ಮನುಕುಲದ ಉದ್ದಾರಕ್ಕೆ ಶ್ರಮಿಸಿದವರ ಸ್ಮರಣೆ ಔಚಿತ್ಯಪೂರ್ಣ

ಅರಸೀಕೆರೆ ನಗರದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಸಮಾರಂಭವನ್ನು ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಿದರು. ಶ್ರೀ ಶಿವಾ ನಂದಪುರಿ ಸ್ವಾಮೀಜಿ , ಕೆ.ಎಂ.ಶಿವಲಿಂಗೇಗೌಡ, ಪಟೇಲ್ ಶಿವಪ್ಪ, ಬಿಳಿಚೌಡಯ್ಯ ಇತರರಿದ್ದರು.
ಅರಸೀಕೆರೆ ನಗರದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಸಮಾರಂಭವನ್ನು ಸಂಸದ ಶ್ರೇಯಸ್ ಪಟೇಲ್ ಉದ್ಘಾಟಿಸಿದರು. ಶ್ರೀ ಶಿವಾ ನಂದಪುರಿ ಸ್ವಾಮೀಜಿ , ಕೆ.ಎಂ.ಶಿವಲಿಂಗೇಗೌಡ, ಪಟೇಲ್ ಶಿವಪ್ಪ, ಬಿಳಿಚೌಡಯ್ಯ ಇತರರಿದ್ದರು.
Published on
ಅರಸೀಕೆರೆ: ಮನುಕುಲದ ಉದ್ದಾರಕ್ಕೆ ಶ್ರಮಿಸಿದ ಮಹನೀಯರ ಸ್ಮರಣೆ ಔಚಿತ್ಯಪೂರ್ಣವಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು. 
ನಗರದ ಹಳೆಯ ಮಾಧ್ಯಮಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನಕದಾಸರ 538ನೇ ಜಯಂತಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಸ್ಥಾಪನೆ ಗುದ್ದಲಿ ಪೂಜೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಡವ, ಬಲ್ಲಿದ ಎನ್ನುವ ಭೇದ ಮಾಡಬಾರದು ಎಂಬುದನ್ನು ಕನಕದಾಸರು ರಾಮಧಾನ್ಯ ಚರಿತೆ ಕೃತಿಯಲ್ಲಿ ಭತ್ತ ಮತ್ತು ರಾಗಿಯ ಸವಾಲಿನ ಮೂಲಕ ಪ್ರತಿಪಾದಿಸಿದ್ದಾರೆ. ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು, ದಾಸ ಶ್ರೇಷ್ಠರು ಮಾನವ ಕಲ್ಯಾಣದ ಕುರಿತು ಸಂದೇಶ ನೀಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಸಿಎಂ ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡುತ್ತಿದ್ದು ಸಮಾಜದ ಉನ್ನತಿಗಾಗಿ ಬದುಕು ಮೀಸಲಿಟ್ಟ ಮಹನೀಯರನ್ನು ಸದಾ ಗೌರವಿಸೋಣ ಎಂದು ಹೇಳಿದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ಬಲ್ಲಿರಾ ಎಂದು ಕನಕದಾಸರು ಜಾತಿ ವ್ಯವಸ್ಥೆ ಖಂಡಿಸಿದರು. ಅಂತಹ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಬದುಕು ಹಸನಾಗಲಿದೆ. ಸಿಎಂ ಸಿದ್ದರಾಮಯ್ಯ ಬಡವರ ಪರ ಕೆಲಸ ಮಾಡಲು ಸಂಕಲ್ಪ ಮಾಡಿದ್ದು ಯಶಸ್ಸು ದೊರೆಯಲಿ ಎಂದರು.
 ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕನಕದಾಸರ ವಾಣಿಯಂತೆ ಎಲ್ಲ ಸಮುದಾಯದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಮತದಾರರ ಆಶಿರ್ವಾದ ಬಲದಿಂದ ಗಂಡಸಿ, ಬಾಣಾವರ, ಕಣಕಟ್ಟೆ ಹಾಗೂ ಕಸಬಾ ಹೋಬಳಿ ಕೆರೆಗಳನ್ನು ತುಂಬಿಸಲು ಶಕ್ತಿ ಮೀರಿ ಹೋರಾಟ ಮಾಡುತ್ತಿದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅಸ್ತು ಎಂದಿದ್ದಾರೆ. ಹಾಗೆಯೇ 500ಕ್ಕೂ ಹೆಚ್ಚಿನ ಹಳ್ಳಿಗಳಿಗೆ ಕಾಂಕ್ರೀಟ್ ರಸ್ತೆ ಮಾಡಿಸಿ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೂಯ್ಯುತ್ತಿದ್ದೇನೆ ಎಂದು ತಮ್ಮ ಕಾರ್ಯವೈಖರಿ ಸಮರ್ಥಿಸಿಕೊಂಡರು.
ಹಾಸನ ನಗಾರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ದೇಹದ ಹೊರಗೆ ಎಷ್ಟೇ ಉಜ್ಜಿ ಸ್ನಾನ ಮಾಡಿದರೂ ಒಳಗಿನ ಕೊಳೆ ದೂರ ಮಾಡಲು ಸಾಧ್ಯವಾಗದು. ಸಂತ ಶ್ರೇಷ್ಠ ಕನಕದಾಸರ ತತ್ವ, ಚಿಂತನೆ, ಆದರ್ಶ ಮೈಗೂಡಿಸಿಕೊಂಡು ಸಾಗಿದರೆ ಮಾತ್ರವೇ ತನು ಶುದ್ಧಿ, ಮನಶುದ್ಧಿ ಮಾಡಿಕೊಳ್ಳಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು. 
ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ಜಿಪಂ ಮಾಜಿ ಸದಸ್ಯ ಬಿಳಿಚೌಡಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ, ತಾಲೂಕು ಕುರುಬರ ಸಂಘದ ಅಧ್ಯಕ್ಷ ತೊಂಡಿಗನಹಳ್ಳಿ ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಮಂಗಳಾಪುರ ನಾಗರಾಜ್, ಹರೀಶ್, ಕರವೇ ನಗರಾಧ್ಯಕ್ಷ ಸಂತೋಷ್, ಬಸವರಾಜ್ ಸೇರಿದಂತೆ ಹಲವರು ಹಾಜರಿದ್ದರು. ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್, ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಕೇಶವಮೂರ್ತಿ ಸಮಾರಂಭದಿಂದ ದೂರ ಉಳಿದಿದ್ದರು.
ಜಟಾಪಟಿಗೆ ಸಾಕ್ಷಿಯಾದ ವೇದಿಕೆ: ತಾಲೂಕಿನ ಧಾರ್ಮಿಕ ಕೇಂದ್ರ ಗಂಗೆ ಮಡು ಸನ್ನಿಧಿಯಲ್ಲಿ ಅನುದಾನದ ಕೊರತೆಯಿಂದ ಕೆಲಸಗಳು ಸ್ಥಗಿತವಾಗಿವೆ.ಈ ಕುರಿತು ಸಮಾಜದವರು ಗಮನ ಹರಿಸಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹೇಳಿದರು. ತಕ್ಷಣವೇ ಮಧ್ಯೆ ಪ್ರವೇಶಿಸಿದ ತಾಪಂ ಮಾಜಿ ಸದಸ್ಯ ಮಂಗಳಾಪುರ ನಾಗರಾಜ್ ಸಿಎಂ ಸಿದ್ದರಾಮಯ್ಯ ಎರಡು ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದರು. ಇದರಿಂದ ಕೊಂಚ ವಿಚಲಿತರಾದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅನುದಾನ ತರಲು ನೀವೇನು ಶಾಸಕರೇ ಸುಖಾಸಮ್ಮನೆ ಗೊಂದಲ ಮಾಡುವುದು ಸರಿಯಲ್ಲ ಎಂದು ಹೇಳಿದ್ದು ಉಭಯ ಮುಖಂಡರ ಮಾತಿನ ಜಟಾಪಟಿಗೆ ವೇದಿಕೆ ಸಾಕ್ಷಿಯಾಯಿತು. ಸಮಾಜದ ಪ್ರಮುಖರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಎಲ್ಲರನ್ನೂ ಸಮಾಧಾನಪಡಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net