ಕಾಡಾನೆ ಉಪಟಳಕ್ಕೆ ಟ್ರಾನ್ಸ್‌ಮೀಟರ್ ಕಡಿವಾಣ

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದಲ್ಲಿ ರಸ್ತೆ ದಾಟುತ್ತಿರುವ ಕಾಡಾನೆಗಳು.
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದಲ್ಲಿ ರಸ್ತೆ ದಾಟುತ್ತಿರುವ ಕಾಡಾನೆಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕಾಡಾನೆ ಉಪಟಳಕ್ಕೆ ಟ್ರಾನ್ಸ್‌ಮೀಟರ್ ಕಡಿವಾಣ
  • ಸ್ವದೇಶಿ ತಂತ್ರಜ್ಞಾನದ ಮೊರೆ ಹೋದ ಅರಣ್ಯ ಇಲಾಖೆ
  • ಆನೆ ಸೆರೆಗೂ ಅನುಕೂಲ
ಹಾಸನ: ಮಲೆನಾಡು ಭಾಗದಲ್ಲಿ ಹೆಚ್ಚಿರುವ ಕಾಡಾನೆಗಳ ಚಲನವಲನ ಅರಿಯಲು ಇಷ್ಟು ದಿನಗಳವರೆಗೆ ರೇಡಿಯೋ ಕಾಲರ್ ಮೊರೆ ಹೋಗುತ್ತಿದ್ದ ಅರಣ್ಯ ಇಲಾಖೆ ಈಗ ಟ್ರಾನ್ಸ್‌ಮೀಟರ್ ಮೊರೆ ಹೋಗಿದೆ.
ರೇಡಿಯೋ ಕಾಲರ್‌ನಿಂದ ಕಾಡಾನೆ ಎಲ್ಲಿದೆ ಎಂಬ ಮಾಹಿತಿ ಮಾತ್ರ ಸಿಗುತ್ತಿತ್ತು. ಆದರೆ, ಆಧುನಿಕವಾಗಿ ಪರಿಚಯಿಸಲ್ಪಟ್ಟಿರುವ ಟ್ರಾನ್ಸ್‌ಮೀಟರ್ ರಿಸೀವರ್ ಅಳಡಿಸಿದರೆ ಕಾಡಾನೆ ಸುತ್ತಲಿನ ಅಂದಾಜು 400 ಮೀಟರ್ ದೂರವನ್ನು ಇದ್ದಲ್ಲಿಯೇ ನೋಡಬಹುದಾಗಿದೆ. ರೆಡಿಯೋ ಕಾಲರ್‌ನ ಫಲಿತಾಂಶವು ಸ್ಯಾಟ್‌ಲೈಟ್ ಮೂಲಕ ಆನ್‌ಲೈನ್ ಪೋರ್ಟಲ್‌ಗೆ ರವಾನೆಯಾಗುತ್ತದೆ. ಜತೆಗೆ ಜಾಗದ ಜತೆಗೆ ಧ್ವನಿಯನ್ನು ಕಳುಹಿಸಿಕೊಡುವುದು ಟ್ರಾನ್ಸ್‌ಮೀಟರ್ ವಿಶೇಷ.
ಸೆರೆ ಕಾರ್ಯಾಚರಣೆ ಸುಲಭ: ಈಗಾಗಲೇ ಎರಡು ಆನೆಗಳಿಗೆ ಪ್ರಾಯೋಗಿಕವಾಗಿ ಟ್ರಾನ್ಸ್‌ಮೀಟರ್ ಹಾಕಲಾಗಿದ್ದು, ಫಲಿತಾಂಶ ನೋಡಿಕೊಂಡು ಎಲ್ಲ ಗಂಡು ಕಾಡಾನೆಗಳಿಗೆ ಅಳವಡಿಸಲು ಚಿಂತನೆ ನಡೆದಿದೆ. ಸದ್ಯ, ಆನೆ ಇರುವ ಜಾಗದಲ್ಲಿ ಸೆರೆ ಕಾರ್ಯಾಚರಣೆಗೆ ಅವಕಾಶ ಇದೆಯೇ, ಕಲ್ಲು ಬಂಡೆ, ನೀರು, ಗಿಡಗಂಟಿಗಳಿರುವ ಜಾಗ ಅಥವಾ ಸಮತಟ್ಟು ಪ್ರದೇಶದಲ್ಲಿ ನಿಂತಿದೆಯೇ ಎಂಬುದನ್ನು ನೂತನ ತಂತ್ರಜ್ಞಾನದಿಂದ ನಿಖರವಾಗಿ ತಿಳಿಯಬಹುದಾಗಿದೆ.
