ಗರ್ಭಾಶಯ ಕೊರಳ ಕ್ಯಾನ್ಸರ್‌ಗೆ ಲಸಿಕೆ ಲಭ್ಯ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಎಚ್.ಪಿ.ವಿ. ಲಸಿಕೆ ಹಾಕುವ ಹಾಗೂ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ಪ್ರೇಮಲತಾ,  ಡಾ. ಎ.ಸಾವಿತ್ರಿ, ಜೆ.ಆರ್.ಕೆಂಚೇಗೌಡ, ಹೇಮಂತ್, ರವಿ ನಾಕಲಗೂಡು ಇದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಎಚ್.ಪಿ.ವಿ. ಲಸಿಕೆ ಹಾಕುವ ಹಾಗೂ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ಪ್ರೇಮಲತಾ, ಡಾ. ಎ.ಸಾವಿತ್ರಿ, ಜೆ.ಆರ್.ಕೆಂಚೇಗೌಡ, ಹೇಮಂತ್, ರವಿ ನಾಕಲಗೂಡು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರನ್ನು ಕಾಪಾಡಲು ವ್ಯಾಕ್ಸಿನ್ ಹಾಕಿಸಿ
  • ಜಿಲ್ಲಾ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರ ಸಂಘದ ಅಧ್ಯಕ್ಷೆ ಡಾ. ಪ್ರೇಮಲತಾ ಸಲಹೆ
  • ಎಚ್.ಪಿ.ವಿ. ಲಸಿಕೆ ಹಾಕುವ ಕಾರ್ಯಕ್ರಮ
ಹಾಸನ: ಗರ್ಭಾಶಯ ಕೊರಳ ಕ್ಯಾನ್ಸರ್‌ನಿಂದ ಮಹಿಳೆಯರನ್ನು ಕಾಪಾಡಲು ವ್ಯಾಕ್ಸಿನ್ ಲಭ್ಯವಿದ್ದು, 9 ರಿಂದ 14 ವರ್ಷದೊಳಗಿನ ಮಕ್ಕಳಿಗೆ ನೀಡುವ ಮೂಲಕ ಕಾಯಿಲೆಯಿಂದ ದೂರವಿರಬಹುದು ಎಂದು ಜಿಲ್ಲಾ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರ ಸಂಘದ ಅಧ್ಯಕ್ಷೆ ಡಾ. ಪ್ರೇಮಲತಾ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ರಾಧಮ್ಮ ಜನ ಸ್ಪಂದನ ದಿವಾಕರ ಸೇವಾ ಪ್ರತಿಷ್ಠಾನ, ಎಚ್‌ಡಿಆರ್ ಹೆಲ್ತ್ ಕೇರ್ ಫೌಂಡೇಷನ್ ಹಾಗೂ ಜಿಲ್ಲಾ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರ ಸಂಘದಿಂದ ಆಯೋಜಿಸಿದ್ದ ಎಚ್.ಪಿ.ವಿ. ಲಸಿಕೆ ಹಾಕುವ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮೂರು ಸಾವಿರ ಮಕ್ಕಳಿಗೆ ಎಚ್.ಪಿ.ವಿ. ಲಸಿಕೆ ಹಾಕಲಾಗಿದೆ. ಗರ್ಭಾಶಯ ಕೊರಳ ಕ್ಯಾನ್ಸರ್ ಚಿಕಿತ್ಸೆಗಾಗಿ ಜನರು ವೈದ್ಯರ ಬಳಿ ಬರುವುದಿಲ್ಲ. ಒಂದು ವೇಳೆ ಬಂದರೂ ಲಸಿಕೆಗೆ ಖರ್ಚಾಗುವ ದುಡ್ಡು ಎಷ್ಟು ಎಂದು ಮೊದಲೇ ಕೇಳುತ್ತಾರೆ. ಈ ರೀತಿಯ ನಿರ್ಲಕ್ಷ್ಯದಿಂದ ಲಸಿಕೆ ಪಡೆಯುತ್ತಿರುವವರ ಸಂಖ್ಯೆ ದೇಶದಲ್ಲಿ ಶೇ. 3ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದರು.
