ಹಾಸನ:ನಟ ಯಶ್ ಅವರ ತಾಯಿ ಪುಷ್ಪಾ ಅವರ ಮನೆ ಪಕ್ಕದ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಮ್ಮ ವಕೀಲರು ಎಲ್ಲ ದಾಖಲೆಗಳನ್ನು ಖುದ್ದು ಪರಿಶೀಲಿಸಿದ ಬಳಿಕವೇ ನಾನು 2020ರಲ್ಲಿ ನಿವೇಶನ ಖರೀದಿಸಿದ್ದೇನೆ ಎಂದು ಪುಷ್ಪಾ ಸ್ಪಷ್ಟನೆ ನೀಡಿದರು.
ಸೋಮವಾರ ಅಪರ ಜಿಲ್ಲಾಧಿಕಾರಿಗೆ ಈ ಸಂಬಂಧ ಮನವಿ ನೀಡಿದ್ದು, ಇ-ಸ್ವತ್ತು ಹಾಗೂ ಚಕ್ಕುಬಂದಿ ದಾಖಲೆಗಳಲ್ಲಿ ಪೂರ್ವಕ್ಕೆ ನಟರಾಜ್ ಅವರಿಗೆ ಸೇರಿದ ನಿವೇಶನ, ಪಶ್ಚಿಮಕ್ಕೆ ನಾನು ಖರೀದಿಸಿರುವ ಮನೆ, ದಕ್ಷಿಣಕ್ಕೆ ರಸ್ತೆ ಹಾಗೂ ಉತ್ತರಕ್ಕೆ ಖಾಲಿ ನಿವೇಶನ ಇದೆ ಎಂದು ಸ್ಪಷ್ಟವಾಗಿ ನಮೂದಾಗಿದೆ ಎಂದು ವಿವರಿಸಿದರು.
ಈ ಜಾಗವನ್ನು 1982ರಲ್ಲಿ ಶ್ರೀಮತಿ ಅವರು ಖರೀದಿಸಿದ್ದು, 2007ರಲ್ಲಿ ಗಿರೀಶ್ ಅವರಿಗೆ ಮಾರಾಟ ಮಾಡಲಾಗಿತ್ತು. ನಂತರ 2020ರಲ್ಲಿ ನಾನು ಕಾನೂನುಬದ್ಧವಾಗಿ ಖರೀದಿಸಿದ್ದೇನೆ. 42 ವರ್ಷಗಳಿಂದ ಯಾವುದೇ ವಿವಾದವಿಲ್ಲದೆ ಇರಲಿಲ್ಲ. ಈಗ ಏಕಾಏಕಿ ಗಲಾಟೆ ಏಕೆ ಶುರುವಾಗಿದೆ?. ಇದರ ಹಿಂದೆ ಪಿಡಿಒ ನಟರಾಜ್ ಇದ್ದಾರೆ. ಯಶ್ ತಾಯಿ ಎನ್ನುವ ಕಾರಣಕ್ಕೆ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ವಿವಾದ ಸೃಷ್ಟಿಸಲಾಗುತ್ತಿದೆ ಹಾಗೂ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣ ಈಗಾಗಲೇ ನ್ಯಾಯಾಲಯದ ಮುಂದೆ ಇದ್ದು, ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ನಾನು ನೀಡಿದರೆ ದಾನ, ಹೆದರಿದರೆ ಹೇಡಿತನ. ನನ್ನನ್ನು ಹೆದರಿಸಿ ಜಾಗ ಕಿತ್ತುಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ನಾನು ಇದಕ್ಕೆಲ್ಲ ಹೆದರುವುದಿಲ್ಲ. ಇನ್ನು ಈ ವಿಚಾರದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹೀಗಾಗಿ ಅಪರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದೇನೆ. ನಮ್ಮ ಜಾಗಕ್ಕೆ ಕೆಲವರು ಬಂದು ಸುಖಾಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ. ನಾನು ಸದಾ ಇಲ್ಲಿ ಇರುವುದಿಲ್ಲ. ನಮ್ಮ ಹುಡುಗರು ಇರುತ್ತಾರೆ. ಹೀಗಾಗಿ ಬಂದೋಬಸ್ತ್ ಅಗತ್ಯವಿದೆ ಎಂದು ಪುಷ್ಪಾ ಒತ್ತಾಯಿಸಿದರು.