ವಿಜೃಂಭಣೆಯ ಜೇನುಕಲ್ಲು ಸಿದ್ದೇಶ್ವರಸ್ವಾಮಿ ರಥೋತ್ಸವ

 ಇತಿಹಾಸ ಪ್ರಸಿದ್ಧ ಅರಸೀಕೆರೆ ಗ್ರಾಮಾಂತರ ಯಾದಪುರ ಕ್ಷೇತ್ರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಭವ್ಯ ರಥೋತ್ಸವ ನೆರವೇರಿತು.
ಇತಿಹಾಸ ಪ್ರಸಿದ್ಧ ಅರಸೀಕೆರೆ ಗ್ರಾಮಾಂತರ ಯಾದಪುರ ಕ್ಷೇತ್ರದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯವರ ಭವ್ಯ ರಥೋತ್ಸವ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಯಾದಪುರದ ಬೆಟ್ಟದ ಮೇಲೆ ಧಾರ್ಮಿಕ ವೈಭವ
  • ದೇವರ ನಾಮ ಸ್ಮರಣೆಯೊಂದಿಗೆ ರಥ ಎಳೆದ ಸಾವಿರಾರು ಭಕ್ತರು
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಯಾದಪುರದ ಬೆಟ್ಟದ ಮೇಲೆ ನೆಲೆಸಿರುವ, ನಾಡಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಜೇನುಕಲ್ಲು ಸಿದ್ದೇಶ್ವರಸ್ವಾಮಿಯ ಮಹಾ ರಥೋತ್ಸವ ಭಕ್ತರ ಹರ್ಷೋದ್ಗಾರದೊಂದಿಗೆ ವಿಜೃಂಭಣೆಯಿಂದ ಶುಕ್ರವಾರ ನೆರವೇರಿತು.
ಬಸವನ ಉತ್ಸವ, ಪಲ್ಲಕ್ಕಿ ಉತ್ಸವ, ಬಿಲ್ವಪತ್ರೆ ಉತ್ಸವ ಹೀಗೆ ನಾನಾ ಉತ್ಸವಗಳು ದೇವಾಲಯದ ಸಂಪ್ರದಾಯದಂತೆ ಗುರುವಾರ ರಾತ್ರಿ ಪೂರ್ತಿ ನಡೆಯಿತು. ಶುಕ್ರವಾರ ಮುಂಜಾನೆ ಬಾನಂಗಳದಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ಇತ್ತ ಶೃಂಗರಿಸಿದ್ದ ರಥ ಮಂಟಪದಲ್ಲಿ ಸಿದ್ದೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಬೆಳಗಲಾಯಿತು. ಈ ಶುಭಗಳಿಗೆಗಾಗಿ ಕಾಯುತ್ತಿದ್ದ ಭಕ್ತರ ದಂಡು ಸಿದ್ದೇಶ್ವರಸ್ವಾಮಿಯ ನಾಮ ಸ್ಮರಣೆ ಮಾಡುತ್ತ ರಥವನ್ನು ಎಳೆದು ಪುಳಕಿತರಾದರು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಟ್ಟದ ಮೇಲೆ ಇರುವ ಸಿದ್ದೇಶ್ವರಸ್ವಾಮಿಯ ಪಾದಗಳಿಗೆ ನಾನಾ ಬಗ್ಗೆ ಅಭಿಷೇಕಗಳು ವಿವಿಧ ಅರ್ಚನೆಗಳು ವೇದಘೋಷಗಳೊಂದಿಗೆ ದೇವಾಲಯದ ಅರ್ಚಕರು ನೆರವೇರಿಸಿದರು. ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಮಾಡಲಾಗಿದ್ದ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು.
ಇಷ್ಟಾರ್ಥ ಈಡೇರಿಕೆಗೆ ಹರಕೆ: ತಾಲೂಕು ಜಿಲ್ಲೆಯಿಂದ ಮಾತ್ರವಲ್ಲದೆ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊಂಡರು. ಮನದ ಇಷ್ಟಾರ್ಥ ಈಡೇರಿಸುವಂತೆ ಹರಕೆ ಮಾಡಿಕೊಳ್ಳುವ ಭಕ್ತರು ಗುಗ್ಗುಳ ತಲೆ ಮೇಲೆ ಹೊತ್ತರೆ, ಮತ್ತೆ ಕೆಲವರು ಕೆಂಡ ಹಾಯುವ ಮೂಲಕ ಹರಕೆ ತೀರಿಸಿದರು.
ಮಂಗಳವಾದ್ಯ ಸೇರಿದಂತೆ ವೀರಗಾಸೆ, ವೀರಭದ್ರ ಕುಣಿತ, ನಂದಿ ದ್ವಜ ಕುಣಿತ ಹೀಗೆ ಜಾನಪದ ಕಲಾ ತಂಡಗಳ ಕಲಾವಿದರು ತಮ್ಮ ಕಲಾ ಪ್ರದರ್ಶಿಸುವ ಮೂಲಕ ಜಾತ್ರಾ ಮಹೋತ್ಸವದ ರಂಗನ್ನು ಮತ್ತಷ್ಟು ಹೆಚ್ಚಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ನಗರದಿಂದ 6 ಕಿಲೋಮೀಟರ್ ದೂರವಿರುವ ಯಾದಾಪುರ ಕ್ಷೇತ್ರಕ್ಕೆ ಹೋಗಿ ಬರಲು ಭಕ್ತರಿಗೆ ಅನುವಾಗುವ ರೀತಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಲಕ್ಷಾಂತರ ಭಕ್ತರಿಗೆ ದೇವಾಲಯದ ಅಭಿವೃದ್ಧಿ ಸಮಿತಿ ನಿರಂತರ ದಾಸೋಹ ವ್ಯವಸ್ಥೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಮಾಡಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net