ಪುರಸಭಾ ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಮಾತನಾಡಿ, ಘನತ್ಯಾಜ್ಯ ವಸ್ತುಗಳ ನಿರ್ವಹಣಾ ನಿಯಮ ಕಾಯ್ದೆ ಪಾಲನೆ ಕಡ್ಡಾಯವಾಗಿದ್ದು, 2026ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಇದುವರೆಗೆ ಘನತ್ಯಾಜ್ಯ ವಸ್ತುಗಳ ನಿರ್ವಹಣೆ-2016ರ ಪ್ರಕಾರ ಹಸಿ (ಅಡುಗೆ ಮನೆ ಹಾಗೂ ತರಕಾರಿ) ಹಾಗೂ ಒಣ ಕಸ (ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್, ಕಾಗದ, ಲೋಹ ಇತ್ಯಾದಿ) ವಿಂಗಡಣೆ ಮಾಡುವುದು ಕಡ್ಡಾಯವಾಗಿತ್ತು. ಇದೀಗ 2026ರ ನಿಯಮಗಳ ಪ್ರಕಾರ ಇವೆರಡರ ಜತೆಗೆ ಸ್ಯಾನಿಟರಿ ತ್ಯಾಜ್ಯ (ಡೈಪರ್, ಪ್ಯಾಡ್, ನಿರೋಧಗಳು) ಹಾಗೂ ವಿಶೇಷ ಕಾಳಜಿ ತ್ಯಾಜ್ಯ (ಗಾಜು, ಬಲ್ಬ್, ಬ್ಯಾಟರಿ, ಔಷಧ ಬಾಟಲ್, ಬಣ್ಣದ ಡಬ್ಬ, ಕ್ರಿಮಿನಾಶಕ ಡಬ್ಬ, ಬಳಸಿದ ಸೂಜಿ, ಸಿರೀಂಜ್ ಇತ್ಯಾದಿ) ವಸ್ತುಗಳನ್ನು ಕೂಡ ಪ್ರತ್ಯೇಕವಾಗಿ ನೀಡಬೇಕಿದೆ. ಪಟ್ಟಣದಲ್ಲಿ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಕಸ ಸಂಗ್ರಹಕಾರರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ನಂತರ ವಾರ್ಡ್‌ವಾರು, ಆಟೋ ಟಿಪ್ಪರ್‌ಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಇನ್ಮುಂದೆ ಹಸಿ-ಒಣ ತ್ಯಾಜ್ಯವನ್ನು ಪತ್ಯೇಕವಾಗಿ ಮೂಲದಲ್ಲಿಯೇ ವಿಂಗಡಿಸಿ ಕೊಡುವುದು ಕಡ್ಡಾಯವಾಗಲಿದೆ ಎಂದರು.