ಎನ್‌ಇಟಿ-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ಕಾರಣರಾಗಿರುವವರಿಗೆ ಶಿಕ್ಷೆ ವಿಧಿಸುವಂತೆ ಹಾಗೂ ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಹೇಮಾವತಿ ಪ್ರತಿಮೆ ಮುಂಭಾಗ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಅಧ್ಯಕ್ಷರಾದ ಚೈತ್ರಾ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಜಿಲ್ಲಾ ಉಪಾಧ್ಯಕ್ಷರಾದ ಅಭಿಷೇಕ್, ಶ್ರೇಷ್ಠ, ಶಿವು, ಅಭಿಷೇಕ್, ಪುರುಷೋತ್ತಮ್ ಇತರರಿದ್ದರು.
ಹಾಸನ: ಎನ್‌ಇಟಿ-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಸೋರಿಕೆಗೆ ಕಾರಣರಾಗಿರುವವರಿಗೆ ಶಿಕ್ಷೆ ವಿಧಿಸಿ, ಎನ್‌ಟಿಎಯನ್ನು ರದ್ದುಗೊಳಬೇಕು ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಹೇಮಾವತಿ ಪ್ರತಿಮೆ ಮುಂಭಾಗ ಬುಧವಾರ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.
ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಚೈತ್ರಾ ಮಾತನಾಡಿ, ಸರ್ಕಾರದ ನಿರ್ಲಕ್ಷೃಕ್ಕೆ ದೇಶದ ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿರುವ 23 ಲಕ್ಷ ವಿದ್ಯಾರ್ಥಿಗಳು ಜೂ.21ಕ್ಕೆ ಮತ್ತೊಮ್ಮೆ ಭವಿಷ್ಯದ ನಿರ್ಣಾಯಕ ಪರೀಕ್ಷೆ ಬರೆಯುವಂತಾಗಿದೆ ಎಂದರು.
ಪರೀಕ್ಷೆಗೂ ಮುನ್ನ ಟೆಲಿಗ್ರಾಂ ಗುಂಪುಗಳಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದರೂ ಪರೀಕ್ಷೆಯನ್ನು ಎನ್‌ಟಿಎ ನಡೆಸಿತು. ಎನ್‌ಟಿಎ ನಂಬಿಕೆ ದ್ರೋಹ ಎಸಗಿರುವುದು ಇದೇ ಮೊದಲಲ್ಲ. 2022, 2024ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದು ಬಯಲಿಗೆ ಬಂದಿತ್ತು. 2024ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಬಿಹಾರದ ಕೆಲವರನ್ನು ಬಂಧಿಸಿದರೂ ಸೋರಿಕೆ ಮೂಲವನ್ನು ಹಿಡಿಯಲು ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾದದ್ದಕ್ಕೆ ಈ ವರ್ಷದ ಸೋರಿಕೆ ಪುರಾವೆ. ಪ್ರತಿ ವರ್ಷವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದರೂ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ನಡೆಯುತ್ತಿದ್ದರೂ ಶಿಕ್ಷಣ ಸಚಿವರಿಂದ ಹಿಡಿದು, ಎನ್‌ಟಿಎ ಯಾರೊಬ್ಬರೂ ಇದರ ಜವಾಬ್ದಾರಿ ಹೊರಲು ಸಿದ್ಧರಿಲ್ಲ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿರುವುದು ಖಂಡನೀಯ ಎಂದರು.
ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಮಾತನಾಡಿ, ಮೆಡಿಕಲ್ ಕೋರ್ಸ್ ಕುರಿತಾಗಿ ಆಕರ್ಷಣೆ ಹೆಚ್ಚುತ್ತಾ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಸಿಇಟಿ ಎಂಬ ಪರೀಕ್ಷೆ ತರಲಾಯಿತು. ದಿನ ಕಳೆದಂತೆ ಬೇಡಿಕೆ ಹೆಚ್ಚುತ್ತಿದ್ದಂತೆ ಕೋಚಿಂಗ್ ಸಂಸ್ಥೆಗಳು ತಲೆ ಎತ್ತಲು ಪ್ರಾರಂಭಿಸಿದವು. ಅಲ್ಲದೆ ಕೋಟ್ಯಂತರ ರೂ. ತರುವಂತಹ ಎನ್‌ಆರ್‌ಐಗಳಿಗೂ ಪ್ರವೇಶ ಕಲ್ಪಿಸಲು ಆ ಮೂಲಕ ಮತ್ತಷ್ಟು ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಲು ನೀಟ್ ಎಂಬ ರಾಷ್ಟ್ರೀಯ ಪರೀಕ್ಷೆಯನ್ನು ಜರಿಗೊಳಿಸಲಾಯಿತು. ಇಂದು ನೀಟ್ ಕೋಚಿಂಗ್ ಸಂಸ್ಥೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿದವು, ಲಕ್ಷಾಂತರ ರೂಪಾಯಿಗಳ ಲೂಟಿ ಪ್ರಾರಂಭವಾಗಿದೆ. ಮಾನಸಿಕ ಒತ್ತಡಕ್ಕೆ ಒಳಗಾದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆತಂಕಕಾರಿ ಪರಿಸ್ಥಿತಿ ದಿನೇದಿನೆ ಉಲ್ಬಣಗೊಳ್ಳುತ್ತಿದೆ. ಇಂದು ರೈತರ ಆತ್ಮಹತ್ಯೆಗಿಂತಲೂ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿದೆ. ಇತ್ತೀಚಿನ ನೀಟ್ ಪರೀಕ್ಷೆ ರದ್ದತಿ ನಂತರ ಆರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಅಭಿಷೇಕ್, ಶ್ರೇಷ್ಠ, ಶಿವು, ಅಭಿಷೇಕ್, ಪುರುಷೋತ್ತಮ್ ಇತರರಿದ್ದರು.