳುತ್ತಿತ್ತು. ಸರಿಯಾಗಿ ಚಿಕಿತ್ಸೆ ಸಿಗದೆ ಅಸುನೀಗಿತು. ರಾಮನಾಥಪುರ ಪಶು ವೈದ್ಯಾಧಿಕಾರಿಯೂ ತಲೆಕೆಡಿಸಿಕೊಳ್ಳಲಿಲ್ಲ. ಜಾನುವಾರುಗಳನ್ನು ಉಳಿಸಬೇಕು. ಪರಿಹಾರ ದೊರಕಿಸಿಕೊಡಬೇಕು.
ದಿಲೀಪ್, ರುದ್ರಪಟ್ಟಣ ನಿವಾಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net