ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ ಪ್ರಾರಂಭಿಸಿ

ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಲತಾಕುಮಾರಿ ಮಾತನಾಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ಹಸೀನಾ ತಾಜ್, ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ನಳಿನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ರಾಮಕೃಷ್ಣ, ತಹಸೀಲ್ದಾರ್ ಗೀತಾ ಇತರರಿದ್ದರು.
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಲತಾಕುಮಾರಿ ಮಾತನಾಡಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ಹಸೀನಾ ತಾಜ್, ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರಾದ ನಳಿನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ರಾಮಕೃಷ್ಣ, ತಹಸೀಲ್ದಾರ್ ಗೀತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ ಪ್ರಾರಂಭಿಸಿ
  • ಜಿಲ್ಲಾಧಿಕಾರಿ ಲತಾಕುಮಾರಿ ಸೂಚನೆ
  • ಅಧಿಕಾರಿಗಳೊಂದಿಗೆ ಸಭೆ
ಹಾಸನ: ಜಿಲ್ಲೆಯ ಯುವಜನತೆಗೆ ನೆರವಾಗುವಂತೆ ಹಾಸನ ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನದಲ್ಲಿರುವ ತಾಂತ್ರಿಕ ವಿಭಾಗದ ಕೊಠಡಿಯಲ್ಲಿ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ ಹಾಸನ ಸ್ಪರ್ಧಾ ಕುಟೀರ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು ಗ್ರಂಥಾಲಯದಲ್ಲಿ ಓದುಗರಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲು ನಿರ್ದೇಶನ ನೀಡಿದರು.
ಜಿಲ್ಲಾ ಗ್ರಂಥಾಲಯ ಅಧೀನದಲ್ಲಿರುವ ವಾಹನಗಳನ್ನು ನಿಲ್ಲಿಸಲು ನಿರ್ಮಿಸಿರುವ ಶೆಡ್‌ನಲ್ಲಿ ಪರಾಮರ್ಶನ ವಿಭಾಗದ ಓದುಗರಿಗೆ ಅಧ್ಯಯನ ಮಾಡಲು ಸೂಕ್ತ ರೀತಿಯಲ್ಲಿ ಸ್ಥಳಾವಕಾಶ ವಿಸ್ತರಿಸಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಹಾಸನ ಸ್ಪರ್ಧಾ ಕುಟೀರ ಕೋಚಿಂಗ್ ಸೆಂಟರ್‌ನಲ್ಲಿ ಸೀಟಿಂಗ್ ಆರೆಂಜ್ ಮೆಂಟ್ ಹಾಗೂ ಡಿಜಿಟಲ್ ಬೋರ್ಡ್ ಅಳವಡಿಸಿ ಯಾವುದೇ ಇಲಾಖೆಯ ನೋಟಿಫಿಕೇಶನ್ ಆಗಲಿ ಅದರ ಮಾಹಿತಿಯನ್ನು ಪ್ರಕಟಿಸಿ ಮಕ್ಕಳಿಗೆ ಲಭ್ಯವಾಗುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಕೆಳಭಾಗಕ್ಕೆ ಸ್ಥಳಾಂತರ ಮಾಡಿ:
ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನ ಮಾಡಲು ಬರುವ ಮಕ್ಕಳ ನೋಂದಣಿ ಮಾಡಿಸಿ ಎಂದು ಸೂಚನೆ ನೀಡಿದರು. ಮಕ್ಕಳ ಬಳಕೆಗೆ ಅನುವು ಆಗುವಂತೆ ಕಲಾಭವನದ ಮೂರನೆ ಮಹಡಿಯಲ್ಲಿರುವ ಗ್ರಂಥಾಲಯವನ್ನು ಕೆಳಭಾಗಕ್ಕೆ ಸ್ಥಳಾಂತರ ಮಾಡಿ ಗ್ರಂಥಾಲಯ ಮತ್ತು ಕಲಾಭವನಕ್ಕೆ ಸಂಪರ್ಕ ಕಲ್ಪಿಸಲು ಒಂದು ಗೇಟ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಕಲಾಭವನದ ಹೊರಭಾಗದಲ್ಲಿ ಮೈಕ್ ಬಳಕೆಯನ್ನು ನಿಷೇಧಿಸುವಂತೆ ಸೂಚನೆ ನೀಡಿದರು.