ಜನರ ನೆಮ್ಮದಿಗೆ ಕಸಿದ ಆನೆಗಳು
ಬೇಲೂರು, ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿದೆ. ಕಾಫಿ ತೋಟಗಳನ್ನೇ ಆವಾಸ ಸ್ಥಾನವಾಗಿಸಿಕೊಂಡಿರುವ ಆನೆಗಳು ಯಾವಾಗ ಬೇಕೆಂದಾಗ ರಸ್ತೆಗೆ ಬರುತ್ತವೆ. ಇಂತಹ ಸಮಯದಲ್ಲಿ ವಾಹನ ಸವಾರರು ಸಿಲುಕಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾಡಾನೆಗಳ ಸಂಚಾರದ ವಿಡಿಯೋಗಳು ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮಲೆನಾಡಿನ ಜನರ ಸಮಸ್ಯೆಗೆ ನಿದರ್ಶನವಾಗಿದೆ.
ಹೇಗೆ ಕೆಲಸ ಮಾಡುತ್ತೆ
ಆನೆಯ ಕುತ್ತಿಗೆಗೆ ಅಳವಡಿಸುವ ಕಾಲರ್‌ನಲ್ಲಿ ಜಿಪಿಎಸ್, ವಿಎಚ್‌ಎಫ್ ರೇಡಿಯೋ ಟ್ರಾನ್ಸ್‌ಮೀಟರ್ ಅಳವಡಿಸಲಾಗಿರುತ್ತದೆ. ಪ್ರತಿ ಗಂಟೆಗೊಮ್ಮೆ ಆನೆಯ ಚಲನವಲನಗಳ ಬಗ್ಗೆ ಡೇಟಾ ಸ್ಯಾಟಲೈಟ್ ಮೂಲಕ ಅರಣ್ಯ ಇಲಾಖೆಯ ಸರ್ವರ್‌ಗೆ ರವಾನೆಯಾಗಲಿದೆ. ಫಾರೆಸ್ಟ್ ಸಿಬ್ಬಂದಿ ಹ್ಯಾಂಡ್-ಹೆಲ್ಡ್ ಆಂಟೆನಾ ಮೂಲಕ 5-10 ಕಿಮೀ ವ್ಯಾಪ್ತಿಯಲ್ಲಿ ಆನೆ ಪತ್ತೆ ಮಾಡಬಹುದು. ಜತೆಗೆ ಮೊಬೈಲ್ ಆ್ಯಪ್‌ನಲ್ಲಿ ರಿಯಲ್‌ಟೈಮ್ ಮ್ಯಾಪ್‌ನಲ್ಲಿ ಆನೆಗಳ ಚಲನೆ ಗೊಚರಿಸುವಂತೆ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಆನೆ ಜನವಸತಿ ಪ್ರದೇಶಗಳ ಕಡೆ ಬಂದರೆ ತಕ್ಷಣ ಅಲರ್ಟ್ ಮಾಡುತ್ತದೆ. ಇದಲ್ಲದೆ ವಲಸೆ ಮಾರ್ಗ ಅಧ್ಯಯನ, ಆರೋಗ್ಯ ಮಾನಿಟರಿಂಗ್, ಕಳ್ಳ ಬೇಟೆ ತಡೆಗೂ ಸಹಕಾರಿಯಾಗಲಿದೆ.
