ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶ ಸಲ್ಲ

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ  ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಜಿಲ್ಲಾ ನ್ಯಾಯಾಧೀಶೆ ಹೇಮಾವತಿ, ಕಾರ್ಲೇ ಮೊಗಣ್ಣಗೌಡ, ದಾಕ್ಷಾಯಿಣಿ, ಆರ್ ಪಿ ವೆಂಕಟೇಶ್ ಮೂರ್ತಿ, ಪುರುಷೋತ್ತಮ್ ಇತರರಿದ್ದರು.
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಜಿಲ್ಲಾ ನ್ಯಾಯಾಧೀಶೆ ಹೇಮಾವತಿ, ಕಾರ್ಲೇ ಮೊಗಣ್ಣಗೌಡ, ದಾಕ್ಷಾಯಿಣಿ, ಆರ್ ಪಿ ವೆಂಕಟೇಶ್ ಮೂರ್ತಿ, ಪುರುಷೋತ್ತಮ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶ ಸಲ್ಲ
  • ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಹೇಮಾವತಿ ಹೇಳಿಕೆ
  • ಗಿಡ ನೆಡುವ ಕಾರ್ಯಕ್ರಮ
ಹಾಸನ: ಪರಿಸರ ಸಂರಕ್ಷಣೆ ಸರ್ಕಾರದ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅಭಿವೃದ್ಧಿ ಹೆಸರಿನಲ್ಲಿ ದಿನದಿಂದ ದಿನಕ್ಕೆ ಮರಗಳ ನಾಶ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಹೇಮಾವತಿ ಕರೆ ನೀಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ಹಸಿರು ಭೂಮಿ ಪ್ರತಿಷ್ಠಾನದ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಮರಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ, ನಗರೀಕರಣ, ರಸ್ತೆ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಹಲವು ದಶಕಗಳಷ್ಟು ಹಳೆಯ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಅವುಗಳ ಬದಲಿಗೆ ಹೊಸ ಗಿಡಗಳನ್ನು ನೆಟ್ಟು ಬೆಳೆಸುವ ಮನೋಭಾವ ಸಮಾಜದಲ್ಲಿ ಮೂಡಬೇಕಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಮೊಬೈಲ್ ಬಳಕೆಯಲ್ಲೇ ಕಳೆಯುತ್ತಿದ್ದಾರೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವುದು ಒಳ್ಳೆಯದಾದರೂ ಅದರ ದುರುಪಯೋಗದಿಂದ ದೂರವಿರಬೇಕು. ಮೊಬೈಲ್‌ನಲ್ಲಿ ಉತ್ತಮ ವಿಚಾರಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ವಿಶೇಷವಾಗಿ ಯುವಕರು ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯ ಪಾತ್ರವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜವನ್ನು ಉತ್ತಮ ದಿಕ್ಕಿನಲ್ಲಿ ಬೆಳೆಸಲು ಪರಿಸರ ಸಂರಕ್ಷಣೆ ಅತ್ಯಗತ್ಯ ವಾಗಿದ್ದು, ಪ್ರತಿಯೊಬ್ಬರ ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ನೀಡಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕಾರ್ಲೇ ಮೊಗಣ್ಣಗೌಡ ಮಾತನಾಡಿ, ಪ್ರತಿವರ್ಷ ನ್ಯಾಯಾಲಯದ ಆವರಣದಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಗಿಡ ನೆಡುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಸಿಬ್ಬಂದಿ ವಹಿಸಿಕೊಂಡಿದ್ದಾರೆ. ಹೆಚ್ಚು ಮರಗಳು ಬೆಳೆದರೆ ಪರಿಸರ ಹಸಿರಾಗುವುದರ ಜತೆಗೆ ಮಳೆಯ ಪ್ರಮಾಣ ಹೆಚ್ಚಲು ಸಹಕಾರಿಯಾಗುತ್ತದೆ. ಶುದ್ಧ ಗಾಳಿ, ಉತ್ತಮ ವಾತಾವರಣ ಹಾಗೂ ಸುಸ್ಥಿರ ಪರಿಸರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಇಂತಹ ಅಭಿಯಾನಗಳಲ್ಲಿ ಭಾಗವಹಿಸ ಬೇಕೆಂದರು.
ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ದಾಕ್ಷಾಯಿಣಿ, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆರ್. ಪಿ. ವೆಂಕಟೇಶ್ ಮೂರ್ತಿ, ಉಪಾಧ್ಯಕ್ಷ ಪುರುಷೋತ್ತಮ್ ಮತ್ತು ಕಾರ್ಯದರ್ಶಿ ಎಂ.ಬಿ.ಗಿರಿಜಾಂಬಿಕಾ, ಉಪಾಧ್ಯಕ್ಷ ತಿಮ್ಮೇಗೌಡ, ಖಜಾಂಚಿ ಸುಗುಣ ಹಾಗೂ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ವಿವಿಧ ಗಣ್ಯರು ಭಾಗವಹಿಸಿ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net