ಬೇಲೂರು: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದು ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಹೇಳಿದರು.
ಪುರಸಭೆ ಕಚೇರಿಯಲ್ಲಿ ಶುಕ್ರವಾರ ತಾಲೂಕು ಗಾಣಿಗರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಕುಡಿಯುವ ನೀರಿನ ತುರ್ತು ಅವಶ್ಯಕತೆ ಅಥವಾ ಯಾವುದೇ ಸಮಸ್ಯೆಗಳಿದ್ದರೆ ಸಾರ್ವಜನಿಕರು ನೇರವಾಗಿ ಮಾಹಿತಿ ನೀಡಬಹುದು. ಸಮಸ್ಯೆ ಶೀಘ್ರ ಪರಿಹರಿಸಲು ಪುರಸಭೆ ಆಡಳಿತ ಸಿದ್ಧವಿದೆ. ಪ್ರಸ್ತುತ ಪಟ್ಟಣದಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿದಿನವೂ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಲು ಮುಂದೆ ನಡೆಯುವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಎಲ್ಲ ಸದಸ್ಯರ ಸಹಕಾರದೊಂದಿಗೆ 24 ಗಂಟೆಗಳ ನೀರು ಪೂರೈಕೆ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು. ಅಲ್ಲದೆ, ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕು ಗಾಣಿಗರ ಸಂಘದ ಅಧ್ಯಕ್ಷರಾದ ಕಲಾಶ್ರೀ ನಾಗರಾಜ್ ಮಾತನಾಡಿ, ಅಕ್ರಂ ಷರೀಫ್ ಪುರಸಭೆ ಅಧ್ಯಕ್ಷರಾಗಿರುವುದು ಸಂತಸದ ವಿಷಯ. ತಮ್ಮ ಅವಧಿಯಲ್ಲಿ ಪಟ್ಟಣದಲ್ಲಿ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಸಂಘದ ಕಾರ್ಯದರ್ಶಿ ಅನಂತು ಮಾತನಾಡಿ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಜತೆಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಹಾಗೂ ಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಿ ಎಂದರು.
ಗಾಣಿಗರ ಸಂಘದ ಉಪಾಧ್ಯಕ್ಷ ಅಶೋಕ್, ಪುರಸಭೆ ಸದಸ್ಯ ಪ್ರಭಾಕರ್, ಸಂಘದ ಪದಾಧಿಕಾರಿಗಳಾದ ಚಂದ್ರಶೆಟ್ಟಿ, ರಮೇಶ್, ಜಗದೀಶ್, ಸಂಜು, ಯಶವಂತ್ ಇತರರಿದ್ದರು.