ಬೇಲೂರು ತಾಲೂಕಿನ ಮುತ್ತುಗದಾಳು ಗ್ರಾಮದ ಶ್ರೀ ಆಂಜನೇಯ ದೇಗುಲ ಸಮೀಪ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷ ಮಹಮದ್ ಹಕೀಂ ಇತರರು ಇದ್ದರು.
ಬೇಲೂರು: ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ 1630 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತಿದ್ದು, ಗುತ್ತಿಗೆದಾರ ಗುಣಮಟ್ಟದಲ್ಲಿ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಗೆಂಡೇಹಳ್ಳಿ ಸಮೀಪದ ಮುತ್ತುಗದಾಳು ಗ್ರಾಮದಲ್ಲಿ ಮಂಗಳವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮಲೆನಾಡು ಭಾಗದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಈ ಮುತ್ತುಗದಾಳು ಗ್ರಾಮಸ್ಥರ ಬೇಡಿಕೆ ಹಾಗೂ ಚುನಾವಣಾ ಪೂರ್ವದಲ್ಲಿ ನಾನು ಕೊಟ್ಟ ಮಾತಿನಂತೆ ಬೇಲೂರು-ಮೂಡಿಗೆರೆ ಸಂಪರ್ಕದ ಗೆಂಡೇಹಳ್ಳಿ ಮುಖ್ಯ ರಸ್ತೆಯಿಂದ ಮತ್ತುಗದಾಳು, ಗೋರಿಮಠ, ಮರವತ್ತಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಈ ಭಾಗದ ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇಗುಲದ ಹತ್ತಿರ ರಸ್ತೆ ಅಭಿವೃದ್ಧಿಗಾಗಿ 1.2 ಕೋಟಿ ರೂ. ಅನುದಾನವನ್ನು ಎತ್ತಿನಹೊಳೆ ಯೋಜನೆಯಡಿ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಅನುದಾನ ತಂದು ಕೆಲಸ ಮಾಡಿಸಲು ಮುಂದಾಗಿದ್ದು, ನಾನು ಗ್ರಾಮಸ್ಥರಿಗೆ ಕೊಟ್ಟ ಮಾತಿನಂತೆ ನಡೆದು ಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಗ್ರಾಮದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನದಲ್ಲಿ ಉಳಿದ ಕೆಲಸ ಮಾಡಿಸಲಾಗುವುದು ಹಾಗೂ ಗುತ್ತಿಗೆದಾರರು ಗುಣಮಟ್ಟದಲ್ಲಿ ಕೆಲಸ ನಿರ್ವಹಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಅಬ್ದುಲ್ ಸುಭಾನ್, ಗ್ರಾಪಂ ಮಾಜಿ ಅಧ್ಯಕ್ಷ ಮಹಮದ್ ಹಕೀಂ, ಮುಖಂಡರಾದ ಜಿ.ಕೆ.ಕುಮಾರ್, ವಿನಯ್, ರಾಮೇಗೌಡ, ಕಾಂತರಾಜು, ಉದ್ದೇಗೌಡ, ಜನಾರ್ದನ್, ತಿಮ್ಮೇಗೌಡ, ಗಣೇಶ್, ರಂಜಿತ್, ಉದ್ದೇಗೌಡ, ಮಧು, ಸಂಜಯ್ ಸೇರಿದಂತೆ ಇತರರಿದ್ದರು.