ಹೈಟೆಕ್ ಆಸ್ಪತ್ರೆಯಲ್ಲಿ ಸೇವೆಗೆ ಸಿಬ್ಬಂದಿ ತೊಡಕು ವ್ಯತ್ಯಯ

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
Published on

ಪ್ರಮುಖ ಮುಖ್ಯಾಂಶಗಳು

  • ಹೈಟೆಕ್ ಆಸ್ಪತ್ರೆಯಲ್ಲಿ ಸೇವೆಗೆ ಸಿಬ್ಬಂದಿ ತೊಡಕು ವ್ಯತ್ಯಯ
  • ಹಿಮ್ಸ್‌ನಲ್ಲಿ ರೋಗಿಗಳ ಪರದಾಟ
  • ಸರ್ಕಾರಕ್ಕೆ 322 ಹೆಚ್ಚುವರಿ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ
ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್), ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ತಂತ್ರಜ್ಞರ ಕೊರತೆಯಿಂದಾಗಿ ರೋಗಿಗಳು ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಪರದಾಡುವಂತಾಗಿದೆ.
ರಾಜ್ಯ ಸರ್ಕಾರ ಹಿಮ್ಸ್‌ನಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿ ಅಭಿವೃದ್ಧಿ ಪಡಿಸಲು ಸಾವಿರಾರು ಕೋಟಿ ರೂ. ವೆಚ್ಚ ಮಾಡಿದೆ. ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಾಣ ಮಾಡಿ, ಆಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸಿದೆ. ಆದರೆ, ಅಗತ್ಯಕ್ಕೆ ಅನುಗುಣವಾಗಿ ವೈದ್ಯರು, ನರ್ಸ್, ತಾಂತ್ರಿಕ ಸಿಬ್ಬಂದಿ ನೇಮಕ ಮಾಡದಿರುವುದರಿಂದ ಹೈಟೆಕ್ ಆಸ್ಪತ್ರೆ ಇದ್ದರೂ ಚಿಕಿತ್ಸೆಗೆ ಪರದಾಡುವ ಸನ್ನಿವೇಶ ಎದುರಾಗಿದೆ.
ಹಿಮ್ಸ್ ರಾಜ್ಯದ ಪ್ರಮುಖ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದ್ದು, ಪ್ರಸ್ತುತ 200 ಎಂಬಿಬಿಎಸ್ ಸೀಟುಗಳು, ವಿವಿಧ ಸ್ನಾತಕೋತ್ತರ ವಿಭಾಗಗಳು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಆದರೆ, ಎಲ್ಲದಕ್ಕೂ ಸಿಬ್ಬಂದಿ ಇಲ್ಲದಿರುವುದು ತೊಡಕಾಗಿದೆ. ಜತೆಗೆ ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನದಂಡಗಳಿಗೆ ಅನುಗುಣವಾಗಿ ಬೋಧಕ ಸಿಬ್ಬಂದಿ ನೇಮಕದ ಅಗತ್ಯವಿದೆ.
ವಿಶೇಷ ಸೌಲಭ್ಯವಿದ್ದರೂ ಬಳಸುವಂತಿಲ್ಲ
ಹೊಸದಾಗಿ ನಿರ್ಮಾಣಗೊಂಡಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಜಿಲ್ಲೆಯ ಆರೋಗ್ಯ ಸೇವೆಗೆ ಹೊಸ ಆಯಾಮ ನೀಡಿದೆ. ಗರ್ಭಿಣಿಯರು, ನವಜಾತ ಶಿಶುಗಳು ಹಾಗೂ ಮಕ್ಕಳಿಗೆ ವಿಶೇಷ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಆಸ್ಪತ್ರೆ ನಿರ್ಮಿಸಲಾಗಿದೆ. ಆದರೆ, ಹೈಟೆಕ್ ಸೌಲಭ್ಯವಿದ್ದರೂ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಯಾವುದನ್ನೂ ಸಮರ್ಪಕವಾಗಿ ಬಳಲು ಸಾಧ್ಯವಿಲ್ಲದಂತಾಗಿದೆ.
ಶೀಘ್ರ ಮಂಜೂರಾತಿಗೆ ಒತ್ತಾಯ
