ಆಶ್ರಯ ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಳ್ಳಿ

ಅರಕಲಗೂಡಿನಲ್ಲಿ ಪಪಂ ಮಾಜಿ ಸದಸ್ಯ ಎನ್. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲೋಕೇಶ್, ನಿರಂಜನ್, ಜಿಮ್ ಸೋಮು, ಮಂಜಣ್ಣ ಇದ್ದರು.
ಅರಕಲಗೂಡಿನಲ್ಲಿ ಪಪಂ ಮಾಜಿ ಸದಸ್ಯ ಎನ್. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲೋಕೇಶ್, ನಿರಂಜನ್, ಜಿಮ್ ಸೋಮು, ಮಂಜಣ್ಣ ಇದ್ದರು.
Published on
ಅರಕಲಗೂಡು: ಪಪಂ ವ್ಯಾಪ್ತಿಯ ಹಂಪಾಪುರ ಬಳಿ ಹಲವು ವರ್ಷಗಳಿಂದ ರಾಜಕೀಯ ಕಾರಣಕ್ಕಾಗಿ ನನೆಗುದಿಗೆ ಬಿದ್ದಿರುವ 353 ಆಶ್ರಯ ನಿವೇಶನಗಳನ್ನು ತ್ವರಿತವಾಗಿ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪಪಂ ಮಾಜಿ ಸದಸ್ಯ ಎನ್. ರವಿಕುಮಾರ್ ಒತ್ತಾಯಿಸಿದರು.
ಪಟ್ಟಣದಲ್ಲಿ ಸುಮಾರು 20 ವರ್ಷಗಳ ಹಿಂದೆ 470ಕ್ಕೂ ಅಧಿಕ ಆಶ್ರಯ ನಿವೇಶನಗಳನ್ನು ಅಭಿವೃದ್ಧಿಪಡಿಸಿ, ಆರಂಭದಲ್ಲಿ 120 ಮಂದಿಗೆ ಹಂಚಿಕೆ ಮಾಡಲಾಗಿತ್ತು. ಬಳಿಕ ಬದಲಾಗಿದ ರಾಜಕೀಯ ಪರಿಸ್ಥಿತಿಯಿಂದ ಉಳಿದ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಸ್ಥಗಿತಗೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಒಬ್ಬರು ಗೆದ್ದರೆ ಸೋತ ಮತ್ತೊಬ್ಬರು ಸಲ್ಲದ ಕಾರಣವೊಡ್ಡಿ ಕಾಲೆಳೆಯುತ್ತಿದ್ದ ಪರಿಣಾಮ ನಿವೇಶನರಹಿತರಿಗೆ ನಿವೇಶನ ಹಂಚಿಕೆಗೆ ತೊಡಕಾಗಿದೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಪಡಿಸಿದರು.
ಅಂದು ಪಟ್ಟಣ ಇಷ್ಟೊಂದು ವಿಸ್ತಾರ ಹೊಂದಿರಲಿಲ್ಲ. ಆದರೆ ಈಗ 17 ವಾರ್ಡ್‌ಗಳನ್ನು ಒಳಗೊಂಡ ಪಟ್ಟಣದಲ್ಲಿ 5 ಸಾವಿರಕ್ಕೂ ಅಧಿಕ ಜನವಸತಿ ಪ್ರದೇಶವಿದ್ದು, ಪ್ರತಿ ವಾರ್ಡ್‌ನಲ್ಲೂ ಕನಿಷ್ಠ 20 ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬಹುದಾಗಿದೆ. ಪ್ರಸ್ತುತ ಪಟ್ಟಣ ಪಂಚಾಯಿತಿಯಲ್ಲಿ ಚುನಾಯಿತ ಆಡಳಿತ ಮಂಡಳಿ ಇಲ್ಲದಿರುವುದರಿಂದ, ಕನಿಷ್ಠ 10 ವರ್ಷಗಳಿಂದ ಪಟ್ಟಣದಲ್ಲಿ ವಾಸವಿರುವ, ಮತದಾರರ ಪಟ್ಟಿಯಲ್ಲಿ ಹೆಸರಿರುವ ಹಾಗೂ ಜಮೀನು, ನಿವೇಶನ ಅಥವಾ ಮನೆ ಇಲ್ಲದ ನೈಜ ಬಡ ಕುಟುಂಬಗಳನ್ನು ಗುರುತಿಸಿ ಆಶ್ರಯ ನಿವೇಶನ ನೀಡುವುದು ಸೂಕ್ತ. ಈ ನಿಟ್ಟಿನಲ್ಲಿ ಆಶ್ರಯ ಸಮಿತಿ ವಿಶೇಷ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಜಮೀನು ಅಥವಾ ಸೈಟ್ ಖರೀದಿಸುವುದು ದೀನದಲಿತರು ಹಾಗೂ ಕಡುಬಡವರಿಗೆ ಅಸಾಧ್ಯವಾಗಿದೆ. ಕನಿಷ್ಠ 20 ರಿಂದ 30 ಲಕ್ಷ ರೂ. ವರೆಗೆ ಸೈಟ್‌ಗಳ ಬೆಲೆ ಏರಿಕೆಯಾಗಿರುವುದರಿಂದ, ಸರ್ಕಾರದ ಸವಲತ್ತುಗಳು ನಿಜವಾದ ಅರ್ಹರಿಗೆ ತಲುಪದಿದ್ದರೆ ಬಡವರು ಎಂದಿನಂತೆಯೇ ಬಡವರಾಗಿಯೇ ಉಳಿಯಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿಂದೆ ಉಚಿತವಾಗಿ ಆಶ್ರಯ ನಿವೇಶನ ಪಡೆದ ಹಲವರು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. 20 ವರ್ಷಗಳ ಪರಭಾರೆ ನಿಷೇಧವಿದ್ದರೂ, ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಇಂತಹ ವರ್ಗಾವಣೆಗಳು ಹೇಗೆ ನಡೆದವು ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಬಡವರಿಗೆ ಹಣದ ಆಮಿಷ ತೋರಿಸಿ ಆಶ್ರಯ ನಿವೇಶನಗಳಲ್ಲಿ ಹಣವಂತರು ಭವ್ಯ ಬಂಗಲೆಗಳನ್ನು ನಿರ್ಮಿಸಿಕೊಂಡಿರುವುದು ಕಂಡುಬಂದಿದೆ ಎಂದು ದೂರಿದರು.
ಹೀಗಾಗಿ ಉಳಿದಿರುವ 353 ಆಶ್ರಯ ನಿವೇಶನಗಳನ್ನು ಪಾರದರ್ಶಕವಾಗಿ ನೈಜ ಫಲಾನುಭವಿಗಳಿಗೆ ಹಂಚಿಕೆ ಮಾಡಿದರೆ, ಅನೇಕ ಬಡ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ದೊರೆಯಲಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಎ. ಮಂಜು ಹಾಗೂ ಆಶ್ರಯ ಸಮಿತಿ ಸದಸ್ಯರು ನ್ಯಾಯಸಮ್ಮತವಾಗಿ ಹಂಚಿಕೆ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಪಪಂ ಮಾಜಿ ಅಧ್ಯಕ್ಷ ಲೋಕೇಶ್, ಮುಖಂಡರಾದ ನಿರಂಜನ್, ಜಿಮ್ ಸೋಮು ಹಾಗೂ ಮಂಜಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net