ತಂಬಾಕು ಹರಾಜು ಪ್ರಕ್ರಿಯೆ ಸ್ಥಗಿತ ‘ಬೆಳೆಗಾರರ ಆಕ್ರೋಶ’

ಅರಕಲಗೂಡು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಮಂಗಳವಾರ ನಡೆದ ರೈತರ ಕುಂದುಕೊರತೆ ಸಭೆ ಬಳಿಕ ಬೆಳೆಗಾರರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹರಾಜು ಅಧೀಕ್ಷಕಿ ಸವಿತಾ ಅವರಿಗೆ ಮನವಿ ಸಲ್ಲಿಸಿದರು. ಯೋಗಣ್ಣ, ದೇವರಾಜು, ತಮ್ಮೇಗೌಡ ಇತರರಿದ್ದರು.
ಅರಕಲಗೂಡು ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಮಂಗಳವಾರ ನಡೆದ ರೈತರ ಕುಂದುಕೊರತೆ ಸಭೆ ಬಳಿಕ ಬೆಳೆಗಾರರು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹರಾಜು ಅಧೀಕ್ಷಕಿ ಸವಿತಾ ಅವರಿಗೆ ಮನವಿ ಸಲ್ಲಿಸಿದರು. ಯೋಗಣ್ಣ, ದೇವರಾಜು, ತಮ್ಮೇಗೌಡ ಇತರರಿದ್ದರು.
Published on
ಅರಕಲಗೂಡು:ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ವರ್ತಕರು ಬೆಳೆಗಾರರ ಮೇಲೆ ದಬ್ಬಾಳಿಕೆ ಪ್ರದರ್ಶಿಸುತ್ತಿದ್ದರೂ ಮಂಡಳಿ ಕಣ್ಮುಚ್ಚಿ ಕುಳಿತಿದೆ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಮನಾಥಪುರ ತಂಬಾಕು ಮಾರುಕಟ್ಟೆ ಪ್ರಾಂಗಣದಲ್ಲಿ ಮಂಗಳವಾರ ನಡೆದ ರೈತರ ಕುಂದುಕೊರತೆ ಸಭೆಯಲ್ಲಿ ಹರಾಜು ನಿಲ್ಲಿಸಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿರುವ ವರ್ತಕರ ನಡೆ ಖಂಡನೀಯ. ತಂಬಾಕಿಗೆ ಉತ್ತಮ ಬೆಲೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ. ಈಗ ಸ್ವಹಿತಾಸಕ್ತಿಗಾಗಿ ವರ್ತಕರು ಹರಾಜು ನಡೆಸುವುದನ್ನೇ ನಿಲ್ಲಿಸಿ ದ್ರೋಹ ಎಸಗುತ್ತಿದ್ದಾರೆ ಎಂದು ಬೆಳೆಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ರೈತ ಸಂಘದ ಹಿರಿಯ ಮುಖಂಡ ಯೋಗಣ್ಣ ಮಾತನಾಡಿ, ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಸುಂಕ ಹೆಚ್ಚಿಸಲು ಮುಂದಾಗಿರುವುದನ್ನು ವಿರೋಧಿಸಿ ವರ್ತಕರು ಮಾರುಕಟ್ಟೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಏಕಾಏಕಿ ಹೊಗೆಸೊಪ್ಪು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಬೆಳೆಗಾರರ ಹಿತ ಕಾಯಬೇಕಿದ್ದ ತಂಬಾಕು ಮಂಡಳಿ ಇದ್ದೂ ಇಲ್ಲದ ಸ್ಥಿತಿಗೆ ತಲುಪಿದೆ. ಬೆಲೆಯಲ್ಲಿ ರೈತರಿಗೆ ಅನ್ಯಾಯವಾದಾಗ ನ್ಯಾಯ ದೊರಕಿಸಿಕೊಡಲಾಗದ ಮಂಡಿಕೇರಿ ಹಾಗೂ ವರ್ತಕರು ಬೆಳೆಗಾರರ ಹಿತವನ್ನು ನಿರ್ಲಕ್ಷ್ಯಿಸುತ್ತಾರೆ. ಈಗ ತಮಗೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ವರ್ತಕರು ಹರಾಜು ಪ್ರಕ್ರಿಯೆ ನಿಲ್ಲಿಸಿ ಬೆಳೆಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ವರ್ತಕರ ಷೇರು ಹಾಗೂ ಮುಂಗಡ ಹಣ ಮುಟ್ಟುಗೋಲು ಹಾಕಿ ಬೆಳೆಗಾರರ ನೆರವಿಗೆ ಬರಬೇಕಿದ್ದ ತಂಬಾಕು ಮಂಡಳಿ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿರುವುದು ಖಂಡನಾರ್ಹ. ಫೆ.1ರಿಂದ ಹರಾಜು ಪ್ರಕ್ರಿಯೆ ಪುನಾರಂಭಿಸದಿದ್ದರೆ ಎಲ್ಲ ಪ್ಲಾಟ್ ಫಾರಂಗಳನ್ನು ಬಂದ್ ಮಾಡಿಸಲಾಗುವುದು ಎಂದು ಎಚ್ಚರಿಸಿದರು.
ತಂಬಾಕು ಕೊಳ್ಳದೆ ಐಟಿಸಿ ಕಂಪನಿಯವರು ಬೀಜ ನೀಡಬಾರದು. ರಸಗೊಬ್ಬರಕ್ಕೆ ಮುಂಗಡ ಹಣ ಪಡೆದುಕೊಳ್ಳಬಾರದು. ತಂಬಾಕು ಮುಕ್ತಗೊಳಿಸಲು ಬೆಳೆ ರಜೆ ಘೋಷಣೆ ಮಾಡಿ ಉತ್ಪಾದನೆ ನಿಷೇಧಿಸಿದರೆ ಸಹಕಾರ ನೀಡಲಾಗುವುದು. ಇದಕ್ಕೂ ಮುನ್ನ ಬೆಳೆಗಾರರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಹರಾಜು ಅಧೀಕ್ಷಕಿ ಸವಿತಾ ಅವರಿಗೆ ಮನವಿ ಸಲ್ಲಿಸಿದರು.
ರಸಗೊಬ್ಬರ ಸಮಿತಿಯ ದೇವರಾಜು, ಬೆಳೆಗಾರರ ಸಂಘದ ಈರೇಗೌಡ, ಮುಖಂಡರಾದ ಬಂದಿಗನಹಳ್ಳಿ ರವಿ, ಮಲ್ಲೇಶ್, ಮಾದು, ಮಂಜು, ಕುಮಾರ್, ವೀರೇಂದ್ರ, ತಮ್ಮೇಗೌಡ, ಸುಂದರೇಶ್, ಬೊಮ್ಮೇಗೌಡ, ರಾಜಣ್ಣ, ದಿನೇಶ್, ಭಾಸ್ಕರ್, ವಾಜೀದ್, ತುಳಸಿರಾಮ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net