ರಸ್ತೆಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್

ಚಲಿಸುತ್ತಿದ್ದ ಖಾಸಗಿ ಬಸ್ ರಸ್ತೆಯುಲ್ಲೇ ಹೊತ್ತಿ ಉರಿದಿದೆ.
ಚಲಿಸುತ್ತಿದ್ದ ಖಾಸಗಿ ಬಸ್ ರಸ್ತೆಯುಲ್ಲೇ ಹೊತ್ತಿ ಉರಿದಿದೆ.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್
  • ಅದೃಷ್ಟವಶಾತ್ ಪ್ರಯಾಣಿಕರು ಪಾರು
  • ಶಾಂತಿ ಗ್ರಾಮದ ಬಳಿ ಘಟನೆ
ಹಾಸನ: ತಾಲೂಕಿನ ಶಾಂತಿಗ್ರಾಮ ಬಳಿ ಚಲಿಸುತ್ತಿದ್ದ ಖಾಸಗಿ ಬಸ್‌ನ ಟೈಯರ್ ಸ್ಫೋಟಗೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡು ಇಡೀ ಬಸ್ ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಮಕ್ಕಳು ಸೇರಿ ಒಟ್ಟು 36 ಜನ ಪ್ರಯಾಣಿಸುತ್ತಿದ್ದರು.
ವೇಗವಾಗಿ ಬಸ್ ಚಲಿಸುತ್ತಿದ್ದಾಗ ಶಾಂತಿ ಗ್ರಾಮದ ಬಳಿ ಶನಿವಾರ ಬೆಳಗಿನ ಜಾವ ಬಸ್‌ನ ಟೈಯರ್ ಸ್ಫೋಟಗೊಂಡಿದೆ. ಬಳಿಕ ಚಕ್ರದ ಘರ್ಷಣೆಯಿಂದ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಕೂಡಲೇ ಚಾಲಕ ರಸ್ತೆಯಲ್ಲೇ ಬಸ್ ನಿಲ್ಲಿಸಿ ಎಲ್ಲರೂ ಕೆಳಗಿಳಿಯುವಂತೆ ಸೂಚಿಸಿದ್ದಾನೆ. ಅದರಂತೆ ಎಲ್ಲ ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ. ಅದಾದ ಕೆಲವೇ ಹೊತ್ತಿನಲ್ಲಿ ಬೆಂಕಿ ಇಡೀ ಬಸ್‌ಗೆ ಆವರಿಸಿದೆ. ನೋಡ ನೋಡುತ್ತಿದ್ದಂತೆಯೇ ಬಸ್ ಸಂಪೂರ್ಣ ಸುಟ್ಟು ಕರುಕಲಾಗಿದೆ.
ಇದರೊಂದಿಗೆ ಹಲವು ಪ್ರಯಾಣಿಕರ ಮೊಬೈಲ್, ಲಗೇಜ್ ಬಸ್‌ನೊಳಗೇ ಸುಟ್ಟು ಹೋಗಿವೆ. ಬಸ್ ಅತಿವೇಗದಿಂದ ಚಲಿಸುತ್ತಿದ್ದುದೇ ಟೈಯರ್ ಸ್ಫೋಟಗೊಳ್ಳಲು ಕಾರಣ ಎನ್ನಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ಬಸ್ ಸಂಪೂರ್ಣ ಸುಟ್ಟು ಹೋಗಿತ್ತು. ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net