ಹಾಸನ ವಿವಿಯಲ್ಲಿ ಸಿಬ್ಬಂದಿ ಕೊರತೆ

ಹಾಸನ ವಿದ್ಯಾಲಯ
ಹಾಸನ ವಿದ್ಯಾಲಯ
Published on

ಪ್ರಮುಖ ಮುಖ್ಯಾಂಶಗಳು

  • ಹಾಸನ ವಿವಿಯಲ್ಲಿ ಸಿಬ್ಬಂದಿ ಕೊರತೆ
  • ಕಾಯಂ ಪ್ರಾಧ್ಯಾಪಕರಿಲ್ಲ, ಬೋಧಕೇತರರೂ ಇಲ್ಲ
  • ಖಾಲಿ ಇರುವ ಮಂಜೂರಾದ 244 ಹುದ್ದೆಗಳು !
ಹಾಸನ: ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸು ಸಾಕಾರಗೊಳಿಸಲು ಅಸ್ತಿತ್ವಕ್ಕೆ ಬಂದ ಹಾಸನ ವಿಶ್ವವಿದ್ಯಾಲಯ ಸಿಬ್ಬಂದಿ ಕೊರತೆಯಿಂದ ಅಳಿವಿನಂಚಿನಲ್ಲಿ ನಿಂತಿದೆ. ಕಾಯಂ ಪ್ರಾಧ್ಯಾಪಕರಿಲ್ಲ, ಬೋಧಕೇತರ ಸಿಬ್ಬಂದಿ ಇಲ್ಲ, ಆಡಳಿತ ವ್ಯವಸ್ಥೆ ಸಂಪೂರ್ಣ ಹೊರಗುತ್ತಿಗೆ ನೌಕರರ ಮೇಲೇ ನಿಂತಿರುವ ಸ್ಥಿತಿ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ತಳ್ಳಿದೆ.
ಹಾಸನ ವಿಶ್ವವಿದ್ಯಾಲಯಕ್ಕೆ ಮಂಜೂರಾಗಿರುವ 27 ಪ್ರಾಧ್ಯಾಪಕರ ಹುದ್ದೆಗಳು ಸಂಪೂರ್ಣ ಖಾಲಿ ಉಳಿದಿವೆ. ಇದುವರೆಗೂ ಒಬ್ಬ್ಬ ಪ್ರಾಧ್ಯಾಪಕರನ್ನು ಕಾಯಂ ನೇಮಕಾತಿ ಮಾಡಿಕೊಂಡಿಲ್ಲ. ಇದರ ಪರಿಣಾಮ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆ ಬಹುತೇಕ ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ 10 ಪ್ರಾಧ್ಯಾಪಕರು ಹಾಸನ ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅವರು ತಮ್ಮ ಮಾತೃ ವಿದ್ಯಾಲಯಕ್ಕೆ ಮರಳಲು ಸಿದ್ಧರಾಗಿದ್ದು ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಆ ಆದೇಶ ಹೊರಬಿದ್ದ ಕ್ಷಣದಲ್ಲೇ ಅವರು ಹಿಂತಿರುಗುವ ಸಾಧ್ಯತೆ ಇದೆ. ಹೀಗಾದರೆ ಹಾಸನ ವಿಶ್ವವಿದ್ಯಾಲಯದಲ್ಲಿ ಬೋಧನಾ ವ್ಯವಸ್ಥೆ ಮತ್ತಷ್ಟು ಹದಗೆಡುವ ಭೀತಿ ಎದುರಾಗಿದೆ. ಕಾಯಂ ನೇಮಕಾತಿ ಬದಲು ತಾತ್ಕಾಲಿಕ ವ್ಯವಸ್ಥೆಯನ್ನು ಮುಂದುವರಿಸಲು ಮತ್ತೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದೆ.
ಬೋಧಕೇತರ ಹುದ್ದೆಯೂ ಖಾಲಿ: 245 ಮಂಜೂರಾದ ಬೋಧಕೇತರ ಹುದ್ದೆಗಳಲ್ಲಿ ಒಬ್ಬ ಮೇಲ್ವಿಚಾರಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 244 ಹುದ್ದೆಗಳು ಖಾಲಿ ಇವೆ. ದಿನನಿತ್ಯದ ಕಾರ್ಯಚಟುವಟಿಕೆಗಳು ಹೊರಗುತ್ತಿಗೆ ಸಿಬ್ಬಂದಿ ಮತ್ತು ತಾತ್ಕಾಲಿಕ ನೌಕರರ ಮೇಲೆ ನಿಂತಿವೆ. 245 ಬೋಧಕೇತರ ಸಿಬ್ಬಂದಿ ಅಗತ್ಯವಿದ್ದು, ಅದರಲ್ಲಿ ಹೊರಗುತ್ತಿಗೆ ಆಧಾರದಲ್ಲಿ 3 ಜನ ಕಂಪ್ಯೂಟರ್ ಆಪರೇಟರ್‌ಗಳು, 4 ಕ್ಲರ್ಕ್‌ಗಳು, 8 ಭದ್ರತಾ ಸಿಬ್ಬಂದಿ, 5 ಕೈತೋಟ ನಿರ್ವಹಣಾ ಸಿಬ್ಬಂದಿ, 7 ಸ್ವಚ್ಛತಾ ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಈಗಿರುವ ಸಿಬ್ಬಂದಿ ಮೇಲೆ ಕರ್ತವ್ಯದ ಒತ್ತಡ ಹೆಚ್ಚಿದ್ದು, ಸರಿಯಾದ ಸಮಯಕ್ಕೆ ಶೈಕ್ಷಣಿಕ ಕಾರ್ಯಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ.
