ಅಕ್ಷರ ದಾಸೋಹ ದುರ್ಬಲಗೊಳಿಸುವ ಹುನ್ನಾರ

ದೇಶಾದ್ಯಂತ ಸ್ಕೀಮ್ ನೌಕರರ ಕರಾಳ ದಿನಾಚರಣೆಯ ಅಂಗವಾಗಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ರಾಜ್ಯ ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಸಂಘದ ನೇತೃತ್ವದಲ್ಲಿ ಶುಕ್ರವಾರ ಒಂದು ದಿನದ ಮುಷ್ಕರ ನಡೆಸಲಾಯಿತು. ಎಂ.ಬಿ.ಪುಷ್ಪಾ, ಕಾಮಾಕ್ಷಿರಾಜು, ಕೆ.ಪಿ.ವೀಣಾ, ಎಂ.ಮಂಜುಳಾ, ಟಿ.ಎಚ್.ಜಯಂತಿ ಇತರರಿದ್ದರು.
ದೇಶಾದ್ಯಂತ ಸ್ಕೀಮ್ ನೌಕರರ ಕರಾಳ ದಿನಾಚರಣೆಯ ಅಂಗವಾಗಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ರಾಜ್ಯ ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಸಂಘದ ನೇತೃತ್ವದಲ್ಲಿ ಶುಕ್ರವಾರ ಒಂದು ದಿನದ ಮುಷ್ಕರ ನಡೆಸಲಾಯಿತು. ಎಂ.ಬಿ.ಪುಷ್ಪಾ, ಕಾಮಾಕ್ಷಿರಾಜು, ಕೆ.ಪಿ.ವೀಣಾ, ಎಂ.ಮಂಜುಳಾ, ಟಿ.ಎಚ್.ಜಯಂತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಕ್ಷರ ದಾಸೋಹ ದುರ್ಬಲಗೊಳಿಸುವ ಹುನ್ನಾರ
  • ರಾಜ್ಯ ಅಂಗನವಾಡಿ ನೌಕರರ ಸಂಘ, ಬಿಸಿಯೂಟ ನೌಕರರಿಂದ ಪ್ರತಿಭಟನೆ

ಹಾಸನ:

ದೇಶಾದ್ಯಂತ ಸ್ಕೀಮ್ ನೌಕರರ ಕರಾಳ ದಿನಾಚರಣೆಯ ಅಂಗವಾಗಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ರಾಜ್ಯ ಅಕ್ಷರ ದಾಸೋಹ (ಬಿಸಿಯೂಟ) ನೌಕರರ ಸಂಘದ ನೇತೃತ್ವದಲ್ಲಿ ಶುಕ್ರವಾರ ಒಂದು ದಿನದ ಮುಷ್ಕರ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಕೀಮ್ ನೌಕರರ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿದ್ದು, ಐಸಿಡಿಎಸ್ ಮತ್ತು ಅಕ್ಷರ ದಾಸೋಹ ಯೋಜನೆಗಳನ್ನು ದುರ್ಬಲಗೊಳಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸ್ಕೀಮ್ ನೌಕರರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷೆ ಎಂ.ಬಿ.ಪುಷ್ಪಾ ಸುದ್ದಿಗಾರರೊಂದಿಗೆ ಮಾತನಾಡಿ, ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನವನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸದೆ ಕಡಿಮೆ ಮಾಡುತ್ತಿರುವುದರಿಂದ ಮಕ್ಕಳ ಪೌಷ್ಟಿಕ ಆಹಾರ ಮತ್ತು ಅಂಗನವಾಡಿ ಸೇವೆಗಳ ಗುಣಮಟ್ಟ ಕುಸಿಯುತ್ತಿದೆ ಎಂದು ಆರೋಪಿಸಿದರು.

