ಕಣ್ಣೀರು ಹಾಕಿಸಿದವರಿಗೆ ಶಾಪ ತಟ್ಟಲಿದೆ

ಪಟ್ಟಣದ ಲಯನ್ಸ್ ಹಾಲ್‌ನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಎಚ್.ಡಿ ರೇವಣ್ಣನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಚಂಚಲಾ ಕುಮಾರಸ್ವಾಮಿ, ಪಲ್ಲವಿ ಶ್ರೀನಿವಾಸ್, ಕೆ.ಎಲ್ ಸೋಮಶೇಖರ್ ಇತರರು ಇದ್ದರು.
ಪಟ್ಟಣದ ಲಯನ್ಸ್ ಹಾಲ್‌ನಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಎಚ್.ಡಿ ರೇವಣ್ಣನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಚಂಚಲಾ ಕುಮಾರಸ್ವಾಮಿ, ಪಲ್ಲವಿ ಶ್ರೀನಿವಾಸ್, ಕೆ.ಎಲ್ ಸೋಮಶೇಖರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಡಿ ರೇವಣ್ಣ ಹೇಳಿಕೆ
  • ಜೆಡಿಎಸ್ ಸಭೆ
ಸಕಲೇಶಪುರ: ನಮ್ಮ ಅಪ್ಪ-ಅಮ್ಮನ ಕಣ್ಣೀರು ಹಾಕಿಸಿದವರಿಗೆ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಶಾಸಕ ಎಚ್.ಡಿ ರೇವಣ್ಣ ಗುಡುಗಿದ್ದಾರೆ.
ಪಟ್ಟಣದ ಲಯನ್ಸ್ ಹಾಲ್‌ನಲ್ಲಿ ಸೋಮವಾರ ತಾಲೂಕು ಜೆಡಿಎಸ್ ಘಟಕ ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ನಮ್ಮ ಹಿರಿಯರ ಮನ ಕುಗ್ಗುವಂತೆ ಮಾಡಿದ ಜನರಿಗೆ ಶೀಘ್ರದಲ್ಲಿ ಉತ್ತರ ಸಿಗಲಿದೆ. ಪಕ್ಷ ಸಂಘಟನೆಯನ್ನು ಜೆಡಿಎಸ್‌ಗೆ ಯಾರು ಹೇಳಿಕೂಡಬೇಕಿಲ್ಲ. ಜೆಡಿಎಸ್ ಮುಗಿದೆ ಹೋಗಿದೆ ಎಂಬ ಭಾವನೆ ವಿರೋಧಿಗಳಲ್ಲಿ ನೆಲೆಸಿದೆ. ಆದರೆ, ಶೂನ್ಯದಿಂದ ಸಂಪಾದನೆ ಮಾಡುವುದು ನಮಗೆ ತಿಳಿದಿದೆ. ಸೋಲು-ಗೆಲುವು ನಮ್ಮ ಪಕ್ಷಕ್ಕೆ ಸಹಜ. 93ನೇ ವಯಸ್ಸಿನಲ್ಲಿರುವ ದೇವೇಗೌಡರಿಗೆ ಜಿಲ್ಲೆಯ ವಿಚಾರಗಳ ಬಗ್ಗೆ ಅರಿವಿದೆ. ಮುಂದಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ತಮ್ಮ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲಮನ್ನಾ ಸೇರಿದಂತೆ ಜಿಲ್ಲೆಯಲ್ಲಿ ಹತ್ತಾರು ಮಹತ್ಕಾರ್ಯಗಳನ್ನು ಮಾಡಿದ್ದಾರೆ. ಶೈಕ್ಷಣಿಕ, ಆರೋಗ್ಯ, ಇಂಧನ ಹಾಗೂ ಲೋಕೋಪಯೋಗಿ ಇಲಾಖೆಗಳು ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಈ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ನಮ್ಮ ರಾಜಕೀಯ ಮುಗಿದಿಲ್ಲ. ಬನ್ನಿ 2028ರ ಚುನಾವಣೆಗೆ ನಮ್ಮ ಶಕ್ತಿ ತೋರಿಸುತ್ತೇವೆ. ಮುಂದೆ ನಡೆಯಲಿರುವ ಪಂಚಾಯಿತಿ ಚುನಾವಣೆಗಳಲ್ಲಿ ನಿಮಗೆ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಅನ್ಯಾಯವಾಗಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೂಮ್ಮೆ ಕ್ಷೇತ್ರಕ್ಕೆ ಆಗಮಿಸಲಿದ್ದೇನೆ ಎಂದರು. ಜ.24 ರಂದು ನಡೆಯುವ ಸಮಾವೇಶಕ್ಕೆ ಕನಿಷ್ಠ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆತರುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರು.
ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ನಮ್ಮ ತಪ್ಪುಗಳಿಂದ 2024ರ ಚುನಾವಣೆಯಲ್ಲಿ ತಪ್ಪಾಗಿದೆ. ಮಾಡಿದ ತಪ್ಪನ್ನು ತಿದ್ದಿಕೊಂಡು ಪಕ್ಷ ಸಂಘಟನೆ ಮಾಡುವ ಹೊಣೆ ನಮ್ಮ ಮೇಲಿದೆ. ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆಹಾರವಾಗಬಾರದು. ಟೀಕೆಗಳಿಗೆ ಸಮರ್ಪಕವಾಗಿ ಉತ್ತರ ನೀಡಬೇಕು. ಪಕ್ಷ ಸಂಘಟನೆಯ ಹಂತವಾಗಿ ಜ.24ರಂದು ಹಾಸನದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ದೇವೇಗೌಡರ ಆಸೆಯನ್ನು ನೆರವೇರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯರಾದ ಚಂಚಲಾ ಕುಮಾರಸ್ವಾಮಿ, ಪಲ್ಲವಿ ಶ್ರೀನಿವಾಸ್, ಸುಪ್ರದೀಪ್ತ್ ಯಜಮಾನ್, ಕುಮಾರಸ್ವಾಮಿ, ಕೆ.ಎಲ್.ಸೋಮಶೇಖರ್, ಕೊತ್ತನಹಳ್ಳಿ ತಮ್ಮಣ್ಣ, ಯಾದಗಾರ್ ಇಬ್ರಾಹಿಂ, ಮಲ್ನಾಡ್ ಜಾಕೀರ್, ಜಾತಹಳ್ಳಿ ಪುಟ್ಟಸ್ವಾಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net