ಹಾವಳಿ ತಡೆಗೆ ಅವಿರತ ಶ್ರಮ
ಬೇಲೂರು, ಆಲೂರು, ಸಕಲೇಶಪುರ, ಅರಕಲಗೂಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಒಟ್ಟು 85 ರಿಂದ 90 ಆನೆಗಳಿದ್ದು, ಈ ಪೈಕಿ 30ಕ್ಕೂ ಹೆಚ್ಚು ಆನೆಗಳು ಸಕಲೇಶಪುರ ತಾಲೂಕಿನ ಯಸಳೂರು ಭಾಗದಲ್ಲಿ ಸಂಚರಿಸುತ್ತಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಕಾಡಾನೆ ಹಾಗೂ ಮಾನವ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಶಕ್ತಿ ಮೀರಿ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ 140 ಇಟಿಎಫ್ ಸಿಬ್ಬಂದಿ ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದು, ಆನೆಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ. 54 ಲಕ್ಷ ರೂ. ವೆಚ್ಚದಲ್ಲಿ 3 ಕ್ಯಾಂಪರ್ಸ್‌ ಹಾಗೂ 10 ಬೈಕ್‌ಗಳನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ. ಜತೆಗೆ ಆನೆ ಸಂಚಾರ ಪ್ರದೇಶದ 35 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಆದಾಗ್ಯೂ ಸಂಘರ್ಷಕ್ಕೆ ತಡೆ ಬಿದ್ದಿಲ್ಲ.
3 ವರ್ಷದಲ್ಲಿ 14 ಜನರ ಸಾವು
ಕಾಡಾನೆಗಳ ದಾಳಿಗೆ 2023-24ರಿಂದ 2026-27ರವರೆಗೆ 14 ಜನರು ಮೃತಪಟ್ಟಿದ್ದಾರೆ. ಕಾಡಾನೆಗಳ ಜತೆಗೆ ಕರಡಿ, ಕಾಡುಕೋಣ, ಕಾಡು ಹಂದಿ ಉಪಟಳವು ಮಲೆನಾಡಿನ ಜನರ ನಿದ್ದೆಗೆಡಿಸಿದೆ. ಮೂರು ವರ್ಷಗಳಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಹಾನಿಗೀಡಾದ ಬೆಳೆ ಹಾಗೂ ಮೃತ ಕುಟುಂಬಕ್ಕೆ ಪರಿಹಾರ ಸೇರಿ ರಾಜ್ಯ ಸರ್ಕಾರ 15.16 ಕೋಟಿ ರೂ. ಬಿಡುಗಡೆ ಮಾಡಿದೆ. 2023ರಲ್ಲಿ 4.76 ಕೋಟಿ ರೂ., 2024ರಲ್ಲಿ 4.19 ಕೋಟಿ ರೂ., 2025ರಲ್ಲಿ 6.6 ಕೋಟಿ ರೂ. ಹಾಗೂ ಈ ವರ್ಷ 75 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇನ್ನು 60 ಲಕ್ಷ ರೂ. ಪರಿಹಾರದ ಧನ ಬಾಕಿ ಇದೆ. ಇಷ್ಟು ವರ್ಷಗಳ ಕಾಲ ಪರಿಹಾರ ಮೊತ್ತವನ್ನು ಖಜಾನೆಯಿಂದ ನೇರವಾಗಿ ನೀಡಲಾಗುತ್ತಿತ್ತು. ಇನ್ನು ಮುಂದೆ ಡಿಬಿಟಿ ಮೂಲಕ ಕೊಡುವ ವ್ಯವಸ್ಥೆ ಮಾಡಿಕೊಂಡಿದ್ದು ಫಲಾನುಭವಿಗಳು ಕಚೇರಿಗೆ ಅಲೆದಾಡುವುದು ತಪ್ಪಲಿದೆ. 
ನೂತನ ರೇಡಿಯೋ ಟ್ರಾನ್ಸ್‌ಮೀಟರ್ ಕಾಡಾನೆಗಳ ಸಂಚಾರವನ್ನು ಸುಲಭವಾಗಿ ತಿಳಿಯಲು ಅನುಕೂಲವಾಗುತ್ತದೆ. ಇದು ವಿಎಚ್‌ಎಫ್ ಟೆಕ್ನಾಲಜಿ  ರಿಸಿವರ್ ಮೂಲಕ 400 ಮೀಟರ್ ಅಂತರದಲ್ಲಿ ಆನೆ ಎಲ್ಲಿ ಇದೆ ಎಂಬುದನ್ನು ಅರಿಯಲು ಸಹಕಾರಿಯಾಗಿದೆ. ಈಗ ಎರಡು ಆನೆಗಳಿಗೆ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಫಲಿತಾಂಶ ನೋಡಿಕೊಂಡು ಮುಂದುವರೆಯುತ್ತೇವೆ.
 ಸೌರಭ್ ಕುಮಾರ್
ಡಿಎಫ್‌ಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net