2017ರಿಂದ ಪೌಷ್ಟಿಕ ಆಹಾರದ ಘಟಕ ವೆಚ್ಚ ಹೆಚ್ಚಳವಾಗದಿರುವುದು ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ 3ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಇದರಿಂದ ಅಂಗನವಾಡಿ ಕೇಂದ್ರಗಳ ಅಸ್ತಿತ್ವವೇ ಪ್ರಶ್ನಾರ್ಥಕವಾಗುತ್ತಿದೆ. ರಾಜ್ಯ ಸರ್ಕಾರ 10 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವುದಾಗಿ ಘೋಷಿಸಿದ್ದರೂ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದು ಖಂಡನೀಯ ಎಂದರು.
ಸ್ಥಳೀಯವಾಗಿ ತಯಾರಿಸುವ ತಾಜಾ ಪೌಷ್ಟಿಕ ಆಹಾರದ ಬದಲಿಗೆ ಪ್ಯಾಕೇಟ್ ಆಹಾರ, ನಗದು ವರ್ಗಾವಣೆ ಹಾಗೂ ಕಾರ್ಪೊರೇಟ್ ಮಾದರಿಯ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಐಸಿಡಿಎಸ್ ಯೋಜನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಮಕ್ಕಳಿಗೆ ಉತ್ತಮ ಗುಣಮಟ್ಟದ ಸ್ಥಳೀಯ ಆಹಾರವನ್ನೇ ನಿರಂತರವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು. ಪೋಷಣ್ ಟ್ರ್ಯಾಕರ್, ಎಫ್‌ಆರ್‌ಎಸ್, ಇ-ಕೆವೈಸಿ ಸೇರಿದಂತೆ ವಿವಿಧ ಡಿಜಿಟಲ್ ಕೆಲಸಗಳನ್ನು ಸೂಕ್ತ ಮೊಬೈಲ್, ಟ್ಯಾಬ್ಲೆಟ್, ಡೇಟಾ ಸೌಲಭ್ಯ ಮತ್ತು ವೈ-ಫೈ ಇಲ್ಲದೆ ಮಾಡಿಸಲು ಒತ್ತಡ ಹೇರಲಾಗುತ್ತಿದೆ. ತಾಂತ್ರಿಕ ಸಮಸ್ಯೆಗಳಿಂದ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಬಿಎಲ್‌ಒ, ಜನಗಣತಿ, ಎಸ್‌ಐಆರ್ ಸೇರಿದಂತೆ ಇಲಾಖೇತರ ಕೆಲಸಗಳನ್ನು ಅಂಗನವಾಡಿ ನೌಕರರ ಮೇಲೆ ಹೇರಲಾಗುತ್ತಿದ್ದು, ಅವುಗಳಿಂದ ಕೂಡಲೇ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
2018ರಿಂದ ಗೌರವಧನದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ದುಬಾರಿ ಜೀವನದ ನಡುವೆ ಅಲ್ಪ ಗೌರವಧನದಲ್ಲಿ ಸೇವೆ ಸಲ್ಲಿಸುವುದು ಅಸಾಧ್ಯವಾಗಿದೆ. ಚುನಾವಣೆ ವೇಳೆ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ಗೌರವಧನ ಹೆಚ್ಚಳ ಜಾರಿಗೊಳಿಸಬೇಕು. ಅಂತಿಮವಾಗಿ ಕಾರ್ಯಕರ್ತೆಯರಿಗೆ 41 ಸಾವಿರ ಮತ್ತು ಸಹಾಯಕಿಯರಿಗೆ 35 ಸಾವಿರ ಕನಿಷ್ಠ ವೇತನ, ನಿವೃತ್ತಿಯ ನಂತರ 18 ಸಾವಿರ ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
2011ರಿಂದ ನಿವೃತ್ತರಾದ ಅಂಗನವಾಡಿ ನೌಕರರಿಗೆ ಗ್ರಾಚ್ಯುಟಿ ಬಿಡುಗಡೆ ಮಾಡಬೇಕು. ಅವರನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ತರಬೇಕು. 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ದೇಶಾದ್ಯಂತ ಏಕರೂಪ ಸೇವಾ ನಿಯಮ, ವಾರ್ಷಿಕ ವೇತನ ಹೆಚ್ಚಳ, ವೈದ್ಯಕೀಯ ರಜೆ, ಬಡ್ತಿ ಅವಕಾಶ ಸೇರಿದಂತೆ ಎಲ್ಲ ಸೇವಾ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಗ್ಯಾಸ್ ಸಂಪರ್ಕ, ಆಧುನಿಕ ಅಡುಗೆ ಸಲಕರಣೆಗಳು, ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಆಟಿಕೆಗಳು, ಬಾಡಿಗೆ ಕಟ್ಟಡಗಳಿಗೆ ಮಾರುಕಟ್ಟೆ ದರದ ಬಾಡಿಗೆ, ಹೊಸದಾಗಿ ಆರಂಭಿಸಿರುವ ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಎಲ್ಲ ಮೇಲ್ವಿಚಾರಕರ ಹುದ್ದೆಗಳನ್ನು ಬಡ್ತಿಯ ಮೂಲಕವೇ ಭರ್ತಿ ಮಾಡುವಂತೆ ಒತ್ತಾಯಿಸಲಾಯಿತು.
ಇದೇ ವೇಳೆ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಸಹ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಅಕ್ಷರ ದಾಸೋಹ ಯೋಜನೆ ಆರಂಭವಾಗಿ 25 ವರ್ಷಗಳಾದರೂ ನೌಕರರ ವೇತನ ಹಾಗೂ ಸೌಲಭ್ಯಗಳಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಆಗಿಲ್ಲ. ಸರ್ಕಾರಗಳು ತಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಸ್ಕೀಮ್ ನೌಕರರ ಸಂಘದ ಉಪಾಧ್ಯಕ್ಷರಾದ ಕಾಮಾಕ್ಷಿ ರಾಜು, ಕೆ.ಪಿ.ವೀಣಾ, ಪ್ರಧಾನ ಕಾರ್ಯದರ್ಶಿ ಎಂ.ಮಂಜುಳಾ, ಕಾರ್ಯದರ್ಶಿ ಟಿ.ಎಚ್.ಜಯಂತಿ , ರಿಹಾನಾಬಾನು, ಎಸ್.ಎಸ್.ಪೂರ್ಣಿಮಾ, ಖಜಾಂಚಿ ಜಿಪಿ.ಶೈಲಾ, ಬಿಸಿಯೂಟ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ಜಿ.ವಿ.ಉಷಾ, ಉಪಾಧ್ಯಕ್ಷರಾದ ಮೀನಾಕ್ಷಿ , ಯಶೋದಾ, ಪ್ರಧಾನ ಕಾರ್ಯದರ್ಶಿ ಅರವಿಂದ ಯಶೋದಾ, ಸುಮಾ, ಜ್ಯೋತಿ, ನಾಸೀರಾಬಾನು, ಎಚ್.ಆರ್.ನವೀನ್‌ಕುಮಾರ್, ಎಂ.ಜಿ.ಪೃಥ್ವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net