ರೌಡಿ ನಿಗ್ರಹಕ್ಕೆ ಪ್ರತ್ಯೇಕ ಪಡೆ

Rowdy Suppression Squad
Rowdy Suppression Squad
Published on

ಪ್ರಮುಖ ಮುಖ್ಯಾಂಶಗಳು

  • ರೌಡಿ ನಿಗ್ರಹಕ್ಕೆ ಪ್ರತ್ಯೇಕ ಪಡೆ
  • ಚಲನವಲನದ ಮೇಲೆ ನಿಗಾ
  • ಜಿಲ್ಲಾದ್ಯಂತ 20 ವಿಶೇಷ ಪಡೆಗಳು ಅಸ್ತಿತ್ವಕ್ಕೆ
  • ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ, ಸೂಕ್ತ ತರಬೇತಿ
ಹಾಸನ: ಅಪರಾಧ ಪ್ರಕರಣಗಳ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ರೌಡಿ ನಿಗ್ರಹಕ್ಕೆ ಪ್ರತ್ಯೇಕ ಪಡೆ ಆರಂಭಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿರುವ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ರೌಡಿಗಳ ಚಲನವಲನದ ಮೇಲೆ ಕಣ್ಣಿಟ್ಟಿರುವ ಪೊಲೀಸರಿಗೆ ಸರ್ಕಾರದ ಹೊಸ ಆದೇಶವು ಆನೆಬಲ ನೀಡಿದಂತಾಗಿದೆ. ಪ್ರತಿ ಪೊಲೀಸ್ ವಲಯ, ಠಾಣೆ ಮಟ್ಟದಲ್ಲಿ ರೌಡಿ ನಿಗ್ರಹ ಪಡೆ ಆರಂಭವಾಗಲಿದೆ. ಇರುವ ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ ವಹಿಸುವ ಕ್ರಮ ಇದಾಗಿದ್ದು, ಆ ನಿಟ್ಟಿನಲ್ಲಿ ತರಬೇತಿ ಸಹ ನೀಡಲಾಗುತ್ತಿದೆ. ಜಿಲ್ಲಾದ್ಯಂತ ಒಟ್ಟು 20 ವಿಶೇಷ ರೌಡಿ ನಿಗ್ರಹ ಪಡೆಗಳು ಅಸ್ತಿತ್ವಕ್ಕೆ ಬರಲಿವೆ.
ಬಡ್ಡಿಂಗ್ ರೌಡಿಗಳ ಮೇಲೆ ಕಣ್ಣು:
ಇತ್ತೀಚೆಗೆ ಅಪರಾಧ ಲೋಕದ ಕಡೆಗೆ ಆಕರ್ಷಿತರಾಗುತ್ತಿರುವ ಇನ್‌ಸ್ಟಾಗ್ರಾಮ್, ಸಾಮಾಜಿಕ ಜಾಲತಾಣದ ‘ಬಡ್ಡಿಂಗ್ ರೌಡಿಗಳ’ (ಉದಯೋನ್ಮುಖ ರೌಡಿಗಳು) ಮೇಲೆಯೂ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಲಿದೆ.
ಜಿಲ್ಲೆಯಿಂದ ಈಗಾಗಲೇ ಗಡಿಪಾರು ಶಿಕ್ಷೆಗೆ ಒಳಗಾಗಿದ್ದರೂ, ಆದೇಶ ಉಲ್ಲಘಿಸಿ ಜಿಲ್ಲೆಯೊಳಗೆ ರಹಸ್ಯವಾಗಿ ಸಂಚರಿಸುತ್ತಿರುವವರ ಪತ್ತೆಗೆ ವಿಶೇಷ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿದೆ.
ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಸದ್ಯಕ್ಕೆ ಸುಮಾರು 70 ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಲು ಪಟ್ಟಿ ಸಿದ್ಧಪಡಿಸಲಾಗಿದೆ. ಅವರಲ್ಲಿ ಹಲವರು ಒಂದಕ್ಕಿಂತ ಹೆಚ್ಚು ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯುಳ್ಳವರಾಗಿದ್ದಾರೆ. ಅವರ ವಿರುದ್ಧ ಗುಂಡಾ ಕಾಯ್ದೆಯಡಿ ಕ್ರಮ ಜರುಗಿಸುವುದರ ಜತೆಗೆ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನಮ ಗುರಿ ಎಂದು ಶುಭನ್ವಿತಾ ಅವರು ತಿಳಿಸಿದ್ದಾರೆ.
