ಆಲೂರು: ಸಾಮಾಜಿಕ, ಕೌಟುಂಬಿಕ ಹಾಗೂ ಶೈಕ್ಷಣಿಕ ಮೌಲ್ಯಗಳು ಕುಸಿಯುತ್ತಿರುವ ವರ್ತಮಾನದ ಸಂದರ್ಭದಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ ಉತ್ತಮ ನಾಗರಿಕರನ್ನಾಗಿ ಸೃಜಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ರಂಗೇಗೌಡ ಅಭಿಪ್ರಾಯಪಟ್ಟರು.
ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ವತಿಯಿಂದ ಹಮ್ಮಿಕೊಂಡಿದ್ದ ದಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳಲ್ಲಿ ಸೃಜನಾತ್ಮಕ ಆಲೋಚನೆಗಳನ್ನು ಹುಟ್ಟು ಹಾಕುವುದರ ಜತೆಗೆ ಪ್ರಕೃತಿಯೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಜೀವನ ಕೌಶಲಗಳನ್ನು ವೃದ್ಧಿಸುತ್ತದೆ. ಸರಳ ಜೀವನ ಕ್ರಮಗಳನ್ನು ಪರಿಚಯಿಸುತ್ತದೆ. ನಮ್ಮ ಶಾಲೆಯ ಪ್ರತಿ ವಿದ್ಯಾರ್ಥಿ ಸಹ ಕಾರ್ಯಕ್ರಮದ ಭಾಗವಾಗಬೇಕು. ಇದೊಂದು ಜಾಗತಿಕ ಸಂಸ್ಥೆಯಾಗಿದ್ದು ಮಕ್ಕಳ ಅಭ್ಯುದಯಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆಯಾಗಿದೆ ಎಂದು ಹೇಳಿದರು.
ಪಠ್ಯ ಪುಸ್ತಕ ಕಲಿಸಲಾರದ ನೂರಾರು ಜೀವನ ಮೌಲ್ಯಗಳನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಲಿಸುತ್ತದೆ. ನಾನೂ ಸಹ ಮೂಲ ತರಬೇತಿ, ಮುಂದುವರಿದ ತರಬೇತಿ ಪಡೆದಿದ್ದು ವೈಯಕ್ತಿಕ ಮೌಲಿಕ ಜೀವನ ಸಾಗಿಸಲು ನೆರವಾಗಿದೆ. ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ಸಂಯಮ, ಸೇವಾ ಮನೋಭಾವನೆ ಬಹಳ ಮುಖ್ಯ. ಈ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಪ್ರಮುಖ ಉದ್ದೇಶವನ್ನು ಈ ಸಂಸ್ಥೆ ಹೊಂದಿರುವುದರಿಂದ ಎಲ್ಲ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಕೌಟಿಂಗ್ ಇಸ್ ಔಟಿಂಗ್ ಎಂಬಂತೆ ಮಕ್ಕಳಿಗೆ ಹೊರಜಗತ್ತಿನ ಪರಿಚಯ ಮಾಡುವುದರ ಜತೆಗೆ ಸಾಮಾಜಿಕ ಜ್ಞಾನವನ್ನು ಬೆಳೆಸುತ್ತದೆ. ಶಿಸ್ತು, ಸೇವೆ, ಸಂಯಮದ ಜತೆಗೆ ಹಿರಿಯರಿಗೆ, ವೃದ್ಧರಿಗೆ, ದುರ್ಬಲರಿಗೆ ಸಹಾಯ ಮಾಡುವ ಉದಾತ್ತ ಗುಣಗಳನ್ನು ಬೆಳೆಸುತ್ತದೆ ಎಂದರು.
ಜಿಲ್ಲಾ ಖಜಾಂಚಿ ಆರ್.ಎಸ್.ರಮೇಶ್, ರಾಜ್ಯ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕಾ, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ಮುಖ್ಯ ಶಿಕ್ಷಕಿ ಸಂಧ್ಯಾ ಜಯರಾಂ, ಸ್ಕೌಟ್ ಮಾಸ್ಟರ್ ಶಿವಶಂಕರ್, ಸಹ ಶಿಕ್ಷಕ ಮೋಹನ್, ಪುಟ್ಟರಾಜು ಉಪಸ್ಥಿತರಿದ್ದರು.