ಪಾರದರ್ಶಕವಾಗಿ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು

ಬೇಲೂರು ತಾಪಂ ಇಒ ಸತೀಶ್ ಕುಮಾರ್
ಬೇಲೂರು ತಾಪಂ ಇಒ ಸತೀಶ್ ಕುಮಾರ್
Published on
ಬೇಲೂರು: ತಾಲೂಕು ಪಂಚಾಯಿತಿಗೆ ಸೇರಿದ 16 ವಾಣಿಜ್ಯ ಮಳಿಗೆಗಳನ್ನು ಪಾರದರ್ಶಕವಾಗಿ ಬಹಿರಂಗ ಹರಾಜು ಮಾಡುವ ಮೂಲಕ ಪಂಚಾಯಿತಿ ಆದಾಯವನ್ನು ವೃದ್ಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವವಣಾಧಿಕಾರಿ ಸತೀಶ್‌ಕುಮಾರ್ ಹೇಳಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ವಾಣಿಜ್ಯ ಮಳಿಗೆಗಳ ಪೈಕಿ 16 ವಾಣಿಜ್ಯ ಮಳಿಗೆಗಳನ್ನು ಕೆಲ ದಿನಗಳ ಹಿಂದಷ್ಟೇ ಬಹಿರಂಗ ಹರಾಜಿಗೆ ಇಡಲಾಗಿತ್ತು. ಸರ್ಕಾರದ ನಿಯಮಾನುಸಾರ 3 ಮಳಿಗೆಗಳನ್ನು ಪರಿಶಿಷ್ಟ ಜಾತಿಗೆ, 1 ಮಳಿಗೆಯನ್ನು ಪರಿಶಿಷ್ಟ ಪಂಗಡ ಹಾಗೂ 1 ಮಳಿಗೆಯನ್ನು ಅಂಗವಿಕಲರಿಗೆ ಇತರ ಮಳಿಗೆಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿತ್ತು. ಹರಾಜು ಸಂದರ್ಭ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಮಳಿಗೆಯ ಗಾತ್ರ ಮತ್ತು ಸ್ಥಳಕ್ಕೆ ಅನುಗುಣವಾಗಿ ಕನಿಷ್ಠ 11 ಸಾವಿರ ರೂ.ನಿಂದ ಗರಿಷ್ಠ 55,600 ರೂ.ವರೆಗೆ ಪ್ರತಿ ಮಳಿಗೆಗೆ ಮಾಸಿಕ ಬಾಡಿಗೆ ನಿಗದಿಯಾಗಿದೆ. ಈ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಿಂದಾಗಿ ತಾಲೂಕು ಪಂಚಾಯಿತಿಗೆ ಮಾಸಿಕವಾಗಿ 4,40,000 ಹಾಗೂ ವಾರ್ಷಿಕ 62,30,4000 ರೂ. ಬಾಡಿಗೆ ರೂಪದಲ್ಲಿ ಆದಾಯ ಬರಲಿದೆ. ಇದರೊಂದಿಗೆ ತಕ್ಷಣಕ್ಕೆ 54 ಲಕ್ಷ ರೂ. ಮೊತ್ತದ ಠೇವಣಿ ಪಂಚಾಯಿತಿ ಖಾತೆಗೆ ಜಮೆಯಾಗಲಿದೆ. ಉಳಿದ 4 ಮಳಿಗೆಗಳನ್ನು ಶೀಘ್ರ ಮರು ಹರಾಜು ಮಾಡುವ ಮೂಲಕ ತಾಲೂಕು ಪಂಚಾಯಿತಿಯ ಒಟ್ಟು ಆದಾಯವನ್ನು 1 ಕೋಟಿ ರೂ.ಗೆ ಏರಿಸುವ ಗುರಿ ಹೊಂದಲಾಗಿದೆ ಎಂದರು.
