ಟಾಪ್ 3ಗೆ ಪಿಯು ಫಲಿತಾಂಶ ತರಲು ಕಸರತ್ತು

ಪದವಿಪೂರ್ವ ಶಿಕ್ಷಣ ಇಲಾಖೆ
ಪದವಿಪೂರ್ವ ಶಿಕ್ಷಣ ಇಲಾಖೆ
Published on

ಪ್ರಮುಖ ಮುಖ್ಯಾಂಶಗಳು

  • ಟಾಪ್ 3ಗೆ ಪಿಯು ಫಲಿತಾಂಶ ತರಲು ಕಸರತ್ತು
  • ಪದವಿಪೂರ್ವ ಶಿಕ್ಷಣ ಇಲಾಖೆ ಅವಿರತ ಶ್ರಮ
  • ಹಾಜರಾತಿ ಕೊರತೆ ಇದ್ದರೆ ಹಾಲ್ ಟಿಕೆಟ್ ಸಿಗೋದು ಡೌಟ್
ಹಾಸನ: ಕಳೆದ ಬಾರಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 11ನೇ ಸ್ಥಾನ ಪಡೆದು ಶೈಕ್ಷಣಿಕವಾಗಿ ಹಿಮ್ಮುಖವಾಗಿ ಚಲಿಸುತ್ತಿರುವ ಜಿಲ್ಲೆಯನ್ನು ಈ ಬಾರಿಯಾದರೂ ಟಾಪ್ 3 ಸ್ಥಾನದಲ್ಲಿ ಕೂರಿಸಬೇಕೆಂಬ ಉದ್ದೇಶದಿಂದ ಪದವಿಪೂರ್ವ ಶಿಕ್ಷಣ ಇಲಾಖೆ ಅವಿರತ ಶ್ರಮ ವಹಿಸುತ್ತಿದೆ.
ಏ.16 ರಿಂದ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ವೃದ್ಧಿಗೆ ಹತ್ತು ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ಎಲ್ಲ ಕಾಲೇಜುಗಳಲ್ಲಿ ಪಠ್ಯ ಬೋಧನೆ ಮುಕ್ತಾಯವಾಗಿದ್ದು, 27 ವಿಷಯಗಳ ಪುನರಾವರ್ತನೆ ಶುರುವಾಗಿದೆ.
ಖಾಸಗಿ ಕಾಲೇಜುಗಳಿಗೆ ನೋಟಿಸ್?: ಈ ಬಾರಿ ಫಲಿತಾಂಶ ಸುಧಾರಣೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಹಾಜರಾತಿಗೂ ವಿಶೇಷ ಗಮನಹರಿಸಲಾಗಿದೆ. ಜಿಲ್ಲೆಯಲ್ಲಿ 69 ಖಾಸಗಿ ಹಾಗೂ 78 ಸರ್ಕಾರಿ ಕಾಲೇಜುಗಳಿದ್ದು, 15 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆದರೆ, ಖಾಸಗಿ ಕಾಲೇಜುಗಳಲ್ಲಿ ಹಾಜರಾತಿ ದಾಖಲಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೋಮಾರಿತನ ಪ್ರದರ್ಶಿಸುವ ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುತ್ತಿದ್ದಾರೆ. ದಿನಕ್ಕೆ ಕನಿಷ್ಠ ಎರಡು ಕಾಲೇಜುಗಳಿಗಾದರೂ ನೋಟಿಸ್ ಜಾರಿ ಮಾಡುವುದು ಅಲಿಖಿತ ನಿಯಮವಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರೇ ಹಾಜರಾತಿಯನ್ನು ನಿತ್ಯ ಪರಿಶೀಲಿಸುತ್ತಿರುವುದರಿಂದ ಬೆಳಗ್ಗೆ 11ರ ಒಳಗೆ ಪೋರ್ಟಲ್‌ನಲ್ಲಿ ಅಪ್ಲೋಡ್ ಆಗಿರಬೇಕು. ಈ ವಿಚಾರದಲ್ಲಿ ಶೇ.24 ರಷ್ಟು ಹಾಜರಾತಿ ಕೊರತೆ ಕಂಡುಬರುತ್ತಿದೆ. ಶೇ.70ರಷ್ಟು ಹಾಜರಾತಿ ಕಡಿಮೆ ಇದ್ದರೆ ಅಂತಹ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಡಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿ ಪರೀಕ್ಷೆ ಬರೆಯಬೇಕೆಂದರೆ ಹಾಜರಾತಿ ಮಾತ್ರವಲ್ಲದೆ ಕಾಲೇಜಿನಲ್ಲಿ ನಡೆಸುವ ಎರಡು ಪರೀಕ್ಷೆಗೆ ಹಾಜರಾಗಬೇಕು, ಪ್ರಾಜೆಕ್ಟ್ ಕೆಲಸ ಮಾಡಿರಬೇಕು. ಸರ್ಕಾರಿ ಕಾಲೇಜುಗಳ ಹಾಜರಾತಿ ಶೇ.85 ಹಾಗೂ ಖಾಸಗಿ ಕಾಲೇಜುಗಳಲ್ಲಿ ಶೇ.83 ರಷ್ಟಿದ್ದು ಕಾಲೇಜಿನಿಂದ ಬಹಳ ದಿನಗಳವರೆಗೆ ದೂರವಿರುವ ಮಕ್ಕಳಿಗೆ ಹಾಲ್ ಟಿಕೆಟ್ ಸಿಗುವುದು ಅನುಮಾನ.
