ಬೇಲೂರು ಪಟ್ಟಣದ ಕಳಸಿನಕೆರೆ ಏರಿ, ಮೂಡಿಗೆರೆ ರಸ್ತೆಯಲ್ಲಿ ಅಶುಚಿತ್ವ ತಾಂಡವ

ಬೇಲೂರು ಪಟ್ಟಣದ ಕಳಸಿನ ಕೆರೆ ರಸ್ತೆ ಏರಿ ಬದಿಯಲ್ಲಿ ಕಸ ಮತ್ತು ಮಾಂಸದ ತ್ಯಾಜ್ಯ ಸುರಿದಿರುವುದು.
ಬೇಲೂರು ಪಟ್ಟಣದ ಕಳಸಿನ ಕೆರೆ ರಸ್ತೆ ಏರಿ ಬದಿಯಲ್ಲಿ ಕಸ ಮತ್ತು ಮಾಂಸದ ತ್ಯಾಜ್ಯ ಸುರಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪಟ್ಟಣದ ಕಳಸಿನಕೆರೆ ಏರಿ ರಸ್ತೆ ಹಾಗೂ ಮೂಡಿಗೆರೆ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಮುಂಭಾಗದ ರಸ್ತೆ ಬದಿ
  • ಕೋಳಿ, ಕುರಿ ಮಾಂಸದ ತ್ಯಾಜ್ಯ, ಮನೆಯಲ್ಲಿ ಅಳಿದುಳಿದ ವಸ್ತು
ಬೇಲೂರು : ಪಟ್ಟಣದ ಕಳಸಿನಕೆರೆ ಏರಿ ರಸ್ತೆ ಹಾಗೂ ಮೂಡಿಗೆರೆ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಮುಂಭಾಗದ ರಸ್ತೆ ಬದಿ ಸೇರಿದಂತೆ ಇತರ ಸ್ಥಳಗಳಲ್ಲಿ ಕೋಳಿ, ಕುರಿ ಮಾಂಸದ ತ್ಯಾಜ್ಯ, ಮನೆಯಲ್ಲಿ ಅಳಿದುಳಿದ ವಸ್ತುಗಳನ್ನು ಹಾಕುತ್ತಿರುವುದರಿಂದ ಈ ಮಾರ್ಗದಲ್ಲಿ ಜನರು ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಪಟ್ಟಣದಲ್ಲಿದೆ. ಇಲ್ಲಿಗೆ ಬಂದ ಪ್ರವಾಸಿಗರು ದೇಗುಲ ವೀಕ್ಷಿಸಿ ಮೂಡಿಗೆರೆ ರಸ್ತೆ ಮೂಲಕವೇ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂಗಳೂರು, ಕಳಸ-ಹೊರನಾಡು ಸೇರಿದಂತೆ ಇತರ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ಜತೆಗೆ ಪಟ್ಟಣ ಹಾಗೂ ಸಮೀಪದ ಗ್ರಾಮಸ್ಥರು ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ ಇಲ್ಲಿ ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗುವಂತಹ ತ್ಯಾಜ್ಯವನ್ನು ತಂದು ಎಲ್ಲೆಂದರಲ್ಲಿ ಹಾಕುತಿದ್ದಾರೆ. ಇದು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ.
