ಭಕ್ತಿಯ ಸಮರ್ಪಣೆ ಸಕಲ ಚಿಂತೆಗಳ ನಿವಾರಣೆ

  ಹೆಚ್.ಬಿ. ದೇವಣ್ಣ ಐದನೇ ದಿನದ ಪ್ರವಚನ
ಹೆಚ್.ಬಿ. ದೇವಣ್ಣ ಐದನೇ ದಿನದ ಪ್ರವಚನ
Published on
ಸುತ್ತೂರು: ಭಕ್ತಿಯ ಸಮರ್ಪಣೆಯಿಂದ ಎಲ್ಲ ಚಿಂತೆಗಳ ನಿವಾರಣೆ ಸಾಧ್ಯ ಎಂದು ಹೆಚ್.ಬಿ. ದೇವಣ್ಣನವರು ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರಾವಣಮಾಸದ ಐದನೇ ದಿನದ ಪ್ರವಚನ ನೀಡುತ್ತ ತಿಳಿದರು.
ಕಲ್ಯಾಣದ ಕ್ರಾಂತಿಯ ಕಾಲದಲ್ಲಿದ್ದ ಪ್ರಮುಖ ಶಿವಶರಣರಲ್ಲಿ ಮೊರಟದ ಬಂಕಯ್ಯನವರು ಒಬ್ಬರು. ಪಾಲ್ಕುರಿಕಿ ಸೋಮನಾಥನ ಬಸವ ಪುರಾಣ ಹಾಗೂ ಶಿವಶರಣರ ಚರಿತ್ರೆಗಳಲ್ಲಿ ಬಂಕಯ್ಯನವರ ನಿಷ್ಕಲ್ಮಷ ಭಕ್ತಿ ಮತ್ತು ಶರಣಸೇವೆಯ ಮಹತ್ವವನ್ನು ವಿಶೇಷವಾಗಿ ವರ್ಣಿಸಲಾಗಿದೆ. ಮನೆಗೆ ಬರುವ ಜಂಗಮರನ್ನು ಮತ್ತು ಶಿವಶರಣರನ್ನು ಅತ್ಯಂತ ಶ್ರದ್ಧೆಯಿಂದ ಪೂಜಿಸಿ ಸತ್ಕರಿಸುತ್ತಿದ್ದ ಪರಮ ಭಕ್ತರಾಗಿದ್ದರು. ತಮಗೆ ಎಷ್ಟೇ ಕಷ್ಟಗಳು ಬಂದರು ಶರಣರ ಇಷ್ಟಾರ್ಥಗಳನ್ನು ಈಡೇರಿಸುವುದು ಮತ್ತು ಶಿವಲಿಂಗ ಪೂಜೆಗೆ ಭಂಗ ಬರದಂತೆ ನೋಡಿಕೊಳ್ಳುವುದು ಅವರ ಮುಖ್ಯ ಕಾಯಕವಾಗಿತ್ತು. ಒಮ್ಮೆ ನಡುರಾತ್ರಿಯಲ್ಲಿ ಶಿವಭಕ್ತನೊಬ್ಬ ಬಂಕಯ್ಯನವರ ಮನೆಗೆ ಬಂದು, ತಾನು ಕೈಗೊಂಡಿರುವ ಲಿಂಗವ್ರತದ ಪೂರ್ತಿಗಾಗಿ ಹಸುವಿನ ಹಾಲು ಮತ್ತು ಬಿಲ್ವಪತ್ರೆ ಅಗತ್ಯವಿದೆ ಎಂದು ಕೇಳಿಕೊಳ್ಳುತ್ತಾನೆ. ಮನೆಗೆ ?ಬಂದ ಅತಿಥಿಯು ಜಂಗಮ ಸ್ವರೂಪಿ ಎಂಬುದನ್ನು ಅರಿತ ಬಂಕಯ್ಯನವರು, ಯಾವುದೇ ಹಿಂಜರಿಕೆಯಿಲ್ಲದೆ ತಡರಾತ್ರಿಯಲ್ಲೂ ಕಷ್ಟಪಟ್ಟು ಹಾಲು ಮತ್ತು ಬಿಲ್ವಪತ್ರೆಗಳನ್ನು ತಂದುಕೊಟ್ಟು ಆ ಭಕ್ತನ ವ್ರತ ಪೂರ್ಣಗೊಳ್ಳುವಂತೆ ಸತ್ಕರಿಸುತ್ತಾರೆ. ಅಹಂಕಾರವಿಲ್ಲದೆ, ಶರಣರ ಸೇವೆಯನ್ನೇ ತಮ್ಮ ಮುಕ್ತಿಯ ಮಾರ್ಗವನ್ನಾಗಿ ಮಾಡಿಕೊಂಡ ಶಿವಶರಣರಲ್ಲಿ ?ಬಂಕಯ್ಯನವರು ಒಬ್ಬರಾಗಿದ್ದರು ಎಂದು ತಿಳಿಸಿದರು.
ಶ್ರೀಮತಿ ಕೆ. ಜಿ. ಇಂದಿರಮ್ಮ, ಶ್ರೀಮತಿ ಉಮಾದೇವಿ ಮತ್ತು ಶ್ರೀ ಸೂರ್ಯಕಾಂತ, ಶ್ರೀ ಎಂ. ಮಮತ ಮತ್ತು ಶ್ರೀಮತಿ ಎಂ. ಮೀನಾ ಹಾಗೂ ಶ್ರೀಮತಿ ಎನ್. ತೇಜಸ್ವಿನಿಯವರು ಸೇವಾರ್ಥ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಕ್ತಾದಿಗಳು ಮತ್ತು ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net