ಬೇಲೂರು: ಅಂಗವಿಕಲರ ಜೀವನಮಟ್ಟ ಸುಧಾರಣೆ ಹಾಗೂ ಸ್ವಾವಲಂಬಿ ಬದುಕು ನಡೆಸುವ ಉದ್ದೇಶದಿಂದ 2025-26ನೇ ಸಾಲಿನಲ್ಲಿ ಅಂಗವಿಕಲರ ವಿವಿಧೋದ್ದೇಶ ಪುನರ್ವಸತಿ ಯೋಜನೆಯಡಿ 11 ಜನರಿಗೆ ತ್ರಿಚಕ್ರ ವಾಹನ ವಿತರಿಸಲಾಗಿದ್ದು, ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಅಂಗವಿಕಲರ ವಿವಿಧೋದ್ದೇಶ ಪುನರ್ವಸತಿ ಕೇಂದ್ರದಿಂದ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಶನಿವಾರ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ಕ್ಷೇತ್ರದಲ್ಲಿರುವ ಬಡವರು ಹಾಗೂ ನಿರ್ಗತಿಕರನ್ನು ಗುರುತಿಸಿ ಅಗತ್ಯವಿರುವ ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದೇ ರೀತಿ ಅಂಗವಿಕಲರ ವಿವಿಧೋದ್ದೇಶ ಪುನರ್ವಸತಿ ಯೋಜನೆಯಡಿ 11 ಲಕ್ಷ ರೂ. ಅನುದಾನದಲ್ಲಿ 11 ಜನ ಫಲಾನುಭವಿಗಳನ್ನು ಜಾತಿ, ಧರ್ಮ ಎನ್ನದೆ ಅರ್ಹರನ್ನು ಗುರುತಿಸಿ ತ್ರಿಚಕ್ರ ವಾಹನಗಳನ್ನು ವಿತರಿಸಿದ್ದೇವೆ. ಜತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದಕ್ಕಾಗಿ ಅವರೆಲ್ಲರನ್ನೂ ಸನ್ಮಾನಿಸಿ ವಾಹನವನ್ನು ನೀಡಿದ್ದೇವೆ. ಫಲಾನುಭವಿಗಳು ಈ ವಾಹನದ ಸೌಲಭ್ಯ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಅಂಗವಿಕಲರ ವಿವಿಧೋದ್ದೇಶ ಪುನರ್ವಸತಿ ಯೋಜನಾಧಿಕಾರಿ ತಾಹಿರಾ ಬಾನು, ಸಹಾಯಕ ಕೃಷಿ ನಿರ್ದೇಶಕ ಕಾಂತರಾಜು, ಪಿಡಿಒ ಅಶೋಕ್ ಕುಮಾರ್, ಬಿಎಸ್‌ಪಿ ಮುಖಂಡ ಗಂಗಾಧರ್ ಬಹುಜನ್, ಬಿಜೆಪಿ ಮುಖಂಡರದ ಪ್ರಸನ್ನ ಇತರರಿದ್ದರು.