ಡ್ರಗ್ಸ್ ಪರಿಣಾಮಕಾರಿ ತಡೆಗೆ ಟಾಸ್ಕ್‌ಫೋರ್ಸ್ ರಚನೆ

ಪೊಲೀಸರು ವಿವಿಧ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿದರು.
ಪೊಲೀಸರು ವಿವಿಧ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಡ್ರಗ್ಸ್ ಪರಿಣಾಮಕಾರಿ ತಡೆಗೆ ಟಾಸ್ಕ್‌ಫೋರ್ಸ್ ರಚನೆ
  • ಡಿಸಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆ
  • ಔಷಧ ಅಂಗಡಿಗಳ ಮೇಲೆ ನಿಗಾ
ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗಾಂಜಾ, ಡ್ರಗ್ಸ್ ಸೇವನೆ ಪ್ರಕರಣ ತಡೆಗಟ್ಟಲು ಜಿಲ್ಲಾಡಳಿತ ಪೊಲೀಸ್, ಆರೋಗ್ಯ, ಅಬಕಾರಿ ಹಾಗೂ ಅರಣ್ಯ ಇಲಾಖೆಯನ್ನೊಳಗೊಂಡ ಟಾಸ್ಕ್‌ಪೋರ್ಸ್ ರಚಿಸುವ ಜತೆಗೆ ಹಿಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಡ್ರಗ್ಸ್ ರಿಹ್ಯಾಬ್ ಸೆಂಟರ್ ಕೂಡ ತೆರೆಯಲಾಗಿದೆ.
ಜಿಲ್ಲೆಯಲ್ಲಿ ಗಾಂಜಾ, ಸಿಂಥೆಟಿಕ್ ಡ್ರಗ್ಸ್ ಮತ್ತು ಮತ್ತೇರಿಸುವ ಔಷಧಗಳ ಅಕ್ರಮ ಬಳಕೆ ಹಾಗೂ ಮಾರಾಟ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿವೆ. ಯುವ ಸಮುದಾಯವನ್ನು ಕಾಡುತ್ತಿರುವ ಈ ಸಮಸ್ಯೆ ತಡೆಗೆ ಜಿಲ್ಲಾಡಳಿತ ಕಾರ್ಯಾಚರಣೆಗೆ ಮುಂದಾಗಿದೆ. ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ನೇತೃತ್ವದಲ್ಲಿ ಪೊಲೀಸ್, ಆರೋಗ್ಯ, ಅಬಕಾರಿ ಹಾಗೂ ಅರಣ್ಯ ಇಲಾಖೆಗಳ ಸಮನ್ವಯ ಸಭೆ ನಡೆಸಿ, ಜಿಲ್ಲೆಯನ್ನು ವ್ಯಸನಮುಕ್ತವಾಗಿಸುವ ಗುರಿಯೊಂದಿಗೆ ಇಲಾಖಾವಾರು ಜವಾಬ್ದಾರಿಗಳನ್ನು ನಿಗದಿಪಡಿಸಲಾಗಿದೆ.
ಮೆಡಿಕಲ್ ಶಾಪ್‌ಗಳ ಮೇಲೆ ಕಣ್ಣು:
ಮಾದಕ ವಸ್ತುಗಳು ಹಾಗೂ ಮತ್ತೇರಿಸುವ ಔಷಧಗಳ ದುರ್ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಔಷಧ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಲು ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸಿ ವೈದ್ಯರ ಸೂಚನೆ ಇಲ್ಲದೆ ನಿಷೇಧಿತ ಔಷಧ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ತೀರ್ಮಾನಿಸಿದೆ. ಪ್ರತಿ ಮೆಡಿಕಲ್ ಅಂಗಡಿಯ ಮುಂದೆಯೂ ಮಾದಕ ವಸ್ತುಗಳ ಮಾರಾಟ ನಿಷೇಧ ಎಂಬ ಸೂಚನಾ ಫಲಕ ಅಳವಡಿಸುವಂತೆ ನಿರ್ದೇಶನ ನೀಡಲಾಗಿದೆ. ವಿಶೇಷವಾಗಿ ಕಾಲೇಜು ಪ್ರದೇಶಗಳು, ನಗರ ಹೊರವಲಯ ಮತ್ತು ಪ್ರವಾಸಿ ತಾಣಗಳ ಬಳಿ ಇರುವ ಅಂಗಡಿಗಳ ಮೇಲೆ ಹೆಚ್ಚುವರಿ ನಿಗಾ ಇಡಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ ಅವರೇ ಕಾರ್ಯಾಚರಣೆಗೆ ಇಳಿಸಿದ್ದಾರೆ.
