ಉತ್ತಮ ಇಳುವರಿಗೆ ಗುಣಮಟ್ಟದ ಗೊಬ್ಬರ ಬಳಸಿ

ಬೇಲೂರು ತಾಲೂಕಿನ ದೊಡ್ಡಕೋಡಿಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಸುರೇಶ್ ದ್ವಿದಳ ಧಾನ್ಯ ಬಿತ್ತನೆ ಬೀಜ ವಿತರಿಸಿದರು.  ಹುಲ್ಲಣ್ಣಗೌಡ,  ಕಾಂತರಾಜು, ಕಾರ್ತಿಕ್, ಹೇಮಂತ್ ಕುಮಾರ್ ಇತರರಿದ್ದರು.
ಬೇಲೂರು ತಾಲೂಕಿನ ದೊಡ್ಡಕೋಡಿಹಳ್ಳಿಯಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಸುರೇಶ್ ದ್ವಿದಳ ಧಾನ್ಯ ಬಿತ್ತನೆ ಬೀಜ ವಿತರಿಸಿದರು. ಹುಲ್ಲಣ್ಣಗೌಡ, ಕಾಂತರಾಜು, ಕಾರ್ತಿಕ್, ಹೇಮಂತ್ ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್ ಸಲಹೆ
  • ಅಲಸಂದೆ ಬೆಳೆ ಪ್ರಾತ್ಯಕ್ಷಿಕೆ, ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ
ಬೇಲೂರು: ರೈತರ ಅಭಿವೃದ್ಧಿ ಹಾಗೂ ಉತ್ತಮ ಬೆಳೆ ಬೆಳೆಯಲು ಕೇಂದ್ರ ಪುರಸ್ಕೃತ ಯೋಜನೆಯಡಿ ಸರ್ಕಾರ ಅಲಸಂದೆ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ವಿತರಿಸುತ್ತಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ದೊಡ್ಡಕೋಡಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ 2026-27ನೇ ಸಾಲಿನ ದ್ವಿದಳ ಧಾನ್ಯಗಳಲ್ಲಿ ಆತ್ಮ ನಿರ್ಭರತೆ ಅಭಿಯಾನ ಯೋಜನೆಯಡಿ ದೊಡ್ಡಕೋಡಿಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಗ್ರಾಪಂ ವ್ಯಾಪ್ತಿಯ ರೈತರಿಗೆ ಭಾನುವಾರ ಆಯೋಜಿಸಿದ್ದ ಅಲಸಂದೆ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲ ರೈತರು 3 ತಿಂಗಳ ಬೆಳೆಯನ್ನು ಕೇವಲ 1 ತಿಂಗಳಲ್ಲೇ ಬೆಳೆಯುವುದರಿಂದ ವಿಷ ಉಣ್ಣುವಂತಾಗಿದೆ. ಇದರಿಂದಾಗಿ 100 ವರ್ಷ ಬದುಕುವವರು 3 ವರ್ಷಕ್ಕೆ ಸೀಮಿತವಾಗುತ್ತಿದ್ದಾರೆ. ಇಂದು ರೈತರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ರೈತರಿಗೆ ಸರಿಯಾದ ಬೆಳೆ ಇಲ್ಲ. ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ರೈತರು ಸರ್ಕಾರ ವಿತರಿಸುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ಹಾಗೂ ಗೊಬ್ಬರವನ್ನು ಬಳಸಿ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.
ತಾಲೂಕಿನಲ್ಲಿ ಶೇ.80 ರಷ್ಟು ರೈತರಿದ್ದಾರೆ. ಅವರು ಬೆಳೆದ ಬೆಳೆಗೆ ನಿಖರವಾದ ಬೆಲೆ ಇಲ್ಲ. ಆದ್ದರಿಂದ ರೈತರು ಬೇರೆ ಬೇರೆ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು. ಇತ್ತೀಚೆಗೆ ಅಡಗೂರು-ತಿರುಮನಹಳ್ಳಿ ಭಾಗದಲ್ಲಿ ಆಲಿಕಲ್ಲು ಮಳೆಗೆ ರೈತರು ಬೆಳೆದ ಸಿಹಿ ಕುಂಬಳ ಹಾಳಾಗಿದೆ. ರೈತರು ತಮಗೆ ಹೆಚ್ಚು ಉಪಯುಕ್ತವಾದ ಬೆಳೆ ಬೆಳೆಯಲು ಮುಂದಾಗಬೇಕು. ಅಲ್ಲದೆ ಕೃಷಿ ಇಲಾಖೆಯಿಂದ ಕೇಂದ್ರ ಪುರಸ್ಕೃತ ಯೋಜನೆಯಡಿ ಅಲಸಂದೆ ಬೆಳೆ ಪ್ರಾತ್ಯಕ್ಷಿಕೆ ಹಾಗೂ ಬಿತ್ತನೆ ಬೀಜವನ್ನು ಪಡೆದ ರೈತರು ಬಿತ್ತು ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು ಎಂದರು.
ಕೃಷಿ ಇಲಾಖೆ ಉಪನಿರ್ದೇಶಕ ಬಿ.ಎನ್.ಪ್ರಭಾಕರ್ ಮಾತನಾಡಿ, ವಿದೇಶದಿಂದ ಬಿತ್ತನೆ ಬೀಜಗಳನ್ನು ಆಮದು ಮಾಡಿ ಕೊಳ್ಳುತ್ತಿರುವುದರಿಂದ ದೇಶಕ್ಕೆ ಹೆಚ್ಚು ಹಣ ನಷ್ಟವಾಗುತ್ತಿದೆ. ಆದ್ದರಿಂದ ನಾವೇ ಬಿತ್ತನೆ ಬೀಜ ಉತ್ಪಾದನೆ ಮಾಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂಬ ಉದ್ದೇಶದಿಂದ ಈ ಪ್ರದೇಶಕ್ಕೆ ಅನುಗುಣವಾಗಿ 125 ಜನರಿಗೆ ದ್ವಿದಳ ಧ್ಯಾನ್ಯಗಳನ್ನು ವಿತರಿಸುತ್ತಿದ್ದೇವೆ. ಜತೆಗೆ ಕೆಲ ರೈತರು ಹೆಚ್ಚು ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಆದ್ದರಿಂದ ರೈತರು ಈ ಬಗ್ಗೆ ಚಿಂತಿಸಿ ಗೊಬ್ಬರ ಬಳಸಬೇಕು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹುಲ್ಲಣ್ಣಗೌಡ, ಸಹಾಯಕ ಕೃಷಿ ನಿರ್ದೇಶಕ ಕಾಂತರಾಜು, ತಾಂತ್ರಿಕ ಅಧಿಕಾರಿ ಕಾರ್ತಿಕ್, ಕೃಷಿ ಅಧಿಕಾರಿ ಹೇಮಂತ್ ಕುಮಾರ್, ತಾಂತ್ರಿಕ ವ್ಯವಸ್ಥಾಪಕರಾದ ಲತಾ, ಅನುಷಾ, ಬಸವರಾಜು ಪ್ರಕಾಶ್, ಮಂಜುನಾಥ್, ಧರ್ಮಪ್ಪ ಲಕ್ಷ್ಮೀಶ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net