ರಾಮಾಪುರ ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಡಾ.ಪಿ.ಶಿವು, ಇಂದ್ವಾಡಿ ಮಹೇಶ್, ವೆಂಕಟೇಶ್, ಶ್ರೀಕಂಠ ಇತರರಿದ್ದರು.
ಹನೂರು: ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವುದರ ಜತೆಗೆ ಸ್ವಚ್ಛತೆ ಹಾಗೂ ಶಿಸ್ತು ರೂಢಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಪಿ.ಶಿವು ತಿಳಿಸಿದರು.
ತಾಲೂಕಿನ ರಾಮಾಪುರ ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾರ್ಥಿ ದಿಸೆಯಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಇದಕ್ಕೆ ಪಾಲಕರು ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಸಾಹಿತಿ ಇಂದ್ವಾಡಿ ಶಿವಣ್ಣ ಮಾತನಾಡಿ, ಶಿಕ್ಷಣ ವಂಚಿತ ಪ್ರದೇಶದಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಿದವರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು. ಈ ಭಾಗದಲ್ಲಿ ಇವರು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರ. ಶ್ರೀಗಳ ಸಂಕಲ್ಪದಂತೆ ಮಕ್ಕಳ ಭವಿಷ್ಯ ಈ ಸಂಸ್ಥೆಯಲ್ಲಿ ಸಾಕಾರಗೊಳ್ಳಲಿ ಎಂದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಿಇಒ ಮಹೇಶ್, ಬಿಆರ್‌ಸಿ ವೆಂಕಟೇಶ್, ಸಿಆರ್‌ಪಿ ಮಹದೇವಪ್ರಸಾದ್, ಮುಖ್ಯ ಶಿಕ್ಷಕ ಶ್ರೀಕಂಠ, ಶಿಕ್ಷಕರಾದ ಶ್ವೇತಾ, ಮಹೇಶ್, ವಿನಯ್‌ಕುಮಾರ್ ಇದ್ದರು.