ಹಿಮ್ಸೌನಲ್ಲಿ ಡ್ರಗ್ ರಿಹ್ಯಾಬ್ ಸೆಂಟರ್
ನಗರದ ಹಿಮ್ಸೌ ಆಸ್ಪತ್ರೆನಲ್ಲಿ ವಿಶೇಷ ಡ್ರಗ್ ರಿಹ್ಯಾಬಿಲಿಟೇಷನ್ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಮಾನಸಿಕ ಆರೋಗ್ಯ ವಿಭಾಗದ 40 ಹಾಸಿಗೆಗಳಲ್ಲಿ 10 ಹಾಸಿಗೆಗಳನ್ನು ಮಾದಕ ವ್ಯಸನಿಗಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ಜಿಲ್ಲೆಯ ವಿವಿಧ ಡಿ-ಅಡಿಕ್ಷನ್ ಕೇಂದ್ರಗಳಿದ್ದು, ಅವುಗಳಲ್ಲಿ ಈಗಾಗಲೇ 183ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 40 ವ್ಯಸನಮುಕ್ತ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಮೇಲ್ವಿಚಾರಣೆಯನ್ನೂ ಬಲಪಡಿಸಲು ಜಿಲ್ಲಾಡಳಿತ ಸೂಚಿಸಿದೆ. ಕೇಂದ್ರ ಸರ್ಕಾರದ ನಶಾಮುಕ್ತ ಭಾರತ ಅಭಿಯಾನ ಮತ್ತು ಐಡಾಮ್ಸೌಪೋರ್ಟಲ್ ಅಡಿಯಲ್ಲಿ ದೇಶಾದ್ಯಂತ ಡ್ರಗ್ ಡಿ-ಅಡಿಕ್ಷನ್ ಹಾಗೂ ಪುನರ್ವಸತಿ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುತ್ತಿದೆ.
ಗಾಂಜಾವೇ ದೊಡ್ಡ ಸವಾಲು:
ಪೊಲೀಸ್ ಮೂಲಗಳ ಪ್ರಕಾರ, ಕಾಲೇಜು ವಿದ್ಯಾರ್ಥಿಗಳು ಮತ್ತು ಹೊರ ರಾಜ್ಯಗಳಿಂದ ಬರುವ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಸಣ್ಣ ಮಟ್ಟದ ಡ್ರಗ್ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ವಿಶೇಷವಾಗಿ ಗಾಂಜಾ ಪೂರೈಕೆ ಸರಪಳಿಯನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದೆ.
ಜಿಲ್ಲೆಯಲ್ಲಿ ವಾರ್ ಅಗೇನೆನ್ಸ್ ಡ್ರಗ್ ಅಭಿಯಾನ ಆರಂಭಿಸಿರುವ ಜಿಲ್ಲಾ ಪೊಲೀಸ್ ಇಲಾಖೆ, ಗಾಂಜಾ ಮಾರಾಟಗಾರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಕೆಲ ಪ್ರಕರಣಗಳಲ್ಲಿ ವಿದ್ಯಾರ್ಥಿಗಳನ್ನು ಬಳಸಿ ಡ್ರಗ್ ವಿತರಣೆಗೆ ಯತ್ನಿಸಲಾಗುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ನೂರಾರು ಕೆಜಿಯಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಹೆಚ್ಚುತ್ತಿವೆ ಪ್ರಕರಣಗಳ ಸಂಖ್ಯೆ:
ಜಿಲ್ಲೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವ್ಯಸನಿಗಳು ಅನುಮಾನಾಸ್ಪದವಾಗಿ ಓಡಾಡುವವರನ್ನು ಹಿಡಿದು ಹಿಮ್ಸ್ ಆಸ್ಪತ್ರೆಗೆ ತಂದು ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ, ಡ್ರಗ್ಸ್ ಸೇವನೆ ದೃಢಪಡುತ್ತಿರುವ ಸಂಖ್ಯೆ ಹೆಚ್ಚುತ್ತಿವೆ. ಹೀಗೆ ತಪಾಸಣೆಗೆ ಒಳಪಡಿಸಿದವರಲ್ಲಿ ಏಪ್ರಿಲ್ ತಿಂಗಳಲ್ಲಿ 53 ಪ್ರಕರಣ, ಮಾರ್ಚ್‌ನಲ್ಲಿ 51, ಫೆಬ್ರವರಿ ತಿಂಗಳಲ್ಲಿ 33 ಜನರು ಗಾಂಜಾ, ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ.
