ಬೇಲೂರು ಸ್ಟೋನ್ ಕ್ರಷರ್‌ಗೆ ತಹಸೀಲ್ದಾರ್ ಭೇಟಿ

ಪಟ್ಟಣ ಸಮೀಪದ ಪ್ರಸಾದಿಹಳ್ಳಿ ರಸ್ತೆಯಲ್ಲಿರುವ ಕ್ರಷರ್‌ನಿಂದ  ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ಗಿರೀಶ್, ಧರ್ಮೇಗೌಡ, ಪುಟ್ಟಸ್ವಾಮಿಗೌಡ, ಹೇಮಂತ್, ಕಿರಣ್, ಕುಮಾರ್, ಮೋಹನ್, ದಯಾನಂದ್ ಸೇರಿದಂತೆ ಇತರರಿದ್ದರು.
ಪಟ್ಟಣ ಸಮೀಪದ ಪ್ರಸಾದಿಹಳ್ಳಿ ರಸ್ತೆಯಲ್ಲಿರುವ ಕ್ರಷರ್‌ನಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಾದ ಗಿರೀಶ್, ಧರ್ಮೇಗೌಡ, ಪುಟ್ಟಸ್ವಾಮಿಗೌಡ, ಹೇಮಂತ್, ಕಿರಣ್, ಕುಮಾರ್, ಮೋಹನ್, ದಯಾನಂದ್ ಸೇರಿದಂತೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಶೀಲನೆ ಮುಗಿಯುವವರೆಗೆ ಬಂದ್‌ಗೆ ಸೂಚನೆ
  • ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರ ಪ್ರತಿಭಟನೆ
ಬೇಲೂರು: ಪಟ್ಟಣ ಸಮೀಪದ ಪ್ರಸಾದಿಹಳ್ಳಿ ರಸ್ತೆಯ ಬೇಲೂರು ಸ್ಟೋನ್ ಕ್ರಷರ್‌ಗೆ ಶನಿವಾರ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿದಿನ ಎಷ್ಟು ಲೋಡ್ ಹೊರ ಹೋಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಲು ಸಿಸಿ ಕ್ಯಾಮರಾದ ಡಿವಿಆರ್ ವಶಕ್ಕೆ ಪಡೆದು, ಪರಿಶೀಲನೆ ಮುಗಿಯುವವರೆಗೆ ಕ್ರಷರ್ ಬಂದ್ ಮಾಡುವಂತೆ ವ್ಯವಸ್ಥಾಪಕರಿಗೆ ಸೂಚಿಸಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಕ್ರಷರ್‌ನಲ್ಲಿ ನಿಯಮ ಮೀರಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಷರ್ ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಕ್ರಷರ್‌ನಿಂದ ಬರುವ ಧೂಳಿನಿಂದ ಜನರಿಗೆ ಸಮಸ್ಯೆಯಾಗುತ್ತಿರುವುದು, ನೆಲದಲ್ಲಿ ಆಳವಾಗಿ ಕಲ್ಲು ಸಿಡಿಸಿರುವುದು ಕಂಡು ಬಂದಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವ ರೀತಿ ಅನುಮತಿ ನೀಡಿದ್ದಾರೆ, ಕ್ರಷರ್ ಮಾಲೀಕರು ಯಾವ ನಿಯಮ ಮೀರಿದ್ದಾರೆ ಎಂಬುದನ್ನು ಪರಿಶೀಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು. ಅಲ್ಲಿವರೆಗೂ ಕ್ರಷರ್ ಕಾರ್ಯನಿರ್ವಹಿಸದಂತೆ ತಿಳಿಸಿದ್ದೇವೆ. ನಿಯಮ ಮೀರಿ ಕೆಲಸ ಮಾಡುತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸನ್ಯಾಸಿಹಳ್ಳಿ ಗ್ರಾಮದ ಮುಖಂಡ ನರೇಂದ್ರ ಮಾತನಾಡಿ, ಕ್ರಷರ್‌ನವರು ಅಕ್ಕಪಕ್ಕದ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ. ಭೂಮಿಯ ತಳ ಭಾಗದಲ್ಲಿ 100 ಅಡಿಗಿಂತಲೂ ಹೆಚ್ಚಿನ ಅಳವಾದ ಗುಂಡಿಗಳನ್ನು ತೆಗೆದು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಮಾರುತಿ ನಗರ, ಸನ್ಯಾಸಿಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳ ಮನೆಗಳಿಗೆ ಹಾನಿಯಾಗಿದ್ದು, ಕಟ್ಟಡಗಳು ಬಿರುಕು ಬಿಟ್ಟಿವೆ. ರಿಗ್ ಬ್ಲಾಸ್ಟ್ ಮಾಡುವ ಸಂದರ್ಭ ಭೂಕಂಪವಾದ ಅನುಭವ ಉಂಟಾಗುತ್ತಿದೆ. ಈ ಬಗ್ಗೆ ಕ್ರಷರ್ ನವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕ್ರಷರ್ ಕೆಲಸ ನಿಲ್ಲಿಸಿ ಗ್ರಾಮಸ್ಥರಿಗೆ ನ್ಯಾಯ ಕೊಡಿಸಬೇಕು ಎಂದರು.
ಮಾರುತಿ ನಗರದ ಮಂಜೇಗೌಡ ಮಾತನಾಡಿ, ಕ್ರಷರ್‌ನಿಂದ ಕಟ್ಟಡಗಳಿಗೆ ಹಾನಿಯಾಗುತ್ತಿರುವ ಜತೆಗೆ ಪ್ರಾಣ ಹಾನಿಯಾಗುವ ಸಾಧ್ಯತೆಗಳಿವೆ. ಗಣಿಗಾರಿಕೆಯ ಡಸ್ಟ್‌ನಿಂದ ಸುತ್ತ ಮುತ್ತಲಿನ ಜಮೀನಿನ ಜೋಳ, ಅಡಕೆ ಸೇರಿದಂತೆ ಇತರ ವಿವಿಧ ಬೆಳೆಗಳು ನಾಶವಾಗುತ್ತಿವೆ. ತಾಲೂಕು ಆಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿಗಾರಿಕೆ ನಿಲ್ಲಿಸಿ ಸುತ್ತ ಮುತ್ತಲಿನ ಗ್ರಾಮಸ್ಥರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಗಿರೀಶ್, ಧರ್ಮೇಗೌಡ, ಪುಟ್ಟಸ್ವಾಮಿಗೌಡ, ಹೇಮಂತ್, ಕಿರಣ್, ಕುಮಾರ್, ಮೋಹನ್, ದಯಾನಂದ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net