ವಿಜೃಂಭಣೆಯ ಚಂಪಾಷಷ್ಠಿ ಮಹಾ ರಥೋತ್ಸವ

 ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಬುಧವಾರ ನಡೆದ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವದಲ್ಲಿ ಸಾವಿರಾರು ಭಕ್ತರು ತೇರು ಎಳೆದರು.
ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಬುಧವಾರ ನಡೆದ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವದಲ್ಲಿ ಸಾವಿರಾರು ಭಕ್ತರು ತೇರು ಎಳೆದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಪೂಜೆ
  • ರಾಮನಾಥಪುರದಲ್ಲಿ ಜಾತ್ರೆ ಸಡಗರ
ಅರಕಲಗೂಡು: ಇತಿಹಾಸ ಪ್ರಸಿದ್ಧ ರಾಮನಾಥಪುರದ ಪವಿತ್ರ ನಾಗಕ್ಷೇತ್ರ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಚಂಪಾಷಷ್ಠಿ ಮಹಾ ರಥೋತ್ಸವ ಬುಧವಾರ ಅತ್ಯಂತ ವೈಭವಯುತವಾಗಿ ನೆರವೇರಿತು.
ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವ ಪ್ರಯುಕ್ತ ದೇವಸ್ಥಾನದ ಒಳ ಪ್ರಾಕಾರದ ಸುತ್ತ ಬಗೆ ಬಗೆಯ ಹೂವಿನ ಹಾರಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಪಾರುಪತ್ತೇದಾರ ರಮೇಶ್ ಭಟ್ ನೆಲ್ಲಿತೀರ್ಥ ಅವರ ಧಾರ್ಮಿಕ ಮುಖಂಡತ್ವದಲ್ಲಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜೆ ಕೈಂಕರ್ಯಗಳು ವಿಧಿವತ್ತಾಗಿ ಸಾಗಿದವು. ಮೂಲ ದೇವರ ಗುಡಿಯಲ್ಲಿ ನಾಗಪ್ಪನಿಗೆ ಉಯ್ಯಲೆ ತೊಟ್ಟಿಲು ಸೇವೆ ಸಲ್ಲಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಅಭಿಜನ್ ಮುಹೂರ್ತದಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊರತಂದು ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ರಥಾರೋಹಣದ ನಡೆಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಆಕಾಶದಲ್ಲಿ ಗರುಡ ಪಕ್ಷಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದಾಗ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಿತು.
ನೆರೆದಿದ್ದ ಭಕ್ತರು ಜಯಘೋಷಗಳ ನಡುವೆ ತೇರು ಮುಂದೆ ಸಾಗಿತು. ರಥ ಮುಂದೆ ಚಲಿಸುವಾಗ ಕಿಕ್ಕಿರಿದು ಸೇರಿದ್ದ ಭಕ್ತರು ನೂಕು ನುಗ್ಗಲಿನ ನಡುವೆ ಹಣ್ಣು ದವನ ಎಸೆಯಲು ಮುಗಿಬಿದ್ದರು. ದಕ್ಷಿಣ ಕನ್ನಡ ಶೈಲಿಯ ಚಂಡೆ ಮದ್ದಳೆ ವಾದ್ಯಗೋಷ್ಠಿ ನಿನಾದದೊಂದಿಗೆ ಆಕರ್ಷಕ ಬೊಂಬೆ ಕುಣಿತ ಪ್ರದರ್ಶನ ನೀಡಿ ರಥ ಹಿಂಬಾಲಿಸಿದ್ದು ಗಮನ ಸೆಳೆಯಿತು. ದೇವಸ್ಥಾನದ ರಥ ಬೀದಿಯಲ್ಲಿ ಕಾವೇರಿ ನದಿಯ ಸೇತುವೆ ತನಕ ಚಲಿಸಿದ ತೇರು ಪುನಃ ಅದೇ ಮಾರ್ಗವಾಗಿ ಸೂಸುತ್ರವಾಗಿ ಸಾಗಿ ಸ್ವಸ್ಥಾನಕ್ಕೆ ಮರಳಿತು. ರಥ ಮುಂದೆ ಸಾಗುವ ವೇಳೆಗೆ ಪೂಜಾ ಸಾಮಗ್ರಿಗಳೊಂದಿಗೆ ಆಗಮಿಸಿದ್ದ ಸಾವಿರಾರು ಭಕ್ತರು ಈಡುಗಾಯಿ ಒಡೆದು ತೇರಿನತ್ತ ಹಣ್ಣು- ದವನ ಎಸೆದು ಭಕ್ತಿ ಪರಾಕಾಷ್ಠೆ ಮೆರೆದರು.
ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಪವಿತ್ರ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವಸ್ಥಾನದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಕೆಲವರು ತಲೆಮುಡಿ ಅರ್ಪಿಸಿ ಹರಕೆ ತೀರಿಸಿದರು. ಹಣ್ಣು ತುಪ್ಪ ನೈವೇದ್ಯ ಅರ್ಪಿಸಿ ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಹೊಂದಿದರು.
ದೇವಸ್ಥಾನದೊಳಗೆ ಭಕ್ತರು ಸರದಿ ಸಾಲಿನಲ್ಲಿ ಬರಲು ಎರಡು ಕಡೆ ಬ್ಯಾರಿಕೇಡ್ ಹಾಕಲಾಗಿತ್ತು. ಬೆಳಗ್ಗೆಯಿಂದ ಸಂಜೆ ತನಕವೂ ಭಕ್ತರ ಪ್ರವಾಹ ಅಧಿಕವಾಗಿತ್ತು. ಭಕ್ತರು ಪೂಜೆ ಸಾಮಗ್ರಿಗಳನ್ನು ಹಿಡಿದು ಸಾಲುಗಟ್ಟಿ ನಿಂತಿದ್ದರು. ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಮುಂಭಾಗ ನೂಕುನುಗ್ಗಲನ್ನು ಲೆಕ್ಕಿಸದೆ ಪೂಜೆ ಸಲ್ಲಿಸಲು ಮುಗಿ ಬೀಳುತ್ತಿದ್ದರು. ಈಡುಗಾಯಿ ಒಡೆದು ಕರ್ಪೂರ ಬೆಳಗಿ, ಹಣ್ಣು ಕಾಯಿ ಅರ್ಪಿಸಿ ಭಕ್ತಿ ಭಾವ ಪ್ರದರ್ಶಿಸಿದರು.
ಸಂಪ್ರದಾಯದಂತೆ ಹೊಸದಾಗಿ ಮದುವೆಯಾದ ನವ ಜೋಡಿಗಳು ರಥೋತ್ಸವಕ್ಕೆ ಅಗಮಿಸಿ ದೇವರ ದರ್ಶನ ಪಡೆದರು. ನದಿಯಲ್ಲಿ ಸ್ನಾನ ಮಾಡಿ ಹಲವಾರು ಭಕ್ತರು ಉರುಳು ಸೇವೆ ಮಾಡಿದರು. ನದಿಯ ವಹ್ನಿಪುಷ್ಕರಣಿ, ಗಾಯತ್ರೀ ಶಿಲೆ, ಗೌತಮ ಶಿಲೆ, ಕುಮಾರಧಾರಾ ತೀರ್ಥ ದರ್ಶನ ಪಡೆದು ಶ್ರೀ ಅಗಸ್ತ್ಯೇಶ್ವರ, ಆಂಜನೇಯಸ್ವಾಮಿ, ಪಟ್ಟಾಭಿರಾಮ, ವರದಾನ ಬಸವೇಶ್ವರ ಮುಂತಾದ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದಲ್ಲಿ ನೂಕು ನುಗ್ಗಲು ನಿಯಂತ್ರಿಸುತ್ತಿದ್ದ ಸ್ವಯಂ ಸೇವಕರು ಸರದಿ ಸಾಲಿನಲ್ಲಿ ಪೂಜೆ ಸಲ್ಲಿಸಲು ಭಕ್ತರಿಗೆ ನೆರವಾದರು. ಜಾತ್ರೆಯಲ್ಲಿ ಕಟ್ಟಿದ್ದ ಅಂಗಡಿಗಳಲ್ಲಿ ವಿವಿಧ ವಸ್ತುಗಳ ವ್ಯಾಪಾರ ಜೋರಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಿಧ ಸಂಘ ಸಂಸ್ಥೆಗಳು ಭಕ್ತರಿಗೆ ಮಜ್ಜಿಗೆ ಪಾನಕ ವಿತರಿಸಿ, ಅನ್ನ ಸಂತರ್ಪಣೆ ಕಾರ್ಯ ನಡೆಸಿದವು.
ರಥೋತ್ಸವದಲ್ಲಿ ತೇರು ಸಂಪನ್ನಗೊಂಡ ಬಳಿಕ ದೇವಸ್ಥಾನದ ಒಳಾಂಗಣದ ಸುತ್ತ ನಡೆದ ನಾಗದೇವರ ಪ್ರದಕ್ಷಿಣೆ ನಡೆಯಿತು. ಶಾಸಕ ಎ.ಮಂಜು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ತಹಸೀಲ್ದಾರ್ ಕೆ.ಸಿ.ಸೌಮ್ಯಾ ಮುಂತಾದ ಗಣ್ಯರು ಪೂಜೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಪತ್ನಿ ಆಶಾರಾಣಿ ಅವರು ಕುಟುಂಬ ಸಮೇತ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಊಟ ಬಡಿಸುವ ಮೂಲಕ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net