ಬಿಜೆಪಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಕಿಡಿ
ಹಾಸನ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಕೊಡಬಾರದ ಹಿಂಸೆ ಕೊಟ್ಟು, ಕೈ ಕಾಲು ಕಟ್ಟಿ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆಯೇ ಹೊರತು ನ್ಯಾಯಮಾರ್ಗದಿಂದ ಅಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಬಿಜೆಪಿ ನ್ಯಾಯ, ಧರ್ಮಯುತ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಇಡಿ, ಸಿಬಿಐ, ಐಟಿ, ಚುನಾವಣಾ ಆಯೋಗಗಳನ್ನು ದುರುಪಯೋಗ ಮಾಡಿಕೊಂಡಿದೆ. ನಾವು ಜನರ ತೀರ್ಮಾನವನ್ನು ಒಪ್ಪಲೇಬೇಕು, ಮತದಾರರ ತೀರ್ಪನ್ನು ಗೌರವಿಸಬೇಕಾಗುತ್ತದೆ ಎಂದರು.
ಕೇರಳದಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ಫಲಿತಾಂಶ ಬಂದಿರುವುದು ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ. ಎಲ್‌ಡಿಎಫ್ ಹಾಗೂ ಯುಡಿಎಫ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಅಲ್ಲಿನ ಜನರು ನಮಗೆ ಬೆಂಬಲಿಸಿರುವುದು ಖುಷಿಯ ವಿಚಾರವೆಂದರು.
ತಮಿಳುನಾಡಿನಲ್ಲಿ ಕಡಿಮೆ ಅಂತರದಲ್ಲಾದರೂ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆಂಬ ನಿರೀಕ್ಷೆ ಹುಸಿಯಾಗಿದೆ. ಈ ಬಾರಿ ಅಲ್ಲಿನ ಯುವ ಸಮುದಾಯ ಬದಲಾವಣೆ ಬಯಸಿದೆ. ರಾಜಕೀಯ ವಿಶ್ಲೇಷಣೆಗಿಂತ ಬದಲಾವಣೆಯನ್ನು ಅಲ್ಲಿನ ಜನರು ಬಯಸಿದ್ದಾರೆ. ಯುವಕರು ಹೊಸ ಅಧ್ಯಾಯ ಆರಂಭ ಮಾಡಿದ್ದಾರೆ. ಜನರ ಅಭಿಪ್ರಾಯವನ್ನು ಸಮಚಿತ್ತದಿಂದ ಸ್ವೀಕರಿಸುತ್ತೇವೆ ಎಂದರು.
ಶೃಂಗೇರಿಯಲ್ಲಿ ಷಡ್ಯಂತ್ರ:
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಮರು ಎಣಿಕೆಯಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಕಳೆದ ಬಾರಿ ಮತ ಎಣಿಕೆಯಾದ ನಂತರ ಕೆಲವು ಅಂಚೆ ಮತಪತ್ರಗಳನ್ನು ತಿದ್ದಿದ್ದಾರೆ. ಅಂಚೆ ಮತಗಳನ್ನು ಎಣಿಕೆ ಮಾಡಿ ಎಲ್ಲ ಪಕ್ಷದ ಏಜೆಂಟರು ಅದಕ್ಕೆ ಸಹಿ ಹಾಕಿರುತ್ತಾರೆ.
ಆದರೆ ನಮ್ಮ ಅಭ್ಯರ್ಥಿ ರಾಜೇಗೌಡರಿಗೆ ದೊರೆತ ಮತಗಳ ಕೆಳಗೆ ಬೇರೆ ಇಂಕ್ ಉಪಯೋಗಿಸಿ, ಬೇರೆ ಅಭ್ಯರ್ಥಿಗಳಿಗೂ ಅಲ್ಲಿ ಟಿಕ್ ಮಾರ್ಕ್ ಮಾಡಿ, ಆ ಮತಗಳನ್ನು ಅನರ್ಹವಾಗುವಂತೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದರು.
ಈ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ. ಸತ್ಯ ಹೊರಗೆ ಬರಬೇಕಾದರೆ ಪಾರದರ್ಶಕ ತನಿಖೆ ಆಗಬೇಕು. ಎಫ್‌ಎಸ್‌ಎಲ್‌ಗೆ ಕಳುಹಿಸಿ ಮೇಲೆ ಟಿಕ್ ಮಾಡಿರುವ ಇಂಕ್ ಹಾಗೂ ಕೆಳಗೆ ಟಿಕ್ ಮಾಡಿರುವ ಇಂಕ್ ಬೇರೆ ಬೇರೆಯೇ ಎಂಬುದನ್ನು ಪತ್ತೆ ಹಚ್ಚಬೇಕು. ಯಾರೋ ಕೆಲವು ಅಧಿಕಾರಿಗಳು ರಾಜೇಗೌಡರಿಗೆ ಬಂದಿದ್ದ ಮತಗಳನ್ನು ಒಂದೇ ಬಂಡಲ್‌ನಲ್ಲಿ ಇಟ್ಟಿದ್ದು, ಅದರಲ್ಲಿ ಬೇರೆ ಅಭ್ಯರ್ಥಿಗಳಿಗೆ ಟಿಕ್ ಒಂದೇ ಬಂಡಲ್‌ನಲ್ಲಿ ಆಗಿರುವುದು, ಬಂಡಲ್ ಎಣಿಕೆ ಆದಾಗ ಓಪನ್ ಆಗಿತ್ತು. ಇದೆಲ್ಲದರ ಬಗ್ಗೆ ತನಿಖೆಯಿಂದ ಸತ್ಯ ಹೊರಬರಬೇಕಾಗುತ್ತದೆ ಎಂದರು.