ಚನ್ನರಾಯಪಟ್ಟಣದ ಹೌಸಿಂಗ್ ಬೋರ್ಡ್ ಬಳಿಯ ಕೈಗಾರಿಕಾ ಪ್ರದೇಶಕ್ಕೆ 19.5 ಲಕ್ಷ ರೂ.ವೆಚ್ಚದಲ್ಲಿ ಯುಜಿ ಕೇಬಲ್ ಅಳವಡಿಕೆ ಕಾರ್ಯಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ರತ್ನ, ಕೃಷ್ಣ, ಹರೀಶ್, ಅಭಿಷೇಕ್, ರಮೇಶ್, ಡಿ.ಸಿ.ನಾಗರಾಜು, ಪ್ರವೀಣ್, ಸ್ಟೀಪನ್, ಶಿವಕುಮಾರ್ ಐಕನಹಳ್ಳಿ, ಬರಗೂರು ಆನಂದ್, ಮೋಹನ್‌ಕುಮಾರ್ ಇತರರು ಇದ್ದರು.
ಚನ್ನರಾಯಪಟ್ಟಣ: ತಾಲೂಕಿನಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಸಲುವಾಗಿ ಅಕ್ರಮ-ಸಕ್ರಮ ಯೋಜನೆಯಡಿ ಏಳೂವರೆ ಸಾವಿರ ಪರಿವರ್ತಕಗಳನ್ನು ಅಳವಡಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಹೌಸಿಂಗ್ ಬೋರ್ಡ್ ಬಳಿಯ ಕೈಗಾರಿಕಾ ಪ್ರದೇಶಕ್ಕೆ 19.5 ಲಕ್ಷ ರೂ.ವೆಚ್ಚದಲ್ಲಿ ಯುಜಿ ಕೇಬಲ್ ಅಳವಡಿಕೆ ಕಾರ್ಯಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಪರಿವರ್ತಕ ಕಾಯಂ ಅಳವಡಿಕೆಗೆ 2 ಕೋಟಿ ರೂ.ವೆಚ್ಚದಲ್ಲಿ ಕಟ್ಟಡಗಳ ನಿರ್ಮಾಣ, ಆದ್ಯತೆ ಮೇರೆಗೆ 25 ಕೋಟಿ ರೂ. ವೆಚ್ಚದಲ್ಲಿ 50 ಲಿಂಕ್ ಲೈನ್ ನಿರ್ಮಾಣ, ಕಲ್ಕೇರೆ ಬಳಿ 220 ಕೆವಿ ರಿಸೀವಿಂಗ್ ಕೇಂದ್ರ ಸ್ಥಾಪಿಸಲಾಗುವುದು. ಮುಂದಿನ ಎರಡು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿ ಆರಂಭವಾಗಲಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯಧನದಡಿ ರೈತರಿಗೆ ಹೆಚ್ಚು ಅನುಕೂಲವಾಗುವ ಸೌರ ವಿದ್ಯುತ್ ಪಡೆಯುವ ಕುಸುಮ್ ಬಿ ಯೋಜನೆಗೆ ತಾಲೂಕಿನಲ್ಲಿ 400 ರೈತರ ಹೆಸರು ನೋಂದಣಿಯಾಗಿದೆ. ನೋಂದಣಿ ಅವಕಾಶವನ್ನು ಮತ್ತಷ್ಟು ದಿನಗಳ ವಿಸ್ತರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಸೌರ ವಿದ್ಯುತ್‌ನಿಂದ ನೀರೆತ್ತುವ ಯೋಜನೆ ಅನುಷ್ಠಾನಕ್ಕೆ 7.5 ಎಚ್.ಪಿ.ಗೆ ರೈತರು 81 ಸಾವಿರ ರೂ. ಹಣ ಕಟ್ಟಿದ್ದಲ್ಲಿ ಸೋಲಾರ್ ಪ್ಯಾನಲ್, ಪೈಪ್ ಸೇರಿ ಅಗತ್ಯ ಸೌಲಭ್ಯವನ್ನು ಇಲಾಖೆ ಒದಗಿಸುತ್ತದೆ ಎಂದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್, ಕೈಗಾರಿಕೆಗಳ ಮಾಲೀಕರಾದ ಡಿ.ಸಿ.ನಾಗರಾಜು, ಇಂಜಿನಿಯರ್ ರತ್ನಾ, ಕೃಷ್ಣ, ಹರೀಶ್, ಎಇ ಅಭಿಷೇಕ್, ಪ್ರವೀಣ್, ಸ್ಟೀಫನ್, ಶಿವಕುಮಾರ್ ಐಕನಹಳ್ಳಿ, ಬರಗೂರು ಆನಂದ್, ಸೆಕ್ಯೂಬ್, ಗುತ್ತಿಗೆದಾರ ಮೋಹನ್‌ಕುಮಾರ್ ಇತರರು ಇದ್ದರು.