ಶ್ರೀ ಅಗ್ನಿ ಬನಿರಾಯ ಸ್ವಾಮಿ ಜಯಂತಿ ಅಂಗವಾಗಿ ಸಮುದಾಯದ ಮುಖಂಡರ ನೇತೃತ್ವದಲ್ಲಿ ಬೇಲೂರು ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.
Published on:
Copied
Follow Us
ಬೇಲೂರು: ಅಗ್ನಿವಂಶ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಸಂಘದಿಂದ ಕುಲದ ಆರಾಧ್ಯ ದೈವ ಶ್ರೀ ಅಗ್ನಿ ಬನಿರಾಯ ಸ್ವಾಮಿ ಜಯಂತಿಯನ್ನು ಬೇಲೂರಿನಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಶ್ರೀ ಅಗ್ನಿ ಬನಿರಾಯ ಸ್ವಾಮಿ ಜಯಂತಿ ಅಂಗವಾಗಿ ಸಮುದಾಯದ ಮುಖಂಡರ ನೇತೃತ್ವದಲ್ಲಿ ಮೂರ್ತಿಯನ್ನು ಬೆಳ್ಳಿ ಮಂಟಪದಲ್ಲಿ ಪ್ರತಿಷ್ಠಾಪಿಸಿ ತಾಲೂಕು ಕಚೇರಿ ಆವರಣದಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಶ್ರೀ ಚನ್ನಕೇಶವಸ್ವಾಮಿ ದೇಗುಲದವರೆಗೂ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಘೋಷಣೆಗಳು ಮೊಳಗಿದವು. ಸಾಂಪ್ರದಾಯಿಕ ವಾದ್ಯ, ಧಾರ್ಮಿಕ ಆಚರಣೆಗಳೊಂದಿಗೆ, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು, ಯುವಕರು, ಹಿರಿಯರು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರುಗು ನೀಡಿದರು.
ಅಗ್ನಿವಂಶ ಕ್ಷತ್ರಿಯ ತಿಗಳರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಮುಖಂಡ ಚನ್ನೇಗೌಡ ಮಾತನಾಡಿ, ನಮ್ಮ ಜನಾಂಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ಗಮನಕ್ಕೆ ಹಲವು ಪ್ರಮುಖ ಬೇಡಿಕೆಗಳನ್ನು ತಂದಿದ್ದೇವೆ. ಜತೆಗೆ ಬೇಲೂರು ತಾಲೂಕಿನಲ್ಲಿ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಎರಡು ಎಕರೆ ಜಾಗವನ್ನು ಮೀಸಲಿಡಬೇಕು. ಆ ಜಾಗದಲ್ಲಿ ಸಮುದಾಯ ಭವನ, ಶಿಕ್ಷಣ ಮತ್ತು ಸಾಮಾಜಿಕ ಚಟುವಟಿಕೆಗೆ ಅನುಕೂಲವಾಗುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅವಕಾಶ ಕಲ್ಪಿಸಬೇಕು. ಅಲ್ಲದೆ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಅಗತ್ಯವಾಗಿದೆ. ಆಶ್ರಯವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಅನೇಕ ಕುಟುಂಬಗಳನ್ನು ಗುರುತಿಸಿ, ಅವರಿಗೆ ಸರ್ಕಾರದ ಯೋಜನೆಗಳಡಿ ಮನೆಗಳನ್ನು ಒದಗಿಸಬೇಕು ಎಂದರು.
ಸಮುದಾಯದ ಮುಖಂಡರಾದ ಮಂಜುನಾಥ್, ಚನ್ನೇಗೌಡ, ಚಂದ್ರಶೇಖರ್, ಮಂಜೇಗೌಡ, ನಿಂಗೇಗೌಡ, ನಾಗೇಗೌಡ, ತಿಮ್ಮೇಗೌಡ, ಪುಟ್ಟರಾಜು, ಲವಕುಶ, ಹರೀಶ್, ಶಿವಕುಮಾರ್ ಇದ್ದರು.