ಕುಂಟುತ್ತಾ ಸಾಗಿದೆ ರೈಲ್ವೆ ಬ್ಯಾರಿಕೇಡ್ ಕಾಮಗಾರಿ

ರೈಲ್ವೆ ಬ್ಯಾರಿಕೇಡ್
ರೈಲ್ವೆ ಬ್ಯಾರಿಕೇಡ್
Published on

ಪ್ರಮುಖ ಮುಖ್ಯಾಂಶಗಳು

  • ಕುಂಟುತ್ತಾ ಸಾಗಿದೆ ರೈಲ್ವೆ ಬ್ಯಾರಿಕೇಡ್ ಕಾಮಗಾರಿ
  • ಕಾಡಾನೆ ಹಾವಳಿ ನಿಯಂತ್ರಣಕ್ಕೆ ದೊರೆಯದ ಶಾಶ್ವತ ಪರಿಹಾರ ಸರ್ಕಾರ ನಿರ್ಲಕ್ಷೃ
ಹಾಸನ: ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ತಾತ್ಕಾಲಿಕ ಪರಿಹಾರವಾಗಿರುವ ರೈಲ್ವೆ ಬ್ಯಾರಿಕೇಡ್ (ರೈಲ್ವೆ ಕಂಬಿ ತಡೆಗೋಡೆ) ನಿರ್ಮಾಣ ಕಾಮಗಾರಿಕ್ಕೂ ಸರ್ಕಾರ ಅನುದಾನ ಒದಗಿಸಲು ನಿರ್ಲಕ್ಷೃ ತೋರಿರುವುದರಿಂದ ಜಿಲ್ಲೆಯಲ್ಲಿ ಈವರೆಗೂ 35 ಕಿ.ಮೀ. ಮಾತ್ರ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ.
ಈ ಹಿಂದೆ ಸರ್ಕಾರ ಬಜೆಟ್‌ನಲ್ಲಿ ಜಿಲ್ಲೆಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕಾಗಿಯೇ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿತ್ತು. ಅದರಿಂದಲೇ ಜಿಲ್ಲೆಯಲ್ಲಿ ಇಲ್ಲಿಯವರೆಗೆ 35 ಕಿ.ಮೀ. ರೈಲ್ವೆ ಕಂಬಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಕಳೆದ ಎರಡು ಬಜೆಟ್‌ಗಳಲ್ಲಿ ಅನುದಾನ ಮೀಸಲಿಡದೆ ಇರುವುದರಿಂದ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಕಾಮಗಾರಿ ಕುಂಟುತ್ತಾ ಸಾಗಿದೆ.
ಕೊಡಗು ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಸಕಲೇಶಪುರ, ಆಲೂರು ತಾಲೂಕು ಭಾಗಕ್ಕೆ ಪಕ್ಕದ ಕೊಡಗು ಭಾಗದಿಂದ ವಲಸೆ ಬರುವ ಕಾಡಾನೆಗಳ ಹಿಂಡನ್ನು ತಡೆಯಲು ಅರಣ್ಯ ಇಲಾಖೆ ಕೈಗೊಂಡಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದರೂ ತಾತ್ಕಾಲಿಕ ಪರಿಹಾರವನ್ನು ಒದಗಿಸಿದೆ.
ಅರಣ್ಯ ಇಲಾಖೆಯಿಂದ ಇದುವರೆಗೂ ಒಟ್ಟು 35 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಕಾಡಾನೆಗಳು ರಸ್ತೆ ದಾಟುವಾಗ ವಾಹನ ಸವಾರರು, ದಾರಿಹೋಕರ ಮೇಲೆ ದಾಳಿ ಮಾಡುವುದನ್ನು ತಪ್ಪಿಸಲು 13 ಕಬ್ಬಿಣದ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಕೊಡಗು ಭಾಗದಿಂದ ಹಾಸನ ಜಿಲ್ಲೆಗೆ ಬರುವ ಕಾಡಾನೆಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದ್ದು, ಕಾಡಾನೆ ಪೀಡಿತ ಪ್ರದೇಶದ ಜನರು ಕೊಂಚ ನಿಟ್ಟುಸಿರುಬಿಟ್ಟಿದ್ದಾರೆ.
ಆದರೆ, ಚಿಕ್ಕಮಗಳೂರು ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿರುವ ಬೇಲೂರು ತಾಲೂಕು ಭಾಗದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡದೆ ಇರುವುದರಿಂದ ನಿರಂತರವಾಗಿ ಕಾಡಾನೆ ಹಾವಳಿ ನಡೆಯುತ್ತಲೇ ಇದೆ. ಚಿಕ್ಕಮಗಳೂರು-ಬೇಲೂರು ನಡುವೆ ಕಾಡಾನೆಗಳು ಗುಂಪು ಗುಂಪಾಗಿ ಸಂಚಾರ ಮಾಡುತ್ತಿರುವುದರಿಂದ ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ- ಮಾನವ ಸಂಘರ್ಷ ತೀವ್ರಗೊಂಡಿದೆ. ಹೀಗಾಗಿ, ಈ ಭಾಗದಲ್ಲೂ ರೈಲ್ವೆ ಕಂಬಿ ತಡೆಗೋಡೆ ನಿರ್ಮಾಣ ಮಾಡಬೇಕೆಂಬ ಕೂಗು ಎದ್ದಿದೆ.
90 ಅಮಾಯಕ ಜೀವಗಳು ಬಲಿ