ಪಾಸಿಂಗ್ ಪ್ಯಾಕೇಜ್‌ಗೆ ಕ್ರಮ: ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷದ ಪರೀಕ್ಷೆ ಸ್ವಲ್ಪ ಕಠಿಣವಾಗಿರಲಿದೆ. ನೀಲಿನಕ್ಷೆ ಸಂಪೂರ್ಣ ಬದಲಾಗಿರುವುದರಿಂದ ಮಕ್ಕಳನ್ನು ಅದಕ್ಕೆ ಸನ್ನದ್ಧರನ್ನಾಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯಿಂದಲೇ 2 ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲಾಗುತ್ತಿದೆ. ಒಬ್ಬ ವಿದ್ಯಾರ್ಥಿಯೂ ಅನುತ್ತೀರ್ಣ ಆಗಬಾರದೆಂಬ ನಿಟ್ಟಿನಲ್ಲಿ ಕ್ರಮ ವಹಿಸಿರುವ ಉಪನ್ಯಾಸಕರು ಪಾಸಿಂಗ್ ಪ್ಯಾಕೇಜ್ ಕ್ರಮದ ಮೊರೆ ಹೋಗಿದ್ದಾರೆ. ಅಧಿಕ ಅಂಕ ಗಳಿಸದಿದ್ದರೂ ಪರವಾಗಿಲ್ಲ. ಕನಿಷ್ಠ ತೇರ್ಗಡೆಯಾಗುವಷ್ಟರ ಮಟ್ಟಿಗೆ ಪರಿಪೂರ್ಣತೆ ಸಾಧಿಸಬೇಕು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಯಾವ ವಿಷಯದಲ್ಲಿ ನಿರಾಸಕ್ತಿ ಹೊಂದಿದೆ ಎಂಬುದು ಗೊತ್ತಾಗುತ್ತದೆ. ಆ ಬಳಿಕ ತರಬೇತಿಗೊಳಿಸಲು ಕ್ರಮ ವಹಿಸಲಾಗಿದೆ.
ಮಕ್ಕಳ ಮೇಲೆ ಹೆಚ್ಚಿದ ಒತ್ತಡ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲೇಬೇಕೆಂದು ಕೆಲವು ಖಾಸಗಿ ಕಾಲೇಜುಗಳು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಪರೀಕ್ಷೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ವ್ಯಾಸಂಗವನ್ನಷ್ಟೇ ಆದ್ಯತೆಯಾಗಿರಿಸಿ ಇನ್ನಿಲ್ಲದ ತೊಂದರೆ ನೀಡಲಾಗುತ್ತಿದೆ. ಅದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಇಲಾಖೆ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಗಳಿಗೆ ಸೂಚನೆ ನೀಡಬೇಕೆಂದು ಪಾಲಕರೊಬ್ಬರು ಆಗ್ರಹಿಸಿದರು.
ಮಾದರಿ ಪ್ರಶ್ನೆ ಪತ್ರಿಕೆ: ವಿದ್ಯಾರ್ಥಿಗಳಿಗೆ ಕಲಿಕೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯಿಂದ 5 ವರ್ಷದ ಪ್ರಶ್ನೆಗಳಿಗೆ ಉತ್ತರವನ್ನು ಬರೆದು ಮಕ್ಕಳಿಗೆ ವಿತರಿಸಲಾಗುತ್ತಿದೆ. ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಉಪನ್ಯಾಸಕರಿಗೆ ತರಬೇತಿ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾಚೇತನ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ಸಿಇಟಿ ಪರೀಕ್ಷೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ಯಾವುದೇ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಬಾರದು ಎಂದು ಪಾಸಿಂಗ್ ಪ್ಯಾಕೇಜ್ ಎಂಬ ಕಾರ್ಯಕ್ರಮ ತಂದಿದ್ದು, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಲ್ಲಿ 50 ಅಂಕದ ಕಡ್ಡಾಯವಾಗಿ ಬರುವ ಪ್ರಶ್ನೆಗಳನ್ನು ಕಲಿಸುವ ಮೂಲಕ ಅನುತ್ತೀರ್ಣವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಲಾಗುತ್ತಿದೆ.
ಕೆ.ಪಿ ಗಂಗಾಧರ್
ಉಪನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net