ಕಲಬೆರಕೆ ಬೆಣ್ಣೆ ಮಾರಾಟಗಾರರ ಮೇಲೆ ದಿಢೀರ್ ದಾಳಿ

ಚನ್ನರಾಯಪಟ್ಟಣದ ಶನಿವಾರ ಸಂತೆಯಲ್ಲಿ ಬೆಣ್ಣೆ ಮಾರಾಟಗಾರರ ಮೇಲೆ ದಾಳಿ ನಡೆಸಿದ ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಹಾಗೂ ಅಂಕಿತಾಧಿಕಾರಿ ಡಾ.ಜಗದೀಶ್ ಗಂಗಣ್ಣವರ ನೇತೃತ್ವದ ತಂಡ ಕಾನೂನಾತ್ಮಕ ಆಹಾರ ಮಾದರಿಗಳನ್ನು ವಶಕ್ಕೆ ಪಡೆಯಿತು.
ಚನ್ನರಾಯಪಟ್ಟಣದ ಶನಿವಾರ ಸಂತೆಯಲ್ಲಿ ಬೆಣ್ಣೆ ಮಾರಾಟಗಾರರ ಮೇಲೆ ದಾಳಿ ನಡೆಸಿದ ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಹಾಗೂ ಅಂಕಿತಾಧಿಕಾರಿ ಡಾ.ಜಗದೀಶ್ ಗಂಗಣ್ಣವರ ನೇತೃತ್ವದ ತಂಡ ಕಾನೂನಾತ್ಮಕ ಆಹಾರ ಮಾದರಿಗಳನ್ನು ವಶಕ್ಕೆ ಪಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆ ಕಾರ್ಯಾಚರಣೆ
ಚನ್ನರಾಯಪಟ್ಟಣ: ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆಯ ಅಧಿಕಾರಿಗಳು ಶನಿವಾರ ಬೆಳಗ್ಗೆ ಕಲಬೆರಕೆ ಬೆಣ್ಣೆ ಮಾರಾಟಗಾರರ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಬೆಣ್ಣೆ ಕಲಬೆರಕೆ ದಂಧೆ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆಯ ಆಯುಕ್ತ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಹಾಗೂ ಅಂಕಿತಾಧಿಕಾರಿ ಜಗದೀಶ್ ಗಂಗಣ್ಣವರ ರಹಸ್ಯ ಕಾರ್ಯಾಚರಣೆಗೆ ನೀಲಿನಕ್ಷೆ ಸಿದ್ಧಪಡಿಸಿದ್ದರು. ಅದರಂತೆ, ಶನಿವಾರ ಬೆಳಗ್ಗೆ 6 ಗಂಟೆಗೆ ಆಹಾರ ಸುರಕ್ಷತಾ ಇಲಾಖೆಯ 20 ಅಧಿಕಾರಿಗಳ ವಿಶೇಷ ತಂಡ ಬೆಣ್ಣೆ ಮಾರಾಟ ಮಾಡುವ ಎಲ್ಲ ಕಡೆ ಕಾರ್ಯಾಚರಣೆ ನಡೆಸಿತು.
ಪಟ್ಟಣದ ಶನಿವಾರ ಸಂತೆಯಲ್ಲಿ ಹೆಚ್ಚು ಬೆಣ್ಣೆ ಮಾರಾಟವಾಗುವುದರಿಂದ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು ಸಂಶಯಾಸ್ಪದವಾಗಿ ಕಂಡುಬಂದ 13 ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಈ ಮಾದರಿಗಳನ್ನು ಬೆಂಗಳೂರಿನ ರಾಜ್ಯ ಆಹಾರ ಪ್ರಯೋಗಾಲಯಕ್ಕೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಹಾಗೂ ಅಂಕಿತಾಧಿಕಾರಿ ಜಗದೀಶ್ ಗಂಗಣ್ಣವರ, ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಬೆಣ್ಣೆ ದೊರೆಯುವಂತಾಗಬೇಕು. ಆದರೆ, ಹಣದ ಆಸೆಗಾಗಿ ಕೆಲವರು ವಿವಿಧ ಎಣ್ಣೆಗಳು, ಸಂರಕ್ಷಕಗಳು, ರಾಸಾಯನಿಕಗಳನ್ನು ಬೆರೆಸಿ ಕಲಬೆರಕೆ ಮಾಡಿ ಮಾರಾಟ ಮಾರುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದರು.
ಯಾವುದೇ ಆಹಾರ ಪದಾರ್ಥಗಳನ್ನು ಕಲಬೆರಕೆ ಮಾಡುವುದು ಕಾನೂನು ಉಲ್ಲಂಘನೆಯಷ್ಟೇ ಅಲ್ಲ ಗಂಭೀರ ಅಪರಾಧವಾಗಿದೆ. ಸಾರ್ವಜನಿಕರ ಜೀವದೊಂದಿಗೆ ಆಟವಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ಸಮನ್ವಯದಲ್ಲಿ ನಮ್ಮ ಅಧಿಕಾರಿಗಳಿಂದ ನಿರಂತರವಾಗಿ ಇಂತಹ ದಾಳಿಗಳು ನಡೆಯಲಿವೆ. ಕಲಬೆರಕೆ ನಡೆಸುವವರ ಕ್ರಿಮಿನಲ್ ಪ್ರಕರಣ ದಾಖಲಿಸುವುದು. ಅಗತ್ಯವಿದ್ದಲ್ಲಿ ಕಠಿಣ ಶಿಕ್ಷೆ ವಿಧಿಸುವ ಕ್ರಮ ಅನುಸರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆಹಾರ ಕಲಬೆರಕೆ ತಡೆಯಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಮತ್ತು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹೊಸ ಕಾನೂನು ಜಾರಿಯಾದರೆ ಕಲಬೆರಕೆದಾರರಿಗೆ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ.ದಿಂದ 20 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಆರೋಗ್ಯಕ್ಕೆ ಹಾನಿಯಾಗುವ ಪದಾರ್ಥಗಳ ಮಾರಾಟಕ್ಕೆ ಕನಿಷ್ಠ 6 ತಿಂಗಳಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಹಾನಿಕರ ವಸ್ತುಗಳ ಮಾರಾಟದಿಂದ ಮರಣ ಸಂಭವಿಸಿದರೆ 7 ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೆ ಕಾನೂನು ಅವಕಾಶವಿದೆ ಎಂದರು.
ಕಾರ್ಯಾಚರಣೆಯಲ್ಲಿ ಚನ್ನರಾಯಪಟ್ಟಣ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಎನ್. ಕುಮಾರ್, ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ತಾಲೂಕು ಆರೋಗ್ಯ ಅಧಿಕಾರಿ ಡಾ.ಪಿ.ತೇಜಸ್ವಿನಿ, ಆಹಾರ ಸುರಕ್ಷತಾ ಅಧಿಕಾರಿಗಳಾದ ಕೆ.ವಿನಯ್, ಶರತ್, ಅಡ್ಡಬಸವೇಗೌಡ,ಬೆಂಗಳೂರಿನ ಆಹಾರ ಸುರಕ್ಷತಾ ಅಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net