ಗ್ರಾಮ ಮಟ್ಟದ ಜಾಗೃತಿ ಅವಶ್ಯ:
ಜಿಲ್ಲಾಡಳಿತ ಶಾಲೆ, ಕಾಲೇಜು, ಹಾಸ್ಟೆಲ್, ಪ್ರವಾಸಿ ತಾಣಗಳು ಹಾಗು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮಿಕೊಳ್ಳಲು ತೀರ್ಮಾನಿಸಿದೆ. ಯುವಕರಲ್ಲಿ ಕ್ರೀಡೆೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಸಮಾಲೋಚನಾ ಶಿಬಿರಗಳ ಮೂಲಕ ವ್ಯಸನದಿಂದ ದೂರವಿಡುವ ಪ್ರಯತ್ನಕ್ಕೂ ಒತ್ತು ನೀಡಲಾಗಿದೆ. ಡ್ರಗ್ಸ್ ವಿರುದ್ಧದ ಹೋರಾಟ ಕೇವಲ ಕಾನೂನು ಜಾರಿ ಇಲಾಖೆಯ ಹೊಣೆಗಾರಿಕೆಯಾಗದೇ, ಪಾಲಕರು, ಶಿಕ್ಷಕರು, ಸಮಾಜ ಮತ್ತು ಆಡಳಿತ ವ್ಯವಸ್ಥೆ ಸೇರಿ ಎದುರಿಸಬೇಕಾದ ಸಾಮಾಜಿಕ ಸವಾಲಾಗಿದೆ ಎಂಬ ಅರಿವು ಈಗ ಹೆಚ್ಚುತ್ತಿದೆ.
ಜಿಲ್ಲಾಧಿಕಾರಿ ಸೂಚನೆಯಂತೆ ಮನೋರೋಗ ವಿಭಾಗದ 40 ಹಾಸಿಗೆಗಳಲ್ಲಿ 10 ಹಾಸಿಗೆಯನ್ನು ಡ್ರಗ್ ರಿಹ್ಯಾಬ್ ಸೆಂಟರ್‌ಗಾಗಿ ಮೀಸಲಿಡಲಾಗಿದೆ. ಇಲ್ಲಿ ದಾಖಲಾಗುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಜಿಲ್ಲೆಯಲ್ಲಿ ಗಾಂಜಾ, ಡ್ರಗ್ಸ್, ಮದ್ಯ, ನಿಕೋಟಿನ್ ಸೇವನೆಯಿಂದ ಸಾಕಷ್ಟು ಜನರು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಡಾ.ಸಂತೋಷ್, ಡಿಹೆಚ್‌ಒ, ಹಿಮ್ಸ್ ಮನಶಾಸ್ತ್ರ ವಿಭಾಗ
ಮಾದಕ ವಸ್ತುಗಳ ನಿಷೇಧಕ್ಕೆ ಈಗಾಗಲೇ ಕೈಗೊಂಡಿರುವ ಕ್ರಮಗಳು ಸಾಕಾಗುತ್ತಿಲ್ಲ. ಇನ್ನಷ್ಟು ಗಂಭೀರ ಕ್ರಮಗಳನ್ನು ಕೈಗೊಳ್ಳಲು ಒಂದೊಂದು ಇಲಾಖೆಗೂ ಜಿಲ್ಲಾಡಳಿತ ಗುರಿ ನಿಗದಿಪಡಿಸಿದೆ. ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಬಕಾರಿ, ಆರೋಗ್ಯ, ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅನಿರೀಕ್ಷಿತ ದಾಳಿ ನಡೆಸಲು ಸೂಚಿಸಲಾಗಿದೆ. ಆದರೂ ಸವಾಲು ತುಂಬ ದೊಡ್ಡದಿದೆ, ಪ್ರಯತ್ನವನ್ನೂ ನಡೆಸಲಾಗುತ್ತಿದೆ.
ಕೆ.ಎಸ್.ಲತಾಕುಮಾರಿ ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net