ರೌಡಿ ಚಟುವಟಿಕೆಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತವೆ ಮತ್ತು ಸಾಮಾಜಿಕ ಸೌಹಾರ್ದತೆ ಹಾಳು ಮಾಡುತ್ತವೆ. ಜತೆಗೆ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟು ಮಾಡುತ್ತಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧಿಕಾರ ವಹಿಸಿಕೊಂಡ ತಕ್ಷಣದಲ್ಲೇ ಈ ಮಹತ್ವದ ನಿರ್ಧಾರ ಪ್ರಕಟಿಸಿರುವುದು ಕಾನೂನು ಸುವ್ಯವಸ್ಥೆ ಬಿಗಿಯಾಗುವ ಆಶಯ ಮೂಡಿದೆ.
ಪಡೆಯ ಕೆಲಸ ಏನು?
ರೌಡಿ ನಿಗ್ರಹ ಪಡೆಯು ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ, ಹೊಸ ರೌಡಿ ಶೀಟ್ ತೆರೆಯಬೇಕು. ರೌಡಿ ಶೀಟರ್‌ಗಳ ಚಲನವಲನ ಮತ್ತು ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಹೊಸ ರೌಡಿ ಅಂಶಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಗುರುತಿಸಿ ಗುಪ್ತಚರ ಮಾಹಿತಿ ಸಂಗ್ರಹಿಸಬೇಕು. ಅಪಾಯ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ಮತ್ತು ದಿಢೀರ್ ತಪಾಸಣೆ ನಿಗ್ರಹ ಪಡೆಯ ಕೆಲಸವಾಗಿದೆ.
ಈ ಹಿಂದೆ ದೊಡ್ಡ ಮಟ್ಟದ ರೌಡಿ ನಿಗ್ರಹ ಕಾರ್ಯಾಚರಣೆಗಳು ಸಿಸಿಬಿ ಅಥವಾ ಸಿಐಡಿಯಂತಹ ಉನ್ನತ ಮಟ್ಟದ ವಿಭಾಗಗಳಿಗೆ ಸೀಮಿತವಾಗಿದ್ದವು. ಈಗ ಪ್ರತಿ ಠಾಣೆ ಮಟ್ಟದಲ್ಲೂ ಪಡೆ ಅಸ್ತಿತ್ವಕ್ಕೆ ಬರುವುದರಿಂದ ಸ್ಥಳೀಯವಾಗಿ ಉದಯೋನ್ಮುಖ ರೌಡಿಗಳು ಅಥವಾ ಸಣ್ಣ-ಪುಟ್ಟ ಗ್ಯಾಂಗ್‌ಗಳು ಬೆಳೆಯುವ ಮುನ್ನವೇ ಅವರನ್ನು ಮಟ್ಟ ಹಾಕಲು ಸಾಧ್ಯವಾಗುತ್ತದೆ. ಈ ವಿಶೇಷ ಪಡೆಗಳು ರೌಡಿಗಳ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಗಮನ ಹರಿಸುವುದರಿಂದ, ನ್ಯಾಯಾಲಯದಲ್ಲಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ಯುವಕರು ರೀಲ್ಸ್ ಮೂಲಕ ರೌಡಿಸಂ ಸಂಸ್ಕೃತಿಗೆ ಆಕರ್ಷಿತರಾಗುತ್ತಿದ್ದಾರೆ. ನಿಗ್ರಹ ಪಡೆ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇಡುವುದರಿಂದ ಹಾದಿ ತಪ್ಪುತ್ತಿರುವ ಯುವಕರನ್ನು ಆರಂಭದಲ್ಲೆ ಪತ್ತೆಹಚ್ಚಿ ಕೌನ್ಸೆಲಿಂಗ್ ನಡೆಸಲು ಮತ್ತು ಕಾನೂನು ಕ್ರಮ ಜರುಗಿಸಲು ನೆರವಾಗುತ್ತದೆ.
ಜಿಲ್ಲೆಯಲ್ಲಿ ರೌಡಿ ನಿಗ್ರಹ ಪಡೆ ಆರಂಭಕ್ಕೆ ಸಿದ್ಧತೆ ನಡೆದಿದೆ. ಈ ವಿಚಾರದಲ್ಲಿ ನಾವು ಮೊದಲೇ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಸರ್ಕಾರದ ಹೊಸ ಆದೇಶವು ಕೆಲಸಕ್ಕೆ ವೇಗ ನೀಡಲಿದೆ. ನಿಗ್ರಹ ಪಡೆ ಕಾರ್ಯನಿರ್ವಹಣೆಗೆ ಸಿಬ್ಬಂದಿ ಕೊರತೆ ಇಲ್ಲ.
ಶುಭನ್ವಿತಾ
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net