ಸಕಲೇಶಪುರ, ಆಲೂರು ಹಾಗು ಬೇಲೂರು ಭಾಗದ ಜನರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಕಾಡಾನೆ ಸಮಸ್ಯೆಯಿಂದ ಕಾಫಿ ಬೆಳೆಗಾರರು, ರೈತರು, ಕೂಲಿ ಕಾರ್ಮಿಕರು ಹೈರಾಣಾಗಿ ಹೋಗಿದ್ದಾರೆ. ಇದುವರೆಗೂ 90 ಅಮಾಯಕ ಜೀವಗಳು ಕಾಡಾನೆಗಳ ದಾಳಿಗೆ ಬಲಿಯಾಗಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ನೂರಾರು ಹೋರಾಟಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಕೊಡಗು ಭಾಗದಿಂದ ಕುಡಿಯುವ ನೀರು ಹಾಗೂ ಆಹಾರ ಅರಸಿ ಕಾಡಾನೆಗಳು ಆಲೂರು ಭಾಗದ ನದಿಯ ಹಿನ್ನೀರಿಗೆ ಬಂದು ಜಿಲ್ಲೆಯ ಮಲೆನಾಡು ಭಾಗ ಸೇರುತ್ತಿವೆ. ಅಲ್ಲದೆ ರೈತರ ಬೆಳೆಗಳನ್ನು ನಾಶ ಮಾಡುವುದರ ಜತೆಗೆ ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿವೆ. ಈ ನಿಟ್ಟಿನಲ್ಲಿ ಅಕ್ಕಪಕ್ಕದ ಜಿಲ್ಲೆಯಿಂದ ಕಾಡಾನೆಗಳು ಬರದಂತೆ ತಡೆಯಲು 35 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶಿರಗಾವರ ಸೇತುವೆ ಸೇರಿ ಒಟ್ಟು ಹದಿಮೂರು ಕಡೆ ಕಬ್ಬಿಣದ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಕಾಡಾನೆಗಳು ರಸ್ತೆ, ಸೇತುವೆ ದಾಟುವಾಗ ಗೇಟ್‌ಗಳನ್ನು ಬಂದ್ ಮಾಡಿದರೆ ಮನುಷ್ಯರ ಮೇಲೆ ದಾಳಿ ಮಾಡುವುದು ತಪ್ಪಲಿದೆ. ಇದರಿಂದ ಪಕ್ಕದ ಜಿಲ್ಲೆಯಿಂದ ಬರುವ ಕಾಡಾನೆಗಳಿಗೆ ಬ್ರೇಕ್ ಬಿದ್ದಂತಾಗಿದೆ. ಇದರಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆಯೇ ಹೊರತು ಶಾಶ್ವತ ಪರಿಹಾರ ಸಿಕ್ಕಿಲ್ಲ.
ನಿಲ್ಲದ ಬೆಳೆ ನಾಶ, ಪ್ರಾಣ ಹಾನಿ
ರೈಲ್ವೆ ಬ್ಯಾರಿಕೇಡ್ ನಿರ್ಮಾಣದಿಂದ ಸಣ್ಣ ಪ್ರಮಾಣದ ಪರಿಹಾರ ಸಿಕ್ಕಿದೆ ಅಷ್ಟೆ. ಆದರೆ ವರ್ಷದಿಂದ ವರ್ಷಕ್ಕೆ ಕಾಡಾನೆಗಳ ಸಂತತಿ ಹೆಚ್ಚುತ್ತಲೇ ಇದ್ದು, ಬೆಳೆ ನಾಶ, ಪ್ರಾಣ ಹಾನಿ ಮುಂದುವರೆಯುತ್ತಲೇ ಇದೆ. ಆದರೆ, ಆಡಳಿತ ನಡೆಸಿದ ಸರ್ಕಾರಗಳು ಪರಿಹಾರದ ಚೆಕ್ ವಿತರಣೆ ಮಾಡಿ ಕೇವಲ ಭರವಸೆ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಹೊರತು ಸುದೀರ್ಘ ಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿಲ್ಲ. ಇನ್ನಾದರೂ ಸರ್ಕಾರಗಳ ಗಂಭೀರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂಬುದು ಕಾಡಾನೆಗಳ ಉಪಟಳದಿಂದ ನಲುಗಿ ಹೋಗಿರುವ ಮಲೆನಾಡು ಜನರ ಒತ್ತಾಯವಾಗಿದೆ.
ಆನೆಧಾಮ ನಿರ್ಮಾಣ ಮಾಡಿ
ಸಕಲೇಶಪುರ, ಆಲೂರು ಬೇಲೂರು ಭಾಗದಲ್ಲಿ 80ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ಇವುಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕು, ಇಲ್ಲವಾದಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿ ಹಾಗೂ ರೈತರಿಗೆ ಪರಿಹಾರ ನೀಡಿ ಭೂಮಿ ಖರೀದಿಸಿ ಆನೆಧಾಮ ನಿರ್ಮಾಣ ಮಾಡಿ, ಕಾಡಾನೆಗಳಿಗೆ ಬೇಕಾದ ಆಹಾರ ಬೆಳೆದು ನೀರಿನ ಸೌಲಭ್ಯ ಕಲ್ಪಿಸಿ ಅಲ್ಲಿಗೆ ಜಿಲ್ಲೆಯಲ್ಲಿರುವ ಎಲ್ಲ ಕಾಡಾನೆಗಳನ್ನು ಸ್ಥಳಾಂತರ ಮಾಡಿದರೆ ಮಾತ್ರ ಜಿಲ್ಲೆಯನ್ನು ಬೆಂಬಿಡದ ಕಾಡುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಹಾಗೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಕಾಡಾನೆ ಸಮಸ್ಯೆಯಿಂದ ನಲುಗಿರುವ ಜನರ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net