ಇತ್ತೀಚೆಗಷ್ಟೇ ಶಾಸಕ ಎಚ್.ಪಿ.ಸ್ವರೂಪ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂಶುಕ್ಲಾ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಿಬ್ಬಂದಿ ಕೊರತೆ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ಹಿಮ್ಸ್‌ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ಪ್ರಸ್ತಾವಿತ 322 ಹುದ್ದೆಗಳಿಗೆ ಸರ್ಕಾರ ಶೀಘ್ರ ಮಂಜೂರಾತಿ ನೀಡಿದರೆ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಒದಗಿಸುವ ಜತೆಗೆ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನೂ ಮತ್ತಷ್ಟು ಬಲಪಡಿಸಲು ಸಾಧ್ಯವಾಗಲಿದೆ.
322 ಹುದ್ದೆಗಳ ಪ್ರಸ್ತಾವನೆ:
ಹಿಮ್ಸ್ ಆಡಳಿತವು ಸರ್ಕಾರಕ್ಕೆ ಒಟ್ಟು 322 ಹೆಚ್ಚುವರಿ ಹುದ್ದೆ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬೋಧನಾ ಆಸ್ಪತ್ರೆಗಾಗಿ ವೈದ್ಯಕೀಯ ಅಧೀಕ್ಷಕರು, ಸಹ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಹಿರಿಯ ಸ್ಥಾನೀಯ ವೈದ್ಯರು ಹಾಗೂ ಸಿಎಂಒ ಸೇರಿ 96 ಹುದ್ದೆಗಳ ಅಗತ್ಯವಿದೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಾಗಿ 150 ಶುಶ್ರೂಷಾಧಿಕಾರಿಗಳು ಸೇರಿ ಓಟಿ, ಲ್ಯಾಬ್, ರೇಡಿಯಾಲಜಿ, ಎಕೋ, ಇಸಿಜಿ, ಬಯೋಮೆಡಿಕಲ್, ಡೇಟಾ ಎಂಟ್ರಿ, ಎಲೆಕ್ಟ್ರಿಕಲ್ ಮತ್ತು ನಿರ್ವಹಣಾ ಸಿಬ್ಬಂದಿ ಸೇರಿ 226 ಹುದ್ದೆಗಳ ಬೇಡಿಕೆ ಸಲ್ಲಿಸಲಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಅಗತ್ಯ ಸಿಬ್ಬಂದಿ ಮತ್ತು ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ವಿವರವಾದ ವರದಿ ನೀಡಿದರೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಎಚ್.ಪಿ.ಸ್ವರೂಪ್, ಶಾಸಕ
ಹಾಸನ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದ ರೋಗಿಗಳು ಹಿಮ್ಸ್ ಆಸ್ಪತ್ರೆಗೆ ಆಗಮಿಸುತ್ತಿರುವುದರಿಂದ ವೈದ್ಯಕೀಯ ಶಿಕ್ಷಣ ಮತ್ತು ಚಿಕಿತ್ಸೆಎರಡನ್ನೂ ಸಮರ್ಥವಾಗಿ ನಿರ್ವಹಿಸಲು ಹೆಚ್ಚಿನ ವೈದ್ಯರು ಹಾಗೂ ಸಿಬ್ಬಂದಿ ಅಗತ್ಯವಿದೆ. ಒಟ್ಟು 322 ಹುದ್ದೆಗಳ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಡಾ.ರಾಜಣ್ಣ, ಹಿಮ್ಸ್ ನಿರ್ದೇಶಕ
ಖಾಲಿಯಿರುವ ವೈದ್ಯರು, ಸಿಬ್ಬಂದಿ ಪಟ್ಟಿ
(ಹಿಮ್ಸ್-ಪ್ರಸ್ತಾವನೆ)
ವೈದ್ಯಕೀಯ ಅಧೀಕ್ಷಕರು -1
ಸಹ ಪ್ರಾಧ್ಯಾಪಕರ-18
ಸಹಾಯಕ ಪ್ರಾಧ್ಯಾಪಕರು-30
ಹಿರಿಯ ಸ್ಥಾನೀಯ ವೈದ್ಯರು-45
ಸಿಎಂಒ-2
ಒಟ್ಟು: 96
(ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ-ಪ್ರಸ್ತಾವನೆ)
ಶುಶೂಷಾಧಿಕಾರಿಗಳು-150
ಓ.ಟಿ. ತಂತ್ರಜ್ಞರು-15
ಲ್ಯಾಬ್ ತಂತ್ರಜ್ಞರು-18
ಡಾಟಾ ಎಂಟ್ರಿ ಆಪರೇಟರ್‌ಗಳು-15
ರೇಡಿಯಾಲಜಿ ತಂತ್ರಜ್ಞರು-4
ಎಕೋ ತಂತ್ರಜ್ಞರು-2
ಇಸಿಜಿ ತಂತ್ರಜ್ಞರು-2
ಎಲೆಕ್ಟ್ರಿಷಿಯನ್‌ಗಳು-5
ಪ್ಲಂಬರ್‌ಗಳು-5
ಬಯೋಮೆಡಿಕಲ್ ತಂತ್ರಜ್ಞರು-2
ಎಸಿ ತಂತ್ರಜ್ಞರು-5
ಕಾರ್ಪೆಂಟರ್‌ಗಳು-3
ಒಟ್ಟು: 226
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net