ಕ್ಯಾಂಟೀನ್ ಪ್ರಾರಂಭಿಸಿ: ಓದುವ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಂಥಾಲಯದ ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಅವರು, ಗ್ರಂಥಾಲಯದಲ್ಲಿ ಓದುವ ಮಕ್ಕಳಿಗೆ ಉಚಿತ ವೈಫೈ ಮತ್ತು ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪರಾಮರ್ಶನ ವಿಭಾಗದಲ್ಲಿ ಓದುಗರು ಕುಳಿತುಕೊಳ್ಳಲು ಅಗತ್ಯ ಪಿಠೋಪಕರಣಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಜತೆಗೆ ನಗರ ಗ್ರಂಥಾಲಯದ ಹಳೆಯ ಕಟ್ಟಡದಲ್ಲಿರುವ ದಿನಪತ್ರಿಕೆ ವಿಭಾಗದಲ್ಲಿ ಕೆಲವು ಪರಿವರ್ತನೆಗಾಗಿ ಯೋಜನೆ ತಯಾರಿಸಿ ಎಂದು ತಿಳಿಸಿದರು.
ಗ್ರಂಥಾಲಯದ ಆವರಣದಲ್ಲಿ ಗಿಡಗಳನ್ನು ನೆಡುವುದು, ಸ್ವಚ್ಛತೆ ಕಾಪಾಡಲು ಕಸದ ಬುಟ್ಟಿಗಳನ್ನಿಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು, ಗ್ರಂಥಾಲಯದ ಆವರಣದಲ್ಲಿ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ವಹಣೆ ಮಾಡಲು ಕಾವಲುಗಾರನ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ಹಳೆಯ ವಾಹನಗಳನ್ನು ವಿಲೇವಾರಿ ಮಾಡಿ
ವಾಹನಗಳ ಪಾರ್ಕಿಂಗ್ ಶೆಡ್‌ನಲ್ಲಿ ಇರುವ ಹಳೆಯ ವಾಹನಗಳನ್ನು ವಿಲೇವಾರಿ ಮಾಡಿ ಆ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳಲು ಡಿಸಿ ಸೂಚನೆ ನೀಡಿದರು.
ಸರ್ಕಾರಿ ರಜೆ ದಿನಗಳಲ್ಲಿಯೂ ಮಕ್ಕಳು ಓದಲು ಬರುವುದರಿಂದ ಗ್ರಂಥಾಲಯ ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಿ. ಗ್ರಂಥಾಲಯದ ಮುಂಭಾಗದಲ್ಲಿರುವ ಹೂವಿನ ಹಾಗೂ ಹಣ್ಣಿನ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಂಥಾಲಯಕ್ಕೆ ಬರುವ ಓದುಗರಿಗೆ ತೊಂದರೆ ಆಗದಂತೆ ಯು.ಜಿ.ಡಿ.ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆಗೆ ನಿಗಾ ವಹಿಸಿ. ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಎಷ್ಟು ಹಣಬೇಕು ಎಂಬುದರ ಬಗ್ಗೆ ಕೂಡಲೇ ವರದಿ ನೀಡಿ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ ನಿರ್ಮಾಣಕ್ಕೆ ಗ್ರಂಥಾಲಯ ಆವರಣದ ಕಾಂಪೌಂಡನ್ನು ಕಡಿಮೆ ವೆಚ್ಚದಲ್ಲಿ ಎತ್ತರಿಸಲು ಕ್ರಿಯಾ ಯೋಜನೆ ತಯಾರಿಸಿ ಎಂದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ಹಸೀನಾ ತಾಜ್, ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕಿ ನಳಿನಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಮಕೃಷ್ಣ, ತಹಸೀಲ್ದಾರ್ ಗೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net