ಪ್ರಭಾವಿಗಳ ಹೆಸರುಗಳನ್ನು ಎಸ್‌ಐಟಿ ಕೈಬಿಟ್ಟಿದೆ

ಶಾಸಕ ಸ್ವರೂಪ್ ಪ್ರಕಾಶ್
ಶಾಸಕ ಸ್ವರೂಪ್ ಪ್ರಕಾಶ್
Published on

ಪ್ರಮುಖ ಮುಖ್ಯಾಂಶಗಳು

  • ಪ್ರಭಾವಿಗಳ ಹೆಸರುಗಳನ್ನು ಎಸ್‌ಐಟಿ ಕೈಬಿಟ್ಟಿದೆ
  • ಶಾಸಕ ಸ್ವರೂಪ್ ಪ್ರಕಾಶ್ ಆರೋಪ
  • ಪೆನ್‌ಡ್ರೈವ್ ಹಂಚಿಕೆ ಪ್ರಕರಣ
ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಪ್ರಭಾವಿಗಳ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ಆರೋಪಿಸಿದರು.
ಎಸ್‌ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿಲ್ಲ. ಪ್ರಭಾವಿಗಳ ಹೆಸರು ಕೈಬಿಟ್ಟು ಪ್ರಕರಣದ ದಿಕ್ಕು ತಪ್ಪಿಸಲು ಜೆಡಿಎಸ್ ಕಾರ್ಯಕರ್ತರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಪೆನ್‌ಡ್ರೈವ್ ಹಂಚಿಕೆ ಎ1 ಆರೋಪಿ ನವೀನ್ ಎಂಬಾತನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಪ್ರಕರಣದ ಸತ್ಯಾಂಶ ಹೊರ ಬೀಳಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ದೋಷಾರೋಪ ಪಟ್ಟಿಯಲ್ಲಿರುವ 39 ಆರೋಪಿಗಳ ಪೈಕಿ 10ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಸೇರಿಸಲಾಗಿದೆ. ಪಕ್ಷಕ್ಕೆ ನಿಷ್ಠರಾಗಿದ್ದವರನ್ನು ಸೇರಿಸಿರುವುದರಿಂದ ಕಾರ್ಯಕರ್ತರಿಗೆ ನೋವಾಗಿದೆ. ಈ ಕುರಿತು ಹೋರಾಟ ರೂಪಿಸಲಾಗುವುದು. ಈ ಪ್ರಕರಣ ಸಂಬಂಧ ಯಾರೂ ಧೃತಿಗೆಡುವ ಅವಶ್ಯಕತೆ ಇಲ್ಲ. ಪಕ್ಷ ತಮ್ಮ ಜತೆ ಇರುವುದಾಗಿ ಹೇಳಿದರು.
ಪ್ರಕರಣದಲ್ಲಿ ನನ್ನ ಚಿಕ್ಕಪ್ಪನ ಮಗನ ಹೆಸರು ಸೇರಿಸಲಾಗಿದ್ದು, ಈ ಕುರಿತು ಕಾನೂನು ಹೋರಾಟ ಕೈಗೊಳ್ಳುವೆ. ಯಾರು ಪೆನ್‌ಡ್ರೈವ್ ಹಂಚಿಕೆ ಮಾಡಿದ್ದಾರೆ? ಇದರ ಹಿಂದೆ ಯಾರಿದ್ದಾರೆ ಎಂಬುದು ಇಡೀ ಜಗತ್ತಿಗೆ ಗೊತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾರು, ಯಾರ ಪರವಾಗಿ ಕೆಲಸ ಮಾಡಿದರು? ಗೆಲ್ಲುವ ಸಲುವಾಗಿ ಯಾವೆಲ್ಲ ತಂತ್ರ ಅನುಸರಿಸಿದರು ಎಂಬುದು ಜನರಿಗೆ ಗೊತ್ತಿದೆ. ಆದರೂ, ಅವರ ಹೆಸರು ಕೈಬಿಟ್ಟಿರುವುದು ತನಿಖೆಯ ಸತ್ವವನ್ನು ತಿಳಿಸುತ್ತದೆ. ಸರ್ಕಾರ ತಮಗೆ ಬೇಕಾದವರ ಹೆಸರು ಬಿಟ್ಟು ತನಿಖೆಯ ದಿಕ್ಕು ತಪ್ಪಿಸಿದೆ ಎಂದು ಆಪಾದಿಸಿದರು.
ದೋಷಾರೋಪ ಪಟ್ಟಿಯಲ್ಲಿ ಎ1, ಎ2 ಹೆಸರುಗಳಿವೆ. ಎ3, ಎ 4 ಹೆಸರು ಉಲ್ಲೇಖ ಮಾಡಿಲ್ಲ. ಎ8 ಆದ ಮೇಲೆ ಎ17 ಹೆಸರು ಉಲ್ಲೇಖ ಮಾಡಲಾಗಿದೆ. ಉಳಿದವರು ಯಾರು? 1994ರಿಂದ ನಮ್ಮ ಹಾಗೂ ದೇವೇಗೌಡರ ಕುಟುಂಬ ಅನ್ಯೋನ್ಯವಾಗಿದೆ. ಕೀಳು ಮಟ್ಟದ ರಾಜಕೀಯ ಮಾಡಿ ನಮ್ಮ ನಡುವೆ ಬಿರುಕು ಉಂಟು ಮಾಡುವ ಹುನ್ನಾರ ನಡೆಸಬಾರದು. ಜೆಡಿಎಸ್ ಪ್ರಾಮಾಣಿಕ ಕಾರ್ಯಕರ್ತರ ಹೆಸರು ಸೇರಿಸಲಾಗಿದ್ದು ಎಸ್‌ಐಟಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್.ದೇವೇಗೌಡ, ವಕ್ತಾರ ರಘು ಹೊಂಗೆರೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net