ಹಾಸನ ತಾಲೂಕಿನ ಶಿಲುಬೆ ಬೆಟ್ಟದಲ್ಲಿ ಮತ್ತೆ ಗಣಿಗಾರಿಕೆ ಆರಂಭಿಸಬಾರದು ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡಿದರು. ಆನೆಕೆರೆ ರವಿ, ಬಾಬು, ವಿಠಲ್ ಇತರರು ಇದ್ದರು.
ಹಾಸನ: ತಾಲೂಕಿನ ಶಿಲುಬೆ ಬೆಟ್ಟದ ಸರ್ವೆ ನಂ.151ರಲ್ಲಿ ಹಿಂದೆ ನಡೆದಿದ್ದ ಗಣಿಗಾರಿಕೆ ಸ್ಥಗಿತವಾಗಿದ್ದು, ಪುನರಾರಂಭದ ಪ್ರಯತ್ನಕ್ಕೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಗಣಿಗಾರಿಕೆಗೆ ಹೊಸದಾಗಿ ಲೈಸೆನ್ಸ್ ನೀಡಬಾರದೆಂದು ಪ್ರತಿಭಟನೆ ವೇಳೆ ಆಗ್ರಹಿಸಿವೆ. ಈ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಆನೆಕೆರೆ ರವಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿಲುಬೆ ಬೆಟ್ಟದಲ್ಲಿ ಹಿಂದೆ ನಡೆಯುತ್ತಿದ್ದ ಕ್ವಾರೆ ಮತ್ತು ಬ್ಲಾಸ್ಟಿಂಗ್ ಕಾರ್ಯಗಳಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ದೊಡ್ಡ ಮಟ್ಟದ ತೊಂದರೆ ಉಂಟಾಗುತ್ತಿತ್ತು. ಬ್ಲಾಸ್ಟಿಂಗ್ ಶಬ್ದದಿಂದ ಕಾಡು ಪ್ರಾಣಿಗಳು ಭಯಗೊಂಡು ಊರಿನೊಳಗೆ ನುಗ್ಗುತ್ತಿದ್ದವು. ರೈತರ ಬೆಳೆಗಳಿಗೂ ಹಾಗೂ ಮನೆಗಳಿಗೂ ಹಾನಿಯಾಗುತ್ತಿತ್ತು. ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಹೀಗಾಗಿ ಹಿಂದೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗಣಿಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು. ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿಗಳು ಗಣಿಗಾರಿಕೆ, ಬ್ಲಾಸ್ಟಿಂಗ್ ಕಾರ್ಯವನ್ನು ನಿಲ್ಲಿಸಲು ಕ್ರಮ ಕೈಗೊಂಡಿದ್ದರು. ಆದರೆ, ಇದೀಗ ಮತ್ತೆ ಗಣಿಗಾರಿಕೆ ಆರಂಭಿಸಲು ಅರ್ಜಿ ಸಲ್ಲಿಸಲಾಗಿದ್ದು, ಅನುಮತಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಮತ್ತೆ ಗಣಿಗಾರಿಕೆ ಆರಂಭಿಸಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಾಬು, ಜಿಲ್ಲಾ ಕಾರ್ಯದರ್ಶಿ ವಿಠಲ್, ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಗ್ರಾಮಸ್ಥರಾದ ದಾಕ್ಷಾಯಿಣಿ, ಜಯಂತಿ, ಶಶಿಕಲಾ, ಸರೋಜಾ, ಎಚ್.ಎಸ್. ರೇಣುಕಾ, ರೂಪಾ, ಲೋಲಾಕ್ಷ, ವನಜಾಕ್ಷಿ, ಸಂಜು ಇತರರು ಇದ್ದರು.