ಹರಾಜಿನಲ್ಲಿ ಮಳಿಗೆಗಳನ್ನು ಪಡೆದವರು ಮೇ 15ರೊಳಗೆ ನಿಗದಿಪಡಿಸಿದ ಠೇವಣಿ ಪಾವತಿಸಿ ಒಪ್ಪಂದ ಮಾಡಿಕೊಳ್ಳಬೇಕು. ಹಣ ಪಾವತಿಸುವಲ್ಲಿ ವಿಳಂಬವಾದಲ್ಲಿ ಅಂತಹ ಮಳಿಗೆಗಳನ್ನು ಮರು ಹರಾಜು ಮಾಡಲಾಗುವುದು. ಹರಾಜು ಪ್ರಕ್ರಿಯೆಯು ಶಾಸಕ ಎಚ್.ಕೆ.ಸುರೇಶ್ ಮಾರ್ಗದರ್ಶನ ಮತ್ತು ಸೂಚನೆಯಂತೆ ನಡೆದಿದೆ. ಜಿಲ್ಲೆಯಲ್ಲೇ ಬೇಲೂರು ತಾಲೂಕು ಪಂಚಾಯಿತಿ ಅತಿ ಹೆಚ್ಚು ಆದಾಯ ಗಳಿಸುವ ಪಂಚಾಯಿತಿಯಾಗಿ ಹೊರಹೊಮ್ಮುತ್ತಿದೆ. ಮಳಿಗೆ ಪಡೆದವರು ಪ್ರತಿ ತಿಂಗಳು ಮಾಸಿಕ ಬಾಡಿಗೆಯನ್ನು ಕಚೇರಿಯಲ್ಲಿ ಕಟ್ಟುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕು. ಇನ್ನುಳಿದ ಮಳಿಗೆಗಳ ಅವಧಿ ಮುಗಿದ ನಂತರ ಇದೇ ರೀತಿ ಬಹಿರಂಗ ಹರಾಜು ಮಾಡಲಾಗುವುದು. ಬರುವ ಆದಾಯದಲ್ಲಿ ಹೊಸ ಮಳಿಗೆಗಳನ್ನು ನಿರ್ಮಿಸಿ ಮತ್ತಷ್ಟು ಆದಾಯ ಬರುವಂತೆ ಮಾಡಲಾಗುವುದು. ತಾಲೂಕು ಪಂಚಾಯಿತಿಗೆ ಸೇರಿದ ಆಸ್ತಿಯೂ ತಾಲೂಕಿನ ಬಿಕ್ಕೋಡು ಹಾಗೂ ಚೀಕನಹಳ್ಳಿ, ಹಳೇಬೀಡಿನಲ್ಲೂ ಇದೆ ಎಂದು ಮಾಹಿತಿ ನೀಡಿದರು.
ಒಳಒಪ್ಪಂದದಿಂದ ನಷ್ಟವಾಗಿತ್ತು
ತಾಪಂಗೆ ಸೇರಿದ ವಾಣಿಜ್ಯ ಮಳಿಗೆಗಳು ಈ ಹಿಂದೆ ಆಯ್ಕೆಯಾಗಿ ಬಂದ ಸದಸ್ಯರು, ಆಡಳಿತ ಮಂಡಳಿ, ಮಳಿಗೆ ಬಾಡಿಗೆದಾರರ ಒಳಒಪ್ಪಂದದಿಂದ ಬಾಡಿಗೆ ಹಣ ಕಮ್ಮಿಯಾಗ್ತಿು. ಬಾಡಿಗೆದಾರರು ಅವಧಿ ಮುಗಿದರೂ ಮಳಿಗೆ ಖಾಲಿ ಮಾಡದೆ ಮುಂದೂಡುತ್ತಿದ್ದರು. ಅಧಿಕಾರಿಗಳು ಮಳಿಗೆ ಖಾಲಿ ಮಾಡುವಂತೆ ನೋಟಿಸ್ ಕೊಟ್ಟ ನಂತರ ನ್ಯಾಯಾಲಯದ ಮೊರೆ ಹೋಗಿ ವರ್ಷಗಳ ಕಾಲ ಮುಂದೂಡುತ್ತಲೇ ಇದ್ದರು. ನಂತರ ನ್ಯಾಯಾಲಯದಿಂದ ಮಳಿಗೆ ಖಾಲಿ ಮಾಡುವಂತೆ ಆದೇಶ ಬಂದ ಬಳಿಕ ಅಧಿಕಾರಿಗಳು ಮಳಿಗೆ ಖಾಲಿ ಮಾಡಿಸಲು ಮುಂದಾದ ಸಂದರ್ಭದಲ್ಲೂ ಕಾಣದ ಕೈಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿಸಿ ಮುಂದೂಡುತ್ತಿದ್ದವು. ಆದರೆ, ತಾಲೂಕಿನ ವಿವಿಧ ಸಂಘಟನೆಗಳು ಪ್ರತಿಭಟಿಸಿ ಎಚ್ಚರಿಕೆ ನೀಡಿದ್ದರಿಂದ ಅಧಿಕಾರಿಗಳು ಎಲ್ಲ ಮಳಿಗೆಗಳನ್ನು ಖಾಲಿ ಮಾಡಿಸಿ ಬಹಿರಂಗ ಹರಾಜು ಮಾಡಿಸಿದ್ದರಿಂದ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಬರುವಂತಾಗಿದೆ ಎಂದು ತಾಪಂ ಇಒ ಸತೀಶ್ ಕುಮಾರ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net