ಸಕಲೇಶಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಎಸ್.ಜಾನಕಿ ಅವರ ನುಡಿ ನಮನ ಹಾಗೂ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ರವಿ ನಾಕಲಗೋಡು ಮಾತನಾಡಿದರು.ಉದಯರವಿ, ರವಿ, ಶಾರದಾ ಗುರುಮೂರ್ತಿ, ಯೋಗೇಶ್ ಮತ್ತಿತರರಿದ್ದರು.
Published on:
Copied
Follow Us
ಸಕಲೇಶಪುರ:
ಕನ್ನಡ ನಾಡು, ನುಡಿ ಹಾಗೂ ಸಂಗೀತ ಕ್ಷೇತ್ರಕ್ಕೆ ಎಸ್.ಜಾನಕಿ ಅವರು ನೀಡಿದ ಕೊಡುಗೆ ಅವಿಸ್ಮರಣೀಯವಾಗಿದ್ದು, ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪತ್ರಕರ್ತ ರವಿ ನಾಕಲಗೋಡು ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಎಸ್.ಜಾನಕಿ ಅವರ ನುಡಿ ನಮನ ಹಾಗೂ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ನುಡಿ ನಮನ ಹಾಗೂ ಸ್ಮರಣೋತ್ಸವ ಕಾರ್ಯಕ್ರಮಗಳ ಸರಣಿಯಲ್ಲಿ ಇದು 12ನೇ ಕಾರ್ಯಕ್ರಮವಾಗಿದೆ. ಜಾನಕಿ ಅವರ ಸುದೀರ್ಘ ಕಲಾ ಜೀವನ ಹಾಗೂ ಕನ್ನಡ ಭಾಷೆ ಮತ್ತು ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಾನಕಿ ಅವರು ಕನ್ನಡ ನಾಡಿನಲ್ಲಿ ಜನಿಸದಿದ್ದರೂ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಹಾಗೂ ಅಭಿಮಾನ ಹೊಂದಿದ್ದರು. ಹಲವು ಭಾಷೆಗಳಲ್ಲಿ ಪರಿಣತಿ ಹೊಂದಿದ್ದ ಅವರು ಸಾವಿರಾರು ಹಾಡುಗಳ ಮೂಲಕ ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಆಯಾ ಭಾಷೆಯನ್ನು ಅರಿತು, ಅದರ ಭಾವವನ್ನು ಅರ್ಥೈಸಿಕೊಂಡು ಹಾಡುವುದೇ ಅವರ ವಿಶೇಷತೆ ಎಂದು ಹೇಳಿದರು.
ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಉದಯರವಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದುವ ಹಾಗೂ ಸುದ್ದಿವಾಹಿನಿಗಳನ್ನು ವೀಕ್ಷಿಸುವ ಅಭ್ಯಾಸ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಸ್.ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಡಾ.ರಾಜಕುಮಾರ್, ಕುವೆಂಪು ಸೇರಿದಂತೆ ಹಲವು ಮಹನೀಯರ ಸಾಧನೆ ಹಾಗೂ ಕೊಡುಗೆಗಳನ್ನು ಯುವಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ರವಿ ಮಾತನಾಡಿ, ಮಹನೀಯರು ನಮ್ಮ ನಡುವೆ ಇಲ್ಲದಿದ್ದರೂ ಅವರು ಬಿಟ್ಟುಹೋದ ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸಬೇಕು. ಅವರ ಜೀವನಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಾಡು-ನುಡಿಗೆ ಸೇವೆ ಸಲ್ಲಿಸಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಕಾರ್ಯದರ್ಶಿ ಯೋಗೇಶ್, ಕಲಾವಿದರ ಸಂಘದ ರಮೇಶ್, ವೇಣು, ಮೀನಾಕ್ಷಿ ಖಾದರ್, ರೋಟರಿ ಸಂಸ್ಥೆಯ ದಯಾನಂದ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸಹನಾ, ಕನ್ನಡ ಪ್ರಾಧ್ಯಾಪಕಿ ಮಮತಾ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.