ಕಸವನ್ನು ಎಲ್ಲೆಂದರಲ್ಲಿ ಹಾಕಬಾರದೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗೊಂದು ಘನತ್ಯಾಜ್ಯ ಘಟಕ ನಿರ್ಮಿಸಿ ಆಟೋ ಟಿಪ್ಪರ್‌ಗಳ ಮೂಲಕ ಕಸ ಸಂಗ್ರಹಣೆಗೆ ಮುಂದಾಗಿದೆ. ಆದರೂ ಸಹ ಪಟ್ಟಣದಲ್ಲಿನ ಕೆಲ ಅಂಗಡಿ ಹಾಗೂ ಮಾಂಸದಂಗಡಿಗಳ ಮಾಲೀಕರು ತಮ್ಮಲ್ಲಿ ಸಿಗುವ ತ್ಯಾಜ್ಯವನ್ನೆಲ್ಲ ತಂದು ಹಾಕುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರೊಂದಿಗೆ ಹಳೇ ಮನೆ ರಿಪೇರಿಯ ವಸ್ತುಗಳು, ಮನೆಯಲ್ಲಿ ಉಪಯೋಗಿಸಿದ ತ್ಯಾಜ್ಯವನ್ನೂ ಹಾಕುತ್ತಿದ್ದಾರೆ. ಈ ನುಡವೆ ಕೆಲ ಮಾಂಸದಂಗಡಿ ಮತ್ತು ಇತರ ಅಂಗಡಿಗಳ ಮಾಲೀಕರು ಕೋಳಿ, ಕುರಿ ಸೇರಿದಂತೆ ಇತರ ತ್ಯಾಜ್ಯವನ್ನು ಬೇಲೂರು-ಮೂಡಿಗೆರೆ ರಸ್ತೆಯಲ್ಲಿರುವ ವಿದ್ಯಾವಿಕಾಸ ಪದವಿ ಪೂರ್ವ ಕಾಲೇಜು ಪಕ್ಕದ ಅರಣ್ಯ ಇಲಾಖೆ ಮುಂಭಾಗದ ಹೊಂಡ ಸಮೀಪದ ರಸ್ತೆ ಬಳಿ ಹಾಗೂ ಗೆಂಡೇಹಳ್ಳಿ ರಸ್ತೆಯಲ್ಲಿರುವ ಕಳಸಿನ ಕೆರೆ ಏರಿ ಮೇಲೆ ತಂದು ಹಾಕುತ್ತಿದ್ದಾರೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಉತ್ಪತ್ತಿಗೆ ಕಾರಣವಾಗುತ್ತಿದೆ.
ನಿತ್ಯ ಇದೇ ಮಾರ್ಗವಾಗಿ ಪ್ರಯಾಣಿಸುವ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ತ್ಯಾಜ್ಯದ ರಾಶಿ ಕಣ್ಣಿಗೆ ಬೀಳುತ್ತಿಲ್ಲ. ವಿಶೇಷವೆಂದರೆ ಇಲ್ಲಿನ ತ್ಯಾಜ್ಯ ತಿನ್ನಲು ಬರುವ ನಾಯಿಗಳು ತ್ಯಾಜ್ಯವನ್ನೆಲ್ಲ ರಸ್ತೆಗೆ ಎಳೆದು ಮತ್ತಷ್ಟು ಕಲುಷಿತಗೊಳಿಸುತ್ತಿವೆ. ಇದರಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ತ್ಯಾಜ್ಯ ತಿಂದ ನಾಯಿಗಳು ರಸ್ತೆಯಲ್ಲಿ ಓಡಾಡುವ ಇದ್ಯಾರ್ಥಿಗಳು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರು ಇಲ್ಲಿಗೆ ತ್ಯಾಜ್ಯ ತಂದು ಹಾಕದಂತೆ ಎಚ್ಚರ ವಹಿಸಬೇಕು. ಜತೆಗೆ ತ್ಯಾಜ್ಯ ತಂದು ಹಾಕುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಪುರಸಭೆ ಅಧ್ಯಕ್ಷರು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆಂಬುದು ಸ್ಥಳೀಯರ ಆಗ್ರಹ.
ನಿರ್ದಾಕ್ಷಿಣ್ಯ ಕ್ರಮ ಅಗತ್ಯ: ಪಟ್ಟಣ ಸಮೀಪದ ಪ್ರಸಾಧಿಹಳ್ಳಿ ಗ್ರಾಮ ಸಮೀಪ ಪುರಸಭೆಯಿಂದ ಘನ ತ್ಯಾಜ್ಯ ಘಟಕ ನಿರ್ಮಿಸಿ ಒಣ ಕಸ, ಹಸಿ ಕಸ ಬೇರೆ ಸಂಗ್ರಹಿಸಿ ಗೊಬ್ಬರ ತಯಾರು ಮಾಡಲಾಗುತ್ತಿದೆ. ಜತೆಗೆ ಪ್ರತಿನಿತ್ಯ ಆಟೋ ಟಿಪ್ಪರ್‌ಗಳು ವಿವಿಧ ವಾರ್ಡ್‌ಗಳ ಮನೆಗಳ ಬಾಗಿಲಿಗೆ ಬಂದು ಕಸ ಸಂಗ್ರಹಿಸುತ್ತಿದ್ದರೂ ಸಹ ಕೆಲವರು, ತ್ಯಾಜ್ಯವನ್ನು ತಂದು ಬೇಲೂರು-ಮೂಡಿಗೆರೆ ಹಾಗೂ ಗೆಂಡೇಹಳ್ಳಿ ರಸ್ತೆಯ ಕಳಸಿನ ಕೆರೆ ಏರಿ ಬದಿಯಲ್ಲಿ ಸುರಿಯುವ ಮೂಲಕ ಕಲುಷಿತ ವಾತಾವರಣ ನಿರ್ಮಾಣಕ್ಕೆ ಮುಂದಾಗುತ್ತಿದ್ದು, ಅಂತಹವರ ವಿರುದ್ಧ ಪುರಸಭೆ ಅಧಿಕಾರಿಗಳು ಮತ್ತು ಅಧ್ಯಕ್ಷರು ನಿರ್ದಾಕ್ಷಿಣ್ಯವಾದ ಕ್ರಮ ಕೈಗೊಂಡಾಗ ಮಾತ್ರವೇ ಸ್ವಚ್ಛ ನಗರವಾಗಲು ಸಾಧ್ಯ ಎಂಬುದು ನಾಗರಿಕರ ಅಭಿಪ್ರಾಯ.
ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಬೇಲೂರು ಪಟ್ಟಣದ ಮೂಡಿಗೆರೆ ರಸ್ತೆ ಮತ್ತು ಕಳಸಿನಕೆರೆ ಏರಿ ರಸ್ತೆಯ ಇಕ್ಕೆಲಗಳಲ್ಲಿ ಜನರು ಓಡಾಡುವ ರಸ್ತೆ ಅಕ್ಕಪಕ್ಕದಲ್ಲಿ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ಈ ಭಾಗದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಾಂಸದಂಗಡಿಗಳ ತ್ಯಾಜ್ಯವನ್ನು ನಿರ್ದಿಷ್ಟ ಸ್ಥಳದಲ್ಲಿ ಹಾಕಿ ಸ್ವಚ್ಛತೆ ಕಾಪಾಡುವಂತೆ ಅಂಗಡಿ ಮಾಲೀಕರಿಗೆ ಪುರಸಭೆಯವರು ತಾಕೀತು ಮಾಡಬೇಕು. ಇದಕ್ಕೂ ಬಗ್ಗದಿದ್ದಲ್ಲಿ ಅಂಗಡಿಗಳಿಗೆ ನೀಡಿರುವ ಲೈಸನ್ಸ್ ರದ್ಧು ಪಡಿಸಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಸಂಘಟನೆಯಿಂದ ಹೋರಾಟ ಅನಿವಾರ್ಯ.
ಸೋಮೇಶ್ ಜಿಲ್ಲಾಧ್ಯಕ್ಷ, ಜಯ ಕರ್ನಾಟಕ ಸಂಘಟನೆ
ಪಟ್ಟಣದಲ್ಲಿ ಯಾವುದೇ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಹಾಗೂ ಪಟ್ಟಣದ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಎಲ್ಲೆಲ್ಲಿ ಕಸ ತಂದು ಹಾಕುತ್ತಿದ್ದರೋ ಅಲ್ಲಿ ಪುರಸಭೆಯಿಂದ ಕಸ ಹಾಕದಂತೆ ನಾಮಫಲಕ ಅಳವಡಿಸಿದ್ದೇವೆ. ಕಳಸಿನಕೆರೆ ಮತ್ತು ಮೂಡಿಗೆರೆ ರಸ್ತೆ ಬದಿಯಲ್ಲಿ ಕೆಲವರು ಕತ್ತಲು ಸಮಯದಲ್ಲಿ ಕಸ ಹಾಕುತ್ತಿರುದರಿಂದ ಸಮಸ್ಯೆಯಾಗುತ್ತಿದೆ. ಆದರೂ ನಮ್ಮ ಸಿಬ್ಬಂದಿ ಆಗಿಂದಾಗ್ಗೆ ಕಸ ಸ್ವಚ್ಛಗೊಳಿಸಿದರೂ ಮತ್ತೆ ತಂದು ಹಾಕುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಯಾರು ಕಸ ಹಾಕುತ್ತಾರೋ ಅಂತಹವರ ವಿರುದ್ಧ ಮುಲಾಜಿಲ್ಲದೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುವುದು.
ಬಸವರಾಜ್ ಟೀಕಪ್ಪ ಸಿಗ್ಗಾವಿ ಮುಖ್ಯಾಧಿಕಾರಿ, ಬೇಲೂರು ಪುರಸಭೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net