ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಅವೈಜ್ಞಾನಿಕ

ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಅವೈಜ್ಞಾನಿಕ
  • ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ
ಹಾಸನ: ಮಳೆ ಇಲ್ಲದೆ ರಾಜ್ಯದಲ್ಲಿ ಜಲಾಶಯಗಳು ಭರ್ತಿ ಆಗಿಲ್ಲ. ರಾಜ್ಯ ಸರ್ಕಾರ ರೈತರಿಗೂ ನೀರು ಕೊಡಲಾಗದ ಸಂಕಷ್ಟದಲ್ಲಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ನೀರು ಹರಿಸಿ ಎಂದು ರಾಜ್ಯಕ್ಕೆ ಆದೇಶ ನೀಡುವುದು ಅವೈಜ್ಞಾನಿಕ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.]
ಹರದನಹಳ್ಳಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಕಳೆದ ವರ್ಷ ಮೂರು ಬಾರಿ ನಮ್ಮ ಜಲಾಶಯಗಳು ತುಂಬಿದವು. ಆ ಸಂದರ್ಭ ಕೆರೆಗಳನ್ನು ತುಂಬಿಸುವಂತಹ ಕೆಲಸವನ್ನು ನಾವು ಮುನ್ನೆಚ್ಚರಿಕೆಯಿಂದ ಮಾಡಬೇಕಾಗಿತ್ತು. ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಸಕಾಲಿಕ ಕ್ರಮ ವಹಿಸಿದ್ದರೆ ಕೆರೆಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಬಹುದಿತ್ತು. ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾದಾಗ ಕೆರೆಗಳಿಗೆ ನೀರು ತುಂಬಿಸದೆ ನೀರನ್ನು ಹೊರಗೆ ಬಿಟ್ಟರು. ತಮಿಳುನಾಡು ರಾಜ್ಯ ಕೂಡ ಮಳೆಯಿಂದ ದೊರೆತ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳದೆ ಸಮುದ್ರಕ್ಕೆ ಬಿಟ್ಟಿತು. ಅದರ ಫಲವನ್ನು ಈಗ ಅನುಭವಿಸುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪದೇಪದೆ ಇಂತ ಬಿಕ್ಕಟ್ಟು ಎದುರಾಗುತ್ತಿದ್ದರೂ ಎರಡು ರಾಜ್ಯಗಳು ಪಾಠ ಕಲಿಯುತ್ತಿಲ್ಲ. ಹೆಚ್ಚಿನ ಮಳೆಯಾದ ವರ್ಷದಲ್ಲಿ ನಾವು ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಅಂತಹ ಜವಾಬ್ದಾರಿಯನ್ನು ನಿರ್ವಹಿಸದೆ ನಾವು ಎಡವಿದ್ದೇವೆ ಎಂದರು.
ನಮಗೆ ಹತ್ತು ವರ್ಷದ ಸರಾಸರಿಯಲ್ಲಿ ಐದಾರು ವರ್ಷ ಉತ್ತಮ ಮಳೆಯಾಗುತ್ತದೆ. ಉಳಿದ ಮೂರು ನಾಲ್ಕು ವರ್ಷಗಳು ಈ ರೀತಿಯ ಬರ ಪರಿಸ್ಥಿತಿಯನ್ನು ಎದುರಿಸುತ್ತೇವೆ. ಈ ಹಿಂದಿನ ಅನುಭವಗಳು ಮತ್ತು ತಮಿಳುನಾಡಿನ ರೈತರ ಒತ್ತಡವನ್ನು ಈಗಾಗಲೇ ಗಮನಿಸಿದ್ದೇವೆ. ಮಳೆಯಾದ ಅವಧಿಯಲ್ಲಿ ನಾವು ಕೆರೆಗಳನ್ನು ತುಂಬಿಸುವುದನ್ನು ಮಾಡಬೇಕಾಗಿತ್ತು. ಇಂಥ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕು ಎಂದು ಹೇಳಿದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ವಾಸ್ತವವಾಗಿ ನೋಡುವುದಾದರೆ ಹಲವು ವರ್ಷಗಳಿಂದ ನಮ್ಮ ರಾಜ್ಯಕ್ಕೆ ನೀರಿನ ವಿಷಯದಲ್ಲಿ ಅನ್ಯಾಯವಾಗಿದೆ. ಕೇವಲ ಟೀಕೆ ಪ್ರತಿ ಟೀಕೆಗೆ ಆಸ್ಪದ ಕೊಡದೆ ಮುನ್ನೆಚ್ಚರಿಕೆಯಿಂದ ನೀರಿನ ಬಳಕೆಗೆ ಆದ್ಯತೆ ಕೊಡಬೇಕು. ನಮ್ಮ ರೈತರು ನಮ್ಮ ನಾಡಿನ ಜನತೆಗೆ ಅನನುಕೂಲ ಆಗದ ರೀತಿಯಲ್ಲಿ ಕ್ರಮ ವಹಿಸಬೇಕು. ಕಾನೂನು ಪರಿಧಿ ಒಳಗಡೆ ನಾವು ಯಾವ ಕ್ರಮ ವಹಿಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net