ವಿದೇಶಗಳಲ್ಲಿ ಈ ಕಾಯಿಲೆ ಕುರಿತು ಎಚ್ಚರಿಕೆ ವಹಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಇನ್ನಷ್ಟು ಕೆಲಸಗಳಾಗಬೇಕಿದೆ. ಸರ್ಕಾರವೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ. ಸಾರ್ವತ್ರಿಕವಾಗಿ ಲಸಿಕೆ ನೀಡುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
9 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಆರು ತಿಂಗಳಲ್ಲಿ ಮೂರು ಡೋಸ್ ಲಸಿಕೆ ಹಾಕಬೇಕಾಗುತ್ತದೆ. ಮದುವೆಗಿಂತ ಮೊದಲು ಲಸಿಕೆ ಹಾಕಿಸಿಕೊಂಡರೆ ಪರಿಣಾಮಕಾರಿಯಾಗಿರುತ್ತದೆ. ಸ್ಕ್ರೀನಿಂಗ್ ಹಾಗೂ ಪ್ಯಾಪ್ ಸಿಯರ್ ಪರೀಕ್ಷೆಗೆ ಒಳಪಡುವುದರಿಂದ ಕ್ಯಾನ್ಸರ್ ಲಕ್ಷಣಗಳನ್ನು ಪತ್ತೆ ಹಚ್ಚಬಹುದು. ಎಲ್ಲರ ಆರೋಗ್ಯದಲ್ಲಿ ಈ ಕಾಯಿಲೆಯ ಗುಣ ಲಕ್ಷಣಗಳಿರುತ್ತವೆ. ರೋಗದ 16 ಮತ್ತು 18ನೇ ಜಾತಿ ಶೇ. 80ರಷ್ಟು ಮಹಿಳೆಯರನ್ನು ಬಾಧಿಸುತ್ತದೆ. ಗರ್ಭಾಶಯ ಕ್ಯಾನ್ಸರ್ ಪತ್ತೆಯಾಗಲು 10 ರಿಂದ 15 ವರ್ಷ ಸಮಯ ತೆಗೆದುಕೊಳ್ಳುತ್ತದೆ. ನಿರ್ಲಕ್ಷ್ಯ ವಹಿಸದೆ ಮಹಿಳೆಯರು ನಿಗದಿತ ತಪಾಸಣೆಗೆ ಒಳಪಡಬೇಕೆಂದು ಸಲಹೆ ನೀಡಿದರು.
ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ಎ.ಸಾವಿತ್ರಿ ಮಾತನಾಡಿ, ಈ ಗಂಭೀರ ಕಾಯಿಲೆ ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆಯಾದರೂ ಹರಡುವಿಕೆ ಪ್ರಮಾಣ ಮಹಿಳೆಯರಲ್ಲಿ ಹೆಚ್ಚಿರುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯೇ ಗರ್ಭಾಶಯ ಕೊರಳ ಕ್ಯಾನ್ಸರ್‌ಗೆ ಮೂಲ ಕಾರಣ. ಆದ್ದರಿಂದ ಸಾಕಷ್ಟು ಜಾಗೃತಿ ವಹಿಸಬೇಕು. ದೇಶದಲ್ಲಿ ಒಂದು ವರ್ಷಕ್ಕೆ 1.27 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 79 ಸಾವಿರ ಮಹಿಳೆಯರು ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದರು.
ದೇಶದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಹೆಚ್ಚಿದೆ. ಏನಾದರೂ ನೋವು ಕಾಣಿಸಿಕೊಂಡಾಗ ಮಾತ್ರ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಹೊರ ದೇಶಗಳಲ್ಲಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಕಡ್ಡಾಯವಾಗಿರುವುದರಿಂದ ಎಚ್.ಪಿ.ವಿ. ಲಸಿಕೆಯನ್ನು ಎಲ್ಲರೂ ಕಡ್ಡಾಯವಾಗಿ ಹಾಕಿಸಿಕೊಳ್ಳುತ್ತಾರೆ. ಹೀಗಾಗಿ ಅಲ್ಲಿ ಮರಣ ಪ್ರಮಾಣ ಕಡಿಮೆ ಎಂದರು.
