ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ

ಕಲ್ಲೋಡೆಬೋರೆ ಕಾವಲು ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಹಿರಿಯ ಭೂ ವಿಜ್ಞಾನ ಇಲಾಖೆ ಕಚೇರಿ ಮುಂದೆ ಹಳ್ಳಿಮೈಸೂರು ಹೋಬಳಿ ಸಿ. ಹಿಂದಲಹಳ್ಳಿ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ಕಲ್ಲೋಡೆಬೋರೆ ಕಾವಲು ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಹಿರಿಯ ಭೂ ವಿಜ್ಞಾನ ಇಲಾಖೆ ಕಚೇರಿ ಮುಂದೆ ಹಳ್ಳಿಮೈಸೂರು ಹೋಬಳಿ ಸಿ. ಹಿಂದಲಹಳ್ಳಿ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ
  • ಹೊಸ ಪರವಾನಗಿ ನೀಡುವುದಕ್ಕೆ ವಿರೋಧ
  • ಸಿ.ಹಿಂದಲಹಳ್ಳಿ ಗ್ರಾಮಸ್ಥರ ಆಕ್ರೋಶ
ಹಾಸನ: ಕಲ್ಲೋಡೆಬೋರೆ ಕಾವಲು ವ್ಯಾಪ್ತಿಯಲ್ಲಿ 657 ಎಕರೆ 27 ಗುಂಟೆ ಜಮೀನನ್ನು ಒಗ್ಗೂಡಿಸಿಕೊಂಡು ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಗಣಿಗಾರಿಕೆ ಪರವಾನಗಿಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಮುಂದೆ ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿ ಸಿ.ಹಿಂದಲಹಳ್ಳಿ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.
ಈ ಭಾಗದಲ್ಲಿ ನಾಲ್ಕು ಕಲ್ಲುಗಣಿಗಳು ಕಾರ್ಯನಿರ್ವಹಿಸುತ್ತಿದ್ದು, ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಈಗ ಮತ್ತೆ ನಾಲ್ಕು ಹೊಸ ಗಣಿಗಾರಿಕೆ ಪರವಾನಗಿ ನೀಡಲು ತಹಸೀಲ್ದಾರ್ ಮುಂದಾಗಿರುವುದು ಆತಂಕಕಾರಿ. ಸರ್ವೇ ನಂ.1ಪಿ1, 1ಪಿ2 ಮತ್ತು 104ರಲ್ಲಿ ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಹೇಳಿದರು.
ರಂಗೇನಹಳ್ಳಿ ಏತನೀರಾವರಿ ಯೋಜನೆ ಇದೇ ಜಾಗದಲ್ಲಿ ನಿರ್ಮಾಣವಾಗಬೇಕೆಂದು ಸರ್ಕಾರ ಹಾಗೂ ಆಗಿನ ಶಾಸಕ ಎ.ಮಂಜು ಭೂಮಿ ಪೂಜೆ ನಡೆಸಿದ್ದರು. ಈ ಯೋಜನೆಯಿಂದ 60 ರಿಂದ 70 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶವಿದ್ದು, ಈ ವಿಷಯ ತಿಳಿದಿದ್ದರೂ ಗಣಿಗಾರಿಕೆಗೆ ಅನುಮತಿ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
60-70 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಬಡ ರೈತರಿಗೆ ಸರ್ಕಾರದ ಆದೇಶ ಇದ್ದರೂ ಜಮೀನು ಮಂಜೂರು ಮಾಡದೆ, ಅದೇ ಸರ್ಕಾರಿ ಜಾಗವನ್ನು ಮತ್ತೆ ಕ್ರಷರ್ ಮತ್ತು ಗಣಿಗಾರಿಕೆಗಾಗಿ ಮಂಜೂರು ಮಾಡಲಾಗಿದೆ. ಇದೇ ಗಣಿಮಾಲೀಕರಿಗೆ ಸರ್ವೆ ನಂ.17ರಲ್ಲಿ 3 ಎಕರೆ, ಸರ್ವೆ ನಂ. 2ರಲ್ಲಿ 5 ಎಕರೆ ಹಾಗೂ ಸರ್ವೆ ನಂ. 102ರಲ್ಲಿ 4 ಎಕರೆ ಜಮೀನು ದುರಸ್ತಿ ಮಾಡಿಕೊಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಗಣಿಗಾರಿಕೆಯಿಂದ ಉಂಟಾಗುವ ಧೂಳು ಮತ್ತು ವಿಷಪೂರಿತ ನೀರಿನಿಂದ ಜಾನುವಾರುಗಳು ರೋಗಬಾಧಿತವಾಗಿ ಸಾವನ್ನಪ್ಪುತ್ತಿವೆ. ಪರಿಹಾರ ಕೇಳಲು ಹೋದ ರೈತರ ಮೇಲೆ ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ, ಸುಳ್ಳು ಪ್ರಕರಣಗಳು, ಅಟ್ರಾಸಿಟಿ ಕೇಸುಗಳು ಹಾಗೂ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಸಿ. ಹಿಂದಲಹಳ್ಳಿ, ತಾತನಹಳ್ಳಿ, ದೊಡ್ಡಕಾಡನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜಂಟಿ ಸರ್ವೆ ನಡೆಸಬೇಕು. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ನೀಡಬೇಕು. ಗಣಿಗಾರಿಕೆ ಪರವಾನಗಿಗಳನ್ನು ರದ್ದುಪಡಿಸಿ, ರೈತರ ಆಸ್ತಿ ಹಾಗೂ ಜೀವನವನ್ನು ರಕ್ಷಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಮಸ್ಥರಾದ ಬಾಗೇಗೌಡ, ವೀರಭದ್ರೇಗೌಡ, ನಿಂಗರಾಜು, ದೊಡ್ಡೇಗೌಡ, ರವಿಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net