ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಯೋಜನೆಯಡಿ ನೀರು ಕೊಡುವುದಕ್ಕಾಗಿ ಬೇಲೂರಿನಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಕಾಮಗಾರಿ ವೀಕ್ಷಿಸುತ್ತಿರುವ ಗ್ರಾಪಂ ಮಾಜಿ ಸದಸ್ಯ ಮಂಜುನಾಥ್ ಮತ್ತು ಗ್ರಾಮಸ್ಥರು.
ಬೇಲೂರು: ರಾಜ್ಯ ಮತ್ತು ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮಕ್ಕೂ ಪೈಪ್‌ಲೈನ್ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರು ಕೊಡುವ ಉದ್ದೇಶದಿಂದ ಕಾಮಗಾರಿ ನಡೆಸುತ್ತಿದ್ದು, ಈ ಕಾಮಗಾರಿಯೂ ಕಳಪೆಯಿಂದ ಕೂಡಿದೆ ಎಂದು ತಾಲೂಕಿನ ನೆಟ್ಟೇಕೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್ ನೆಟ್ಟೆಕೆರೆ ಆರೋಪಿಸಿದರು.
ತಾಲೂಕಿನ ನೆಟ್ಟೇಕೆರೆ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಯೋಜನೆಯಡಿ ನೀರು ಕೊಡುವುದಕ್ಕಾಗಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಸರ್ಕಾರ ಸಾರ್ವಜನಿಕರ ಅನುಕೂಲಕ್ಕೆಂದು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಕೋಟ್ಯಂತರ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಿಸುತ್ತಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿಯ ಗುತ್ತಿಗೆ ಪಡೆದ ಗುತ್ತಿಗೆದಾರ ಮನಸ್ಸಿಗೆ ಬಂದಂತೆ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಟ್ಯಾಂಕ್‌ನಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡುವುದಕ್ಕೆ ಅಳವಡಿಸಿರುವ ಪೈಪ್‌ಗಳೂ ಸಹ ಕಳಪೆಯದ್ದಾಗಿದೆ. ನಲ್ಲಿ ಅಳವಡಿಸಲು ಮಾಡುತ್ತಿರುವ ಕೆಲಸಕ್ಕೆ ಮರಳನ್ನು ಹಾಕುವುದನ್ನು ಬಿಟ್ಟು ಡಸ್ಟ್ ಪುಡಿಯನ್ನು ಹಾಕುತ್ತಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಈ ಬಗ್ಗೆ ಕೆಲಸಗಾರರನ್ನು ಕೇಳಿದರೆ ಗುತ್ತಿಗೆದಾರರು ಹೇಳಿದಂತೆ ಕೆಲಸ ಮಾಡುತ್ತೇವೆ ಎನ್ನುತ್ತಾರೆ. ಆದರೆ ಸ್ಥಳಕ್ಕೆ ಗುತ್ತಿಗೆದಾರರಾಗಲಿ ಅಥವಾ ಅಧಿಕಾರಿಗಳಾಗಲಿ ಕಾಮಗಾರಿ ವೀಕ್ಷಿಸಿ ಉತ್ತಮ ಕೆಲಸ ಮಾಡಿಸಲು ಬರುತ್ತಿಲ್ಲ. ಇದರಿಂದ ಸರ್ಕಾರದ ಯೋಜನೆಗಳು ಹಳ್ಳ ಹಿಡಿಯಲು ಪ್ರಮುಖ ಕಾರಣವಾಗುತ್ತಿದೆ. ಆದ್ದರಿಂದ ನಮ್ಮ ಗ್ರಾಮ ಸೇರಿದಂತೆ ಇತರೆಡೆ ಮಾಡುತ್ತಿರುವ ಕಾಮಗಾರಿಯೂ ಕಳಪೆಯಿಂದ ಕೂಡಿರುವುದರಿಂದ ಕಾಮಗಾರಿ ಮಾಡದಂತೆ ನಿಲ್ಲಿಸಿದ್ದು, ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರ ಬರಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಕಚೇರಿ ಮುಂದೆ ಗ್ರಾಮಸ್ಥರೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.