ಪ್ರಕರಣ ಹೆಚ್ಚುವ ಸಾಧ್ಯತೆ:
ಜಿಲ್ಲೆಯಲ್ಲಿ ವಿವಾಹ ಪೂರ್ವ ಗರ್ಭಿಣಿ ಪ್ರಕರಣಗಳು ಹೆಚ್ಚುತ್ತಿದ್ದು ಗರ್ಭಾಶಯ ಕೊರಳ ಕ್ಯಾನ್ಸರ್ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತದೆ. ಪಾಲಕರು ಮಕ್ಕಳ ಮೇಲೆ ಗಮನ ಹರಿಸಬೇಕು. ವಿದ್ಯಾಭ್ಯಾಸದ ಹೊರತಾಗಿ ಮಕ್ಕಳು ಅನ್ಯ ಚಟುವಟಿಕೆಗಳಲ್ಲಿ ತೊಡಗದಂತೆ ನಿಗಾ ವಹಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಮಾತನಾಡಿ, ಎಚ್.ಪಿ.ವಿ. ಲಸಿಕೆಗೆ ಹೆಚ್ಚು ಹಣ ಖರ್ಚಾಗುತ್ತದೆಂದು ಪಾಲಕರು ಮಕ್ಕಳಿಗೆ ಲಸಿಕೆ ನೀಡಲು ಹಿಂದೇಟು ಹಾಕುತ್ತಾರೆ. ಆರೋಗ್ಯಕ್ಕಿಂತ ಹಣ ಮುಖ್ಯವಲ್ಲ ಎಂಬ ಅರಿವು ಮೂಡಬೇಕು. ರಾಧಮ್ಮ ಜನ ಸ್ಪಂದನ ಸಂಸ್ಥೆಯು ಪತ್ರಕರ್ತರ ಮಕ್ಕಳಿಗೆ ಉಚಿತವಾಗಿ ಲಸಿಕೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಸಂಸ್ಥೆಯ ಹೇಮಂತ್ ಅವರ ತಾಯಿ ಹೆಸರಿನಲ್ಲಿ ಬಡಮಕ್ಕಳಿಗೆ ಪುರಸ್ಕಾರ ಸೇರಿ ಅನೇಕ ಸಮಾಜಪರ ಕೆಲಸಗಳ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ ಎಂದು ಹೇಳಿದರು.
ರಾಧಮ್ಮ ಜನ ಸ್ಪಂದನ ಸಂಸ್ಥೆ ಮುಖ್ಯಸ್ಥ ಹೇಮಂತ್ ಮಾತನಾಡಿ, ಗ್ರಾಮೀಣ ಪ್ರದೇಶದ ಅನೇಕರಿಗೆ ಕ್ಯಾನ್ಸರ್ ಬಗ್ಗೆ ಮಾಹಿತಿಯೇ ಇಲ್ಲ. 30 ರಿಂದ 35 ವಯಸ್ಸಿಗೆ ಮಹಿಳೆಯರು ಕಾಯಿಲೆಯಿಂದ ಸಾವಿಗೀಡಾಗುತ್ತಿರುವುದು ವಿಷಾದದ ಸಂಗತಿ. ಸರ್ಕಾರವೇ ಮುತುವರ್ಜಿ ವಹಿಸಿ ರಾಜ್ಯಾದ್ಯಂತ ಲಸಿಕೆ ನೀಡುವ ಯೋಜನೆ ಘೋಷಿಸಬೇಕೆಂದು ಆಗ್ರಹಿಸಿದರು.
ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ರವಿ ನಾಕಲಗೂಡು, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಚೈತ್ರಾ ನಾಯಕರಹಳ್ಳಿ, ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಜರಿದ್ದರು. ನಗರದ ಪತ್ರಕರ್ತರ ಹೆಣ್ಣು ಮಕ್ಕಳಿಗೆ ಎಚ್.ಪಿ.ವಿ. ಲಸಿಕೆ ನೀಡಲಾಯಿತು.
ಚಿತ್ರ: 4ಎಚ್‌ಎಸ್‌ಎನ್5: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಎಚ್.ಪಿ.ವಿ. ಲಸಿಕೆ ಹಾಕುವ ಹಾಗೂ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ. ಪ್ರೇಮಲತಾ, ಡಾ. ಎ.ಸಾವಿತ್ರಿ, ಜೆ.ಆರ್.ಕೆಂಚೇಗೌಡ, ಹೇಮಂತ್, ರವಿ ನಾಕಲಗೂಡು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net