ಸಕಲೇಶಪುರ: ಹೋರಾಟಗಾರರನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳು ಸಲ್ಲದು. ಸಮಾಜದಲ್ಲಿ ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೆ ಇದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ಹೇಳಿದರು.
2023ರಲ್ಲಿ ಅರ್ಜುನ ಆನೆಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ ಆನೆಯ ಪರವಾಗಿ ಹೋರಾಟ ನಡೆಸಿದ 19 ಜನರ ಮೇಲೆ ಪ್ರಕರಣ ದಾಖಲಾಗಿರುವುದು ಬೇಸರದ ಸಂಗತಿ. ಈ ಪ್ರಕರಣದ ಬಗ್ಗೆ ಸಮನ್ಸ್ ಬರುವವರೆಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಮಾಹಿತಿ ತಿಳಿದ ನಂತರ 2025ರ ನವೆಂಬರ್ 30ರಂದು ಕೋರ್ಟ್ ಸಮನ್ಸ್ ಕಳುಹಿಸಿರುವುದು ಗೊತ್ತಾಗಿದೆ. ಆದರೆ ಡಿಸೆಂಬರ್ 5ರಂದು ಎಫ್‌ಐಆರ್ ದಾಖಲಾಗಿರುವುದು ಸಂಬಂಧಪಟ್ಟವರಿಗೆ ತಿಳಿದಿರಲಿಲ್ಲ. ಈ ವಿಚಾರವನ್ನು ಹಾಸನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದ ಸಂದರ್ಭ ಅವರ ಗಮನಕ್ಕೆ ತಂದಿದ್ದೇವೆ. ಅಧಿವೇಶನ ಮುಗಿದ ಬಳಿಕ ಹೋರಾಟಗಾರರ ಪಟ್ಟಿ ಪಡೆದು, ಯಾರ‌್ಯಾರ ಮೇಲೆ ಪ್ರಕರಣ ದಾಖಲಾಗಿದೆ ಎಂಬುದನ್ನು ಪರಿಶೀಲಿಸಿ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕಾನೂನು ಸಚಿವರ ಗಮನಕ್ಕೆ ತಂದು ಪ್ರಕರಣ ಕೈಬಿಡುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡುವುದಿಲ್ಲ. ಹೋರಾಟದ ಹೆಸರಿನಲ್ಲಿ ಕೆಲ ಸಂಘಟನೆಗಳು ಅಧಿಕಾರಿಗಳನ್ನು ಬೆದರಿಸುವುದು, ಬಡವರು ಹಾಗೂ ಕೂಲಿಕಾರ್ಮಿಕರ ಪರ ಎಂದು ಹೇಳಿಕೊಂಡು ಸಮಾಜವನ್ನು ತಪ್ಪು ದಿಕ್ಕಿಗೆ ಕರೆದೊಯ್ಯುವ ಕೃತ್ಯಗಳಲ್ಲಿ ತೊಡಗಿರುವುದು ವಿಷಾದಕರ. ಸುಖಾ ಸುಮ್ಮನೆ ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿ ಅಧಿಕಾರಿಗಳನ್ನು ಹೆದರಿಸಿ ಹಣ ಪಡೆಯುವವರ ವಿರುದ್ಧ ಎಚ್ಚರ ವಹಿಸಬೇಕು. ಪ್ರಾಮಾಣಿಕ ಹೋರಾಟಗಾರರ ಹಿಂದೆ ಸರ್ಕಾರ ಸದಾ ನಿಂತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಗಮನಕ್ಕೆ ತಂದು ಪ್ರಕರಣ ಖುಲಾಸೆಗೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಎಲ್ಲ ಆನೆಗಳನ್ನು ಹಿಡಿಯಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಹೀಗಾಗಿ ಸಂಪೂರ್ಣ ಕಾಡಾನೆಗಳ ಸ್ಥಳಾಂತರ ಸಾಧ್ಯವಾಗಿಲ್ಲ ಎಂದರು. ಪಕ್ಷದ ಕೆಲವರು ಸಭೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಕಾಂಗ್ರೆಸ್ ಪಕ್ಷದ ಅಧಿಕೃತ ಸಭೆಯಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಅಧ್ಯಕ್ಷರ ಗಮನಕ್ಕೆ ತಾರದೆ ಯಾವುದೇ ಸಭೆ ಮಾಡಲು ಅವಕಾಶ ಕೊಡುವುದಿಲ್ಲ. ಕಾಂಗ್ರೆಸ್ ಸರ್ಕಾರ ಪಟ್ಟಣದ ಅಭಿವೃದ್ಧಿಗಾಗಿ ಯೋಜನಾ ಪ್ರಾಧಿಕಾರ ರಚನೆ ಮಾಡಿದೆ. ಎಲ್ಲರ ಅನುಮತಿ ಪಡೆದು ಪ್ರಾಧಿಕಾರಕ್ಕೆ ಸದಸ್ಯರ ನೇಮಕ ಮಾಡಲಾಗಿದೆ. ಇಲ್ಲಿ ಯಾವುದೇ ಭಿನ್ನಾಪ್ರಾಯಕ್ಕೆ ಅವಕಾಶ ನೀಡಿಲ್ಲ ಎಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು ಮಾತನಾಡಿ, 19 ಜನರ ಮೇಲೆ ಪ್ರಕರಣ ದಾಖಲಾಗಿರುವ ವಿಚಾರವನ್ನು ಈಗಾಗಲೇ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಹೋರಾಟಗಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅವರಿಗೆ ನ್ಯಾಯ ಒದಗಿಸುವುದಾಗಿ ನಮ್ಮ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸಕಲೇಶಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ಮುಫೀಜ್, ಪ್ರಾಧಿಕಾರದ ಸದಸ್ಯರಾದ ಬಿ.ಡಿ.ವಿಜಯ್ ಕುಮಾರ್, ಬೈಕೆರೆ ದೇವರಾಜ್, ಬಗರ್‌ಹುಕುಂ ಸಮಿತಿ ಸದಸ್ಯ ಉದಯ್, ಕಲ್ಗಣೆ ಪ್ರಶಾಂತ್ ಇದ್ದರು.