ಎರಡು ದಿನ ನಡೆದ ಬ್ರಹ್ಮರಥೋತ್ಸವ ಹಾಗೂ ನಾಡ ರಥೋತ್ಸವದಂದು ಭಕ್ತರು ರಥದ ಬಾಳೆಹಣ್ಣು, ದವನ, ಕಾಳು ಮೆಣಸು ಎಸೆದು ಭಕ್ತಿ ಪ್ರದರ್ಶಿಸುತ್ತಿದ್ದರು. ಆದರೆ ರಥಕ್ಕೆ ಎಸೆದ ಬಾಳೆ ಹಣ್ಣುಗಳು ನೆಲಕ್ಕೆ ಬಿದ್ದು ಅಪ್ಪಚ್ಚಿಯಾಗುತ್ತಿತ್ತು. ಇದನ್ನು ಭಕ್ತರು ತುಳಿಯುತ್ತಿದ್ದರಿಂದ ಮತ್ತಷ್ಟು ಕೆಸರಾಗುತ್ತಿತ್ತು. ಆದರೆ ರಥ ನಿಂತು ಭಕ್ತರು ತೆರಳಿದ ನಂತರ ಇದನ್ನೆಲ್ಲ ಪೌರ ಕಾರ್ಮಿಕರ ತಂಡ ಕ್ಷಣಾರ್ಧದಲ್ಲಿ ಸ್ವಚ್ಛಗೊಳಿಸಿ ಎಂದಿನಂತೆ ಕಾಣುವಂತೆ ಮಾಡುತ್ತಿದ್ದರು. ಜತೆಗೆ ಪ್ರಮುಖ ರಸ್ತೆ, ಬೀದಿಗಳಲ್ಲಿಯೂ ಹಾಕುತ್ತಿದ್ದ ಕಸವನ್ನೆಲ್ಲ ಗುಡಿಸಿ ತೆಗೆದು ಹಾಕುವ ಮೂಲಕ ಪಟ್ಟಣವನ್ನು ಅಂದವಾಗಿ ಕಾಣುವಂತೆ ಮಾಡಿ 13 ದಿನಗಳು ನಿರಂತರವಾಗಿ ನಡೆದ ಜಾತ್ರಾ ಮಹೋತ್ಸವಕ್ಕೆ ಕಳೆ ತರುತ್ತಿದ್ದದ್ದು ಎದ್ದು ಕಾಣುತ್ತಿತ್ತು. ಇದನ್ನು ಗಮನಿಸಿದ ದೇಗುಲದ ಅಧಿಕಾರಿಗಳು, ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿಗಳು ಸೇರಿದಂತೆ ಭಕ್ತರು, ಪ್ರವಾಸಿಗರು ವಿವಿಧ ಸಂಘಟನೆಗಳ ಮುಖಂಡರು ಪೌರ ಕಾರ್ಮಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.