ನಿಸ್ವಾರ್ಥ ಸೇವೆಯೇ ನಿಜವಾದ ಮಾನವೀಯತೆ

 ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ವಿವಿಧ ಸಂಘಟನೆಗಳಿಂದ ಹಿರಿಯ ಸಾಮಾಜಿಕ ಹೋರಾಟಗಾರ ಡಾ.ವೈ.ಎಸ್.ವೀರಭದ್ರಪ್ಪ ಅವರ ಜೀವನಚರಿತ್ರೆ ‘ಸೇವಾರತ್ನ’ ಕೃತಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.  ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಂಭುನಾಥಸ್ವಾಮೀಜಿ, ಪಿ.ಜಿ.ಆರ್.ಸಿಂಧ್ಯಾ, ಜೆ.ಸಿ. ಮಾಧುಸ್ವಾಮಿ, ಶ್ರೇಯಸ್ ಪಟೇಲ್ ಇತರರಿದ್ದರು.
ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ವಿವಿಧ ಸಂಘಟನೆಗಳಿಂದ ಹಿರಿಯ ಸಾಮಾಜಿಕ ಹೋರಾಟಗಾರ ಡಾ.ವೈ.ಎಸ್.ವೀರಭದ್ರಪ್ಪ ಅವರ ಜೀವನಚರಿತ್ರೆ ‘ಸೇವಾರತ್ನ’ ಕೃತಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಂಭುನಾಥಸ್ವಾಮೀಜಿ, ಪಿ.ಜಿ.ಆರ್.ಸಿಂಧ್ಯಾ, ಜೆ.ಸಿ. ಮಾಧುಸ್ವಾಮಿ, ಶ್ರೇಯಸ್ ಪಟೇಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಸ್ವಾರ್ಥ ಸೇವೆಯೇ ನಿಜವಾದ ಮಾನವೀಯತೆ
  • ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಮತ
  • ಸೇವಾರತ್ನ ಕೃತಿ ಬಿಡುಗಡೆ

ಹಾಸನ:

ಸಮಾಜದ ಅಭಿವೃದ್ಧಿ ಸರ್ಕಾರದ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯವಿಲ್ಲ, ಸಾರ್ವಜನಿಕರೂ ಜನಪರ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ನಿಜವಾದ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಹಾಸನ ಜಿಲ್ಲಾ ನಾಗರಿಕರ ಹಿತರಕ್ಷಣಾ ವೇದಿಕೆ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ಮಠಗಳ ಮಠಾಧೀಶರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಭಾನುವಾರ ಆಯೋಜಿಸಿದ್ದ ಹಿರಿಯ ಸಾಮಾಜಿಕ ಹೋರಾಟಗಾರ ಡಾ.ವೈ.ಎಸ್.ವೀರಭದ್ರಪ್ಪ ಅವರ ಜೀವನಚರಿತ್ರೆ ‘ಸೇವಾರತ್ನ’ ಕೃತಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ಸರ್ಕಾರಗಳ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಸಮಾಜದ ವಿವಿಧ ಕ್ಷೇತ್ರಗಳ ನಾಗರಿಕರು ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುವುದು ಶ್ಲಾಘನೀಯ ಕಾರ್ಯವಾಗಿದೆ. ಬಡವರು, ದೀನ ದಲಿತರು ಹಾಗೂ ಸಮಾಜದ ಹಿಂದುಳಿದ ವರ್ಗಗಳ ಏಳಿಗೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವುದೇ ನಿಜವಾದ ಮಾನವೀಯತೆ. ಡಾ.ವೈ.ಎಸ್. ವೀರಭದ್ರಪ್ಪ ಅವರು ಕಳೆದ ಐದು ದಶಕಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದು, ಅವರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಡಾ. ವೀರಭದ್ರಪ್ಪ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳ ಮೂಲಕ ಸಾರ್ವಜನಿಕ ಹಿತಕ್ಕಾಗಿ ಶ್ರಮಿಸುತ್ತಿರುವ ಅವರ ಜೀವನ ಯುವಜನತೆಗೆ ಮಾದರಿಯಾಗಿದ್ದು, ಇಂತಹ ಸೇವಾ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸಮಾಜದ ಒಳಿತಿಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುವ ಅನೇಕರು ಬೆಳಕಿಗೆ ಬಾರದೇ ಉಳಿದಿದ್ದಾರೆ. ಇಂತಹ ಸಮಾಜ ಸೇವಕರನ್ನು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸಿ ಗೌರವಿಸುವುದು ಉತ್ತಮ ಪರಂಪರೆ. ತಮ್ಮ ವೃತ್ತಿಯ ಜತೆಗೆ ಸಾಮಾಜಿಕ ಸೇವೆಗೆ ಸಮಯ ಮೀಸಲಿಟ್ಟು ಜನೋಪಯೋಗಿ ಕಾರ್ಯಗಳನ್ನು ನಡೆಸುತ್ತಿರುವ ಡಾ. ವೀರಭದ್ರಪ್ಪ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ ಜಿಲ್ಲೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಅನೇಕ ಹಿರಿಯರನ್ನು ಹೊಂದಿದೆ. ಅಂತಹವರಲ್ಲಿ ಡಾ.ವೀರಭದ್ರಪ್ಪ ಅವರ ಸೇವೆ ವಿಶಿಷ್ಟ ಸ್ಥಾನ ಪಡೆದಿದ್ದು, ಅವರಂತಹ ವ್ಯಕ್ತಿತ್ವಗಳು ಜಿಲ್ಲೆಯ ಅಭಿವೃದ್ಧಿ ಚಿಂತನೆಗೆ ಪ್ರೇರಣೆಯಾಗಿದ್ದಾರೆ ಎಂದರು.

ಶಾಸಕ ಸಿಮೆಂಟ್ ಮಂಜು ಮಾತನಾಡಿ, ಹಿರಿಯರು ಹಾಕಿಕೊಟ್ಟ ಆದರ್ಶದ ಹಾದಿಯಲ್ಲಿ ಯುವಜನತೆ ಸಾಗಿದಾಗ ಸಮಾಜ ಇನ್ನಷ್ಟು ಸದೃಢವಾಗಲಿದೆ ಎಂದರು.

ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಡಾ.ವೈ.ಎಸ್.ವೀರಭದ್ರಪ್ಪ ಅವರು ಹಲವು ಸಂಘ-ಸಂಸ್ಥೆಗಳ ಮೂಲಕ ಯಾವುದೇ ಫಲಾಪೇಕ್ಷೆಯಿಲ್ಲದೆ ಹಾಸನ ಜಿಲ್ಲೆಯ ಜನರಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರಂತಹ ವ್ಯಕ್ತಿತ್ವಗಳಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಹಾಸನ ಆದಿಚುಂಚನಗಿರಿ ಶಾಖಾಮಠದ ಶ್ರೀ ಶಂಭುನಾಥ ಮಹಾಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಶಾಸಕ ಸಿ.ಎನ್. ಬಾಲಕೃಷ್ಣ, ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಎಂಸಿಇ ಕಾಲೇಜಿನ ಅಧ್ಯಕ್ಷ ಬಿ.ಆರ್. ಗುರುದೇವ್, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಹುಡಾ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ‘ಸೇವಾರತ್ನ’ ಕೃತಿಯ ಸಂಪಾದಕಿ ವನಜಾಕ್ಷಿ ಬೆಟ್ಟದಾಲೂರು, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ನವಿಲೆ ಪರಮೇಶ್, ಕಸಾಪ ಜಿಲ್ಲಾ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ.ವೆಂಕಟೇಶ್ ಮೂರ್ತಿ, ಕಾಂಗ್ರೆಸ್ ಮುಖಂಡ ಬಿ.ಪಿ.ಮಂಜೇಗೌಡ, ಅಹಮದ್ ಹಗರೆ, ರವಿ ನಾಕಲಗೂಡು, ಸವಿತಾ ಶಿವಕುಮಾರ್, ವೈ.ವಿ. ಗಂಧನ ತೇಜಸ್, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಡಾ. ವೈ.ಎಸ್. ವೀರಭದ್ರಪ್ಪ ಅವರನ್ನು ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಅಭಿಮಾನಿಗಳು ಹಾಗೂ ನಾಗರಿಕರು ಸನ್ಮಾನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net