ಹಾಸನ ನಗರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಯಕರ ಶೆಟ್ಟಿ ಇಂದ್ರಾಳಿ, ಎಸ್.ಎನ್.ಪ್ರಕಾಶ್, ಆರ್.ಟಿ.ದ್ಯಾವೇಗೌಡ, ಡಿ.ಪಿ.ಸೋಮೇಗೌಡ, ವಿ.ಎನ್.ರಾಜಣ್ಣ, ಪುಟ್ಟಸ್ವಾಮಿಗೌಡ ಇತರರು ಇದ್ದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯ
ಹಾಸನ: ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಸಿಬ್ಬಂದಿಗೆ ಸಹಕಾರ ಶಿಕ್ಷಣ ತರಬೇತಿ ಅವಶ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಆಶ್ರಯದಲ್ಲಿ ಮೈಸೂರು ವಿಭಾಗದ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಸಹಕಾರ ಕ್ಷೇತ್ರವು ತನ್ನದೇ ಆದ ಛಾಪನ್ನು ಮೂಡಿಸಿ ಮುನ್ನಡೆಯುತ್ತಿದೆ. ಉತ್ತಮ ಸಾಧನೆ ಮಾಡುತ್ತಿರುವುದರಿಂದ ಸಹಕಾರ ಸಂಘಗಳು ಅದರಲ್ಲೂ ಪತ್ತಿನ ಸಹಕಾರ ಸಂಘಗಳ ಏಳಿಗೆಗೆ ದುಡಿಯುತ್ತಿರುವ ಆಡಳಿತ ಮಂಡಳಿ, ಸಿಬ್ಬಂದಿಗೆ ದಿನ ನಿತ್ಯದ ವ್ಯವಹಾರಗಳ ಕುರಿತಂತೆ ಅರಿಯುವುದು, ತರಬೇತಿಗಳಲ್ಲಿ ಬದಲಾವಣೆಗಳ ಕುರಿತು ತಿಳಿದು ಅಭಿವೃದ್ಧಿಗೆ ಪೂರಕವಾಗುವಂತೆ ಕೆಲಸ ನಿರ್ವಹಿಸಬೇಕೆಂದರು.
ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಸ್.ಎನ್.ಪ್ರಕಾಶ್ ಮಾತನಾಡಿ, ಇಂದು ಸಹಕಾರ ಕ್ಷೇತ್ರದಲ್ಲಿ ಪತ್ತಿನ ಸಹಕಾರ ಸಂಘಗಳ ಪಾತ್ರ ದೊಡ್ಡದು. ಕಾರಣ ದಿನನಿತ್ಯ ಸದಸ್ಯರೊಂದಿಗೆ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು, ಅಲ್ಲಿನ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯೇ ಪ್ರಮುಖ ಕಾರಣ. ಹಾಗಾಗಿ ಇಂದಿನ ತರಬೇತಿ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರು ನೀಡುವ ಮಾಹಿತಿಯ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆರ್.ಟಿ. ದ್ಯಾವೇಗೌಡ ಮಾತನಾಡಿ, ಇಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಿಂದ ಹೈಟೆಕ್ ಮಾದರಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನೀಡುತ್ತಿರುವುದು ಸಂತೋಷದ ಸಂಗತಿ. ಶಿಬಿರಾರ್ಥಿಗಳು ಮೈಸೂರು ವಿಭಾಗದ ಎಲ್ಲ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಕಂಡಾಗ ಮಹಾಮಂಡಳದ ಉದ್ದೇಶವಾದ ಸಹಕಾರ ಶಿಕ್ಷಣ ತರಬೇತಿ ಅತ್ಯುನ್ನತ ಮಟ್ಟಕ್ಕೆ ಏರಿದೆ ಎಂದರು.
ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಡಿ.ಪಿ.ಸೋಮೇಗೌಡ, ನಿರ್ದೇಶಕ ವಿ.ಎನ್.ರಾಜಣ್ಣ, ಪುಟ್ಟಸ್ವಾಮಿಗೌಡ, ನಾಗರಾಜು, ಪದ್ಮರಾಜ್, ಪ್ರವೀಣ್, ಸಿದ್ದೇಶ್, ಸೋಮಣ್ಣ , ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಮನ್ವಯಾಧಿಕಾರಿ ಮಲ್ಲಯ್ಯಶೆಟ್ಟಿ ಇತರರು ಇದ್ದರು.