ಬೇಲೂರು: ಬೇಲೂರಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ ಸಂದರ್ಭ ವಿನೂತನ ಪರಿಸರ ಸ್ನೇಹಿ ಕಾರ್ಯಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಜೂನ್ 5ರ ವಿಶ್ವ ಪರಿಸರ ದಿನಾಚರಣೆಯಂದು ‘ಹಸಿರು ಹಾಸನ’ ಶೀರ್ಷಿಕೆಯಡಿ ಬೇಲೂರಿನಲ್ಲಿ 50 ಸಾವಿರ ಗಿಡಗಳನ್ನು ನೆಡುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ ಎಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.
ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣ ಉದ್ದೇಶದಿಂದ ತಾಲೂಕು ಆಡಳಿತದಿಂದ ಹಸಿರು ಹಾಸನ ಅಭಿಯಾನಕ್ಕೆ ಪೂರ್ವಭಾವಿಯಾಗಿ ಪಟ್ಟಣದ ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಪಟ್ಟಣದ ಸಮೀಪ ಕ್ರೀಡಾಂಗಣ, ಜೂನಿಯರ್ ಕಾಲೇಜು ಆವರಣ, ಪಟ್ಟಣದ ಉದ್ಯಾನಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ಕೆ ಜೂನ್ 5 ರಂದು ಚಾಲನೆ ನೀಡಲಾಗುವುದು. ಜತೆಗೆ ಒತ್ತುವರಿ ತಡೆಯುವ ಉದ್ದೇಶದಿಂದ ರುದ್ರಭೂಮಿಗಳಲ್ಲೂ ಗಿಡಗಳನ್ನು ನೆಡಲಾಗುವುದು. ಅಭಿಯಾನ ಯಶಸ್ವಿಯಾಗಲು ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ಮತ್ತು ಸಂಘ ಸಂಸ್ಥೆಗಳವರು ಕೈಜೋಡಿಸಬೇಕು ಎಂದರು.
ತಾಪಂ ಇಒ ಸತೀಶ್ ಕುಮಾರ್ ಮಾತನಾಡಿ, ತಾಲೂಕಿನ 37 ಗ್ರಾಮ ಪಂಚಾಯಿತಿಗಳಲ್ಲಿನ ಶಾಲಾ ಆವರಣ, ರುದ್ರಭೂಮಿ ಹಾಗೂ ಸರ್ಕಾರಿ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ. ಪ್ರತಿಯೊಬ್ಬರೂ ಗಿಡ ನೆಟ್ಟು ಅದರ ಪೋಷಣೆಗೆ ಮುಂದಾಗಬೇಕು. ಬೇಲೂರನ್ನು ಗ್ರೀನ್ ಸಿಟಿಯಾಗಿ ರೂಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಅಕ್ರಂ ಶರೀಫ್ ಮಾತನಾಡಿ, ಜಿಲ್ಲಾಧಿಕಾರಿಗಳ ಪರಿಸರ ಸ್ನೇಹಿ ಯೋಜನೆ ಸ್ವಾಗತಿಸುತ್ತೇವೆ. ಪುರಸಭೆ ವ್ಯಾಪ್ತಿಯ ಉದ್ಯಾನಗಳು ಮತ್ತು ಖಾಲಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಪುರಸಭೆಯಿಂದ ಕೈಗೊಳ್ಳಲಾಗುವುದು. ಪುರಸಭೆಗೆ ಸೇರಿದ ಇತರ 35 ಉದ್ಯಾನಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭಾ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಹಸಿರುಭೂಮಿ ಪ್ರತಿಷ್ಠಾನದಿಂದ ಪ್ರತಿವರ್ಷ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಬಾರಿ ತಾಲೂಕು ಆಡಳಿತದ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಹಾಗೂ ಪಟ್ಟಣದ ಅಕ್ಕಪಕ್ಕದ ಗ್ರಾಮಗಳ ಜನರು ಕಸವನ್ನು ಪಟ್ಟಣ ವ್ಯಾಪ್ತಿಗೆ ತಂದು ಹಾಕುವುದರಿಂದ ಅನೈರ್ಮಲ್ಯ ಹೆಚ್ಚುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಗ್ಗಾವಿ, ಬಿಇಒ ಭಾಗ್ಯಮ್ಮ, ಸಾಮಾಜಿಕ ಅರಣ್ಯಾಧಿಕಾರಿ ಶೈಲಾ, ಯಗಚಿ ಯೋಜನೆ ಎಇಇ ರಾಮಕೃಷ್ಣ, ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಸದಸ್ಯರಾದ ಜಮಾಲ್, ಸದಸ್ಯ ಜಗದೀಶ್, ದೇಗುಲ ಇಒ ಯೋಗೇಶ್ ಸೇರಿದಂತೆ ಇತರರಿದ್ದರು.