ಅವಧಿಗೂ ಮುನ್ನವೇ ಮದ್ಯ ಮಾರಾಟ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಎಡಿಸಿ ಕೃಷ್ಣಮೂರ್ತಿ ಮಾತನಾಡಿದರು. ಜಿ.ಪಂ. ಸಿಇಒ ಶುಭಂ ಶುಕ್ಲಾ ಇತರರಿದ್ದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಎಡಿಸಿ ಕೃಷ್ಣಮೂರ್ತಿ ಮಾತನಾಡಿದರು. ಜಿ.ಪಂ. ಸಿಇಒ ಶುಭಂ ಶುಕ್ಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅವಧಿಗೂ ಮುನ್ನವೇ ಮದ್ಯ ಮಾರಾಟ
  • ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಎಡಿಸಿ ಕೃಷ್ಣಮೂರ್ತಿ ಸೂಚನೆ
  • ಜಿಲ್ಲಾ ಜಾಗೃತಿ ಸಮಿತಿ ಸಭೆ

ಹಾಸನ:

ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಜತೆಗೆ ನಿಗದಿತ ವೇಳೆಗಿಂತ ಮೊದಲೇ ಮದ್ಯದಂಗಡಿಗಳು ಬಾಗಿಲು ತೆರೆದು ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಅಗತ್ಯ ಕ್ರಮಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನ್ಯಾಯಯುತವಾಗಿ ಅರ್ಹರಿಗೆ ತಲುಪಿಸಲು ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

ಜೀತ ವಿಮುಕ್ತರಿಗೆ ನಿವೇಶನ ನೀಡಲು ಜಾಗ ಗುರುತಿಸುವುದು, ಹೇಮಾವತಿ ಜಲಾಶಯದ ಹಿನ್ನೀರಿನ ಮುಳುಗಡೆಯಾಗಿರುವ ಸಂತ್ರಸ್ತರಿಗೆ ಪುನರ್ವಸತಿ ಕಾಲನಿಗೆ ನಿವೇಶನ ಹಕ್ಕುಪತ್ರ ನೀಡಲು ಕ್ರಮವಹಿಸಲು ಸೂಚಿಸಿದರು.

ಹಾಸನ ತಾಲೂಕಿನ ಚೌಡವಳ್ಳಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶುಭಂ ಶುಕ್ಲಾ ಮಾತನಾಡಿ, ಹೊಳೆನರಸೀಪುರ ತಾಲೂಕಿನ ಬೂವನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಫಲಕಕ್ಕೆ ಯಾರೋ ಕಿಡಿಗೇಡಿಗಳು ಸಗಣಿ ಬಳಿದು ಪರಾರಿ ಆಗಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಮಲ ಮೂತ್ರ ವಿಸರ್ಜನಾ ಪರಿಷ್ಕರಣಾ ಘಟಕ-ಬಯೋ ಡೆಪ್ಯೂಸರ್‌ಗಳನ್ನು ಹಾಗೂ ಅಗ್ನಿ ಶಾಮಕ ಸುರಕ್ಷತಾ ಪರಿಕರಗಳನ್ನು ಹೊಂದಿರಬೇಕು. ಇವುಗಳು ಇಲ್ಲದಿದ್ದಲ್ಲಿ ಆಸ್ಪತ್ರೆಯ ಪರವಾನಗಿ ನವೀಕರಣ ಮಾಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಸೇವೆ ನೀಡಬೇಕು ಆದರೆ ಹಣ ಪಡೆಯುತ್ತಿದ್ದಾರೆ, ಶಾಂತಿ ವಾಹನದ ಸೇವೆಯನ್ನು ಸಹ ಉಚಿತವಾಗಿ ನೀಡುತ್ತಿಲ್ಲ ಎಂದು ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಕಲೇಶಪುರದ ಕುಶಾಲನಗರದಲ್ಲಿ 62 ಪೌರಕಾರ್ಮಿಕರ ಕುಟುಂಬಗಳು ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದು, ಇವರಿಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರ ಮಾಡುವಂತೆ ಹೆತ್ತೂರು ನಾಗರಾಜ್ ಅವರು ಸಭೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.

ಸಮಿತಿ ಸದಸ್ಯರಾದ ಅಂಬುಗ ಮಲ್ಲೇಶ್, ಮರಿಜೋಸೆಫ್, ಶಿವಮ್ಮ, ನವೀನ್ ಸದಾ, ಶಿವಪ್ಪನಾಯಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net