ಅತಿಥಿ ಉಪನ್ಯಾಸಕರ ಮೇಲೆ ಶೈಕ್ಷಣಿಕ ವ್ಯವಸ್ಥೆ: ಹಾಸನ ವಿಶ್ವವಿದ್ಯಾಲಯದ ಬೋಧನಾ ಕಾರ್ಯ ಸಂಪೂರ್ಣವಾಗಿ ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬಿತವಾಗಿದೆ. ಕಾಯಂ ಪ್ರಾಧ್ಯಾಪಕರು ಇಲ್ಲದೆ ಇರುವುದರಿಂದ ಅತಿಥಿ ಉಪನ್ಯಾಸಕರೇ ಆಧಾರವಾಗಿದ್ದಾರೆ. ಹೀಗಾಗಿ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣದ ಗುಣಮಟ್ಟ ಕುಸಿಯುವಂತಾಗಿದೆ. ಸದ್ಯ 60 ಅತಿಥಿ ಉಪನ್ಯಾಸಕರನ್ನು ನಿಯೋಜಿಸಲಾಗಿದೆ. ಅವರಲ್ಲಿ 40 ಜನ ಹೇಮಗಂಗೋತ್ರಿ ಕ್ಯಾಂಪಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 20 ಜನ ಸಕಲೇಶಪುರ ತಾಲೂಕಿನ ಹೆತ್ತೂರು ಮತ್ತು ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದು ಕಾಯಂ ಉಪನ್ಯಾಸಕರ ಕೊರತೆಯನ್ನು ತಾತ್ಕಾಲಿಕವಾಗಿ ನಿಭಾಯಿಸುವ ಪ್ರಯತ್ನವಾದರೂ, ದೀರ್ಘಾವಧಿಯಲ್ಲಿ ಶೈಕ್ಷಣಿಕ ಗುಣಮಟ್ಟಕ್ಕೆ ಹೊಡೆತ ಬೀಳಲಿದೆ. ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರೇ ಹೆಚ್ಚು ಬೋಧನಾ ಹೊಣೆ ಹೊತ್ತಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ.
ಸರ್ಕಾರದ ನಿರ್ಲಕ್ಷೃವೇ ಕಾರಣ
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಘೋಷಿಸಿ ಸ್ಥಾಪಿಸಲಾಯಿತು. ಆದರೆ, ಮೂಲಸೌಕರ್ಯ, ಮಾನವ ಸಂಪನ್ಮೂಲ, ಆಡಳಿತ ಮೂಲಸೌಕರ್ಯ ಮತ್ತು ಕಾಯಂ ನೇಮಕಾತಿಗಳ ಕಡೆ ಸಮರ್ಪಕ ಗಮನಹರಿಸಿಲ್ಲ. ಹೀಗಾಗಿ ಹಾಸನ ವಿವಿ ಶೈಕ್ಷಣಿಕ ಚಟುವಟಿಕೆಗೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಸರ್ಕಾರ ತಕ್ಷಣವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಭಾರೀ ಹೊಡೆತ ಬೀಳಲಿದೆ.
ಪ್ರವೇಶಾತಿಗೆ ವಿದ್ಯಾರ್ಥಿಗಳು ಹಿಂದೇಟು
ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿರುವುದರಿಂದ ವಿದ್ಯಾರ್ಥಿಗಳ ಪದವಿ ಶಿಕ್ಷಣಕ್ಕಾಗಿ ಕಾಲೇಜು ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಹಾಸನ ವಿವಿಯಲ್ಲಿ ಕಾಯಂ ಪ್ರಾಧ್ಯಾಪಕರ ಕೊರತೆ, ಆಡಳಿತ ಅವ್ಯವಸ್ಥೆ, ಭವಿಷ್ಯದ ಅನಿಶ್ಚಿತತೆ ಇವುಗಳಿಂದಾಗಿ ವಿಶ್ವವಿದ್ಯಾಲಯಕ್ಕೆ ಸೇರುವ ವಿದ್ಯಾರ್ಥಿಗಳಲ್ಲೂ ಆತಂಕ ಮೂಡಿದೆ. ಪಾಲಕರು ಮತ್ತು ವಿದ್ಯಾರ್ಥಿಗಳು ಕಾಯಂ ಬೋಧಕ ಸಿಬ್ಬಂದಿ ಇಲ್ಲದ ವಿಶ್ವವಿದ್ಯಾಲಯದಲ್ಲಿ ಓದಿದರೆ ಭವಿಷ್ಯ ಏನು ಎಂಬ ಪ್ರಶ್ನೆಯನ್ನು ಎತ್ತುತ್ತಿದ್ದಾರೆ. ಇದರಿಂದ ಹೊಸ ಪ್ರವೇಶಾತಿ ವಿದ್ಯಾರ್ಥಿಗಳ ಸಂಖ್ಯೆಯ ಮೇಲೂ ಪರಿಣಾಮ ಬೀಳುತ್ತಿರುವ ಸಾಧ್ಯತೆ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net