ಹಾಸನ ನಗರದ ಎಂ.ಜಿ.ರಸ್ತೆಯ ಕುರುಹಿನ ಶೆಟ್ಟಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸತೀಶ್ ಹೊನ್ನವಳ್ಳಿ, ಎ.ಯೋಗೇಶ್, ಕೆ.ಸಿ. ಕೃಷ್ಣಶೆಟ್ಟಿ, ಕೆ.ಕೆ. ಮೋಹನ್ ಕುಮಾರ್ ಇತರರಿದ್ದರು.
ಹಾಸನ: ಮದ್ಯದ ಚಟದಿಂದ ಆರೋಗ್ಯದ ಜತೆಗೆ ಕುಟುಂಬದ ವಿಶ್ವಾಸ ಮತ್ತು ಸಂಬಂಧಗಳು ಹಾಳಾಗುತ್ತವೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಸತೀಶ್ ಹೊನ್ನವಳ್ಳಿ ಹೇಳಿದರು.
ನಗರದ ಎಂ.ಜಿ. ರಸ್ತೆಯ ಕುರುಹಿನ ಶೆಟ್ಟಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ 2092ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹಣವಿದ್ದಾಗ ಸ್ನೇಹಿತರು ಜತೆಯಾಗುತ್ತಾರೆ. ಆದರೆ, ಕಷ್ಟದ ಸಮಯದಲ್ಲಿ ನಿಜವಾದ ಬೆಂಬಲ ಕುಟುಂಬದಿಂದ ಮಾತ್ರ ದೊರಕುತ್ತದೆ. ಧರ್ಮಸ್ಥಳದ ಶಿಬಿರಗಳು ಕೇವಲ ಚಿಕಿತ್ಸಾ ಕೇಂದ್ರಗಳಲ್ಲ. ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದದಿಂದ ಹೊಸ ಬದುಕಿಗೆ ದಾರಿ ತೋರಿಸುವ ಪುನರ್ಜನ್ಮದ ವೇದಿಕೆಗಳಾಗಿವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ. ಯೋಗೇಶ್ ಮಾತನಾಡಿ, 1993ರಿಂದ ಇದುವರೆಗೆ 1.35 ಲಕ್ಷಕ್ಕೂ ಹೆಚ್ಚು ಜನರು ನಮ್ಮ ಶಿಬಿರಗಳಿಂದ ವ್ಯಸನ ಮುಕ್ತರಾಗಿ ಗೌರವಯುತ ಬದುಕು ನಡೆಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೆ.ಸಿ. ಕೃಷ್ಣಶೆಟ್ಟಿ, ಕೆ.ಕೆ.ಮೋಹನ್ ಕುಮಾರ್ ಇತರರಿದ್ದರು.