ಜಿಲ್ಲೆಯ ಮಕ್ಕಳ ಸಾಧನೆ ಇತರರಿಗೆ ಸ್ಫೂರ್ತಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥಿ೵ಗಳನ್ನು ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥಿ೵ಗಳನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ಮಕ್ಕಳ ಸಾಧನೆ ಇತರರಿಗೆ ಸ್ಫೂರ್ತಿ
  • ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿಕೆ
  • ಎಸ್ಸೆಸ್ಸೆಲ್ಸಿಯಲ್ಲಿ 4ನೇ ಸ್ಥಾನ ಪಡೆದಿರುವುದಕ್ಕೆ ‘ಹಾಸನ ಹೆಮ್ಮೆ’ ಸಂಭ್ರಮ
ಹಾಸನ: ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದು ಹಾಸನದ ಹೆಮ್ಮೆ ಇವರ ಸಾಧನೆ ಇತರರಿಗೆ ಸ್ಫೂರ್ತಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯಿಂದ ನಗರದ ಹಾಸನಾಂಬ ಕಲಾಭವನದಲ್ಲಿ ಬುಧವಾರ ಆಯೋಜಿಸಿದ್ದ ಹಾಸನದ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರಯತ್ನ ಮತ್ತು ಪರಿಶ್ರಮದಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯಲು ಸಾಧ್ಯವಾಗಿದೆ. ನಿಮ್ಮೆಲ್ಲರ ಸಾಧನೆ ನಮ್ಮ ಹೃದಯ ತುಂಬಿದೆ. ಇದನ್ನು ಸಂಭ್ರಮಿಸುವ ಕ್ಷಣಕ್ಕಾಗಿ ಹಾಸನದ ಹೆಮ್ಮೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳ ಸಾಧನೆ ತಂದೆ, ತಾಯಿಗೆ ಖುಷಿ ತಂದಿದೆ. ಜತೆಗೆ ಕುಟುಂಬಕ್ಕೆ ಗೌರವ ತಂದಿದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಉತ್ತಮ ಸಾಧನೆ ಮಾಡಿರುವ ಮಕ್ಕಳನ್ನು ಅಭಿನಂದಿಸಿ ಪ್ರೋತ್ಸಾಹ ನೀಡುವುದರಿಂದ ಮುಂದಿನ ಸಾಲಿನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಜೀವನದಲ್ಲಿ ಏನಾದರೂ ಸಂಪಾದನೆ ಮಾಡಬಹುದು. ಸಂಪಾದಿಸಿದ್ದನ್ನು ಕಳೆದುಕೊಳ್ಳಬಹುದು. ಆದರೆ ನಾವು ಗಳಿಸಿದ ವಿದ್ಯೆ ಮತ್ತು ಜ್ಞಾನ ಶಾಶ್ವತವಾಗಿ ಕೊನೆಯ ಉಸಿರು ಇರುವವರೆಗೂ ನಮ್ಮೊಂದಿಗೆ ಇರುತ್ತದೆ. ವಿದ್ಯೆಯಿಂದ ನಿಮ್ಮ ಕಾಲ ಮೇಲೆ ನಿಂತು ಜೀವನ ನಡೆಸಬಹುದು. ಜತೆಗೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇರುತ್ತದೆ ಎಂದು ತಿಳಿಸಿದರು.
ಜೀವನದಲ್ಲಿ ಯಶಸ್ಸಿಗೆ ಒಂದೇ ಸೂತ್ರ. ಪರಿಶ್ರಮ, ಕಷ್ಟಪಟ್ಟವರು ಗುರಿಮುಟ್ಟುತ್ತಾರೆ. ಸೋಲು-ಗೆಲುವಿಗೆ ನಾವೇ ಕಾರಣ. ಛಲ ರೂಢಿಸಿಕೊಂಡು ಸಂಕಲ್ಪ ಮಾಡಿದರೆ ಯಶಸ್ಸು ಕಾಣುತ್ತಾರೆ. ಜೀವನದ ಯಶಸ್ಸಿಗೆ ಕೀಲಿ ಕೈ ಪರಿಶ್ರಮ ಎನ್ನುವುದು ನನ್ನ ಅಭಿಪ್ರಾಯ. ಮುರಾರ್ಜಿ ದೇಸಾಯಿ ಶಾಲೆ ಹಾಗೂ ಅನುದಾನಿತ ಶಾಲೆಗಳು ಇನ್ನೂ ಉತ್ತಮ ಫಲಿತಾಂಶ ಪಡೆಯಲು ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.
ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ರಾಜ್ಯಕ್ಕೆ ಅಪ್ರತಿಮ ಕೊಡುಗೆಯನ್ನು ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ನೀಡಿದ್ದಾರೆ. ಶಿಕ್ಷಣದಿಂದ ಗುರಿಯನ್ನು ತಲುಪಲು ಸಾಧ್ಯ ಹಾಗೂ ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಸಾಕ್ಷಿ. ಅವರನ್ನು ಅನುಸರಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಉತ್ತಮ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಹಾಸನ ಜಿಲ್ಲೆಗೆ ಕೀರ್ತಿಯನ್ನು ಹೆಚ್ಚಿಸಬೇಕು ಮತ್ತು ಯಶಸ್ಸಿನ ದಾರಿಯ ಕಡೆ ಸಾಗಬೇಕು ಎಂದರು.
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿನ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ, ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜತೆಗೆ ಮೂಲ ಸೌಕರ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.
ಪ್ರಪಂಚ ಪರ್ಯಟನೆಗೆ ಆಂಗ್ಲ ಭಾಷೆ ಕಲಿಯುವುದು ಅನಿವಾರ್ಯವಾಗಿದೆ. ರೈತರು, ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ತಳಹದಿ ಹಾಕಲು ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಜಾರಿಗೆ ತರಲು ಸರ್ಕಾರ ಮಹತ್ವ ಪೂರ್ಣವಾದ ಹೆಜ್ಜೆ ಇಟ್ಟಿದೆ ಎಂದು ಎಂದು ತಿಳಿಸಿದರು.
ಶಾಸಕ ಸ್ವರೂಪ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯು ರಾಜಕೀಯ, ವಿಜ್ಞಾನ, ಶಿಕ್ಷಣ ಹಾಗೂ ಹಲವಾರು ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ತಿಳಿಸಿದರು.
ಶಾಸಕರಾದ ಎಚ್.ಕೆ ಸುರೇಶ್ ಮಾತನಾಡಿ, ಎಂದಿಗೂ ಕಳವು ಆಗದೆ ಇರುವ ಒಂದು ವಿಚಾರವೆಂದರೆ ಅದು ವಿದ್ಯೆ ಮಾತ್ರ ಹಾಗೂ ಶಿಕ್ಷಣದಿಂದ ಮಾತ್ರ ಇತಿಹಾಸವನ್ನು ಬರೆಯಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಮತ್ತು ಗುರಿಯನ್ನು ತಲುಪುವುದರ ಮೂಲಕ ಸಾಧನೆ ಮಾಡಬೇಕು ಎಂದು ಹೇಳಿದರು.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ಶಾಲಾ ಶಿಕ್ಷಣ ಇಲಾಖೆ ಉಪನಿದೆರ್ರ್ಶಕ